ಈ ಗ್ರಾಮದಲ್ಲಿ ಎಸಿ ಕಾರು ಇದೆ, ಶೌಚಾಲಯ ಇಲ್ಲ!

Update: 2017-06-28 04:16 GMT

ಪಾಟ್ನಾ, ಜೂ.28: ದಕ್ಷಿಣ ಬಿಹಾರದ ನವಾಡ ಜಿಲ್ಲೆಯ ಈ ಗ್ರಾಮದ ವಿಶೇಷ ಗೊತ್ತೇ? ಈ ಗ್ರಾಮ ಬಯಲು ಶೌಚಾಲಯಕ್ಕೆ ಕುಖ್ಯಾತಿ. ಆದರೆ ಇದು ಬಡ ಗ್ರಾಮವಲ್ಲ. 200 ಕುಟುಂಬ ವಾಸವಿರುವ ಈ ಗ್ರಾಮದ ಬಹುತೇಕ ಮನೆಗಳಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಏರ್‌ ಕಂಡೀಶನರ್, ಗೀಸರ್ ಮಾತ್ರವಲ್ಲದೇ ಹವಾನಿಯಂತ್ರಿತ ಕಾರುಗಳೂ ಇವೆ. ಆದರೆ ಯಾವ ಮನೆಗಳಲ್ಲೂ ಶೌಚಾಲಯ ಇಲ್ಲ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನದ ಭರ್ಜರಿ ಪ್ರಚಾರದ ಹೊರತಾಗಿಯೂ, ಪ್ರತೀದಿನ ಬೆಳಗ್ಗೆ ತಮ್ಮ ಅರಮನೆಯಂಥ ಮನೆಗಳಿಂದ ಜನ ಬಯಲಿನತ್ತ ಹೆಜ್ಜೆ ಹಾಕುತ್ತಾರೆ. ಶೌಚ ಕಾರ್ಯ ಮುಗಿಸಿ ಮನೆಗಳಿಗೆ ವಾಪಸ್ಸಾಗುತ್ತಾರೆ. ಅಷ್ಟು ಮಾತ್ರವಲ್ಲದೇ ಗ್ರಾಮ ಪಂಚಾಯತೇ ಖುದ್ದಾಗಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬಯಲನ್ನು ನಿಗದಿಪಡಿಸಿದೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಬೆಳಗ್ಗೆಯಾಗುತ್ತಿದ್ದಂತೆ ಪ್ಲಾಸ್ಟಿಕ್ ತಂಬಿಗೆ ಹಿಡಿದುಕೊಂಡು ಹೋಗುವ ದೃಶ್ಯ ಇಲ್ಲಿ ಮಾಮೂಲಿ. ಈ ಗ್ರಾಮ ಇರುವುದು ಎಲ್ಲೋ ಗುಡ್ಡಗಾಡು ಪ್ರದೇಶದಲ್ಲಲ್ಲ. ಜಿಲ್ಲಾ ಕೇಂದ್ರದಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿ.

ಸರ್ಕಾರದ ಬಯಲು ಶೌಚಮುಕ್ತ ಪ್ರಯತ್ನದ ಬಗ್ಗೆ ಇವರಿಗೆ ಅರಿವಿಲ್ಲ ಎಂಬ ಅರ್ಥವಲ್ಲ. ಆದರೆ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳದಿರಲು ಮುಖ್ಯ ಕಾರಣ 29 ವರ್ಷಗಳಿಂದ ಬೆಳೆದು ಬಂದ ಮೂಢನಂಬಿಕೆ. ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಮನೆಯ ಯಜಮಾನ ತಕ್ಷಣ ಮರಣ ಹೊಂದುತ್ತಾನೆ ಎಂಬ ಮೂಢನಂಬಿಕೆಯಿಂದಾಗಿ ಜನ ಶೌಚಾಲಯ ನಿರ್ಮಿಸಿಕೊಳ್ಳಲು ಭಯಪಡುತ್ತಾರೆ.

1988ರಲ್ಲಿ ಗ್ರಾಮದ ಸಿದ್ದೇಶ್ವರ ಸಿಂಗ್ ಎಂಬುವವರು ಮನೆಯಲ್ಲಿ ಶೌಚಾಲಯ ಕಾಮಗಾರಿ ಆರಂಭಿಸಿದ್ದರು. ಆದರೆ ದಿಢೀರನೇ ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದರು ಎಂದು ಗ್ರಾಮದ ಶಿವದಾನಿ ಪ್ರಸಾದ್ ವರ್ಮಾ ಹೇಳುತ್ತಾರೆ. ಮತ್ತೆ ಕೆಲ ತಿಂಗಳ ಬಳಿಕ ಶ್ಯಾಮದೇವ್ ಸಿಂಗ್ ಎಂಬಾತ ಕೂಡಾ ಶೌಚಾಲಯ ಕಟ್ಟಿಸಲು ಆರಂಭಿಸಿದ ಬಳಿಕ ಮಗನನ್ನು ಕಳೆದುಕೊಂಡರು ಎನ್ನುವುದು ಗ್ರಾಮಸ್ಥರ ಹೇಳಿಕೆ.

"ಈ ಮೂಢನಂಬಿಕೆಯಿಂದ ನಿಜವಾಗಿ ಸಮಸ್ಯೆ ಎದುರಿಸುತ್ತಿರುವುದು ಮಹಿಳೆಯರು. ಮನೆಯಲ್ಲಿ ಕುಳಿತು ಟಿವಿಯಲ್ಲಿ ಸ್ವಚ್ಛ ಭಾರತ ಜಾಹೀರಾತು ನೋಡುತ್ತೇವೆ. ಬೆಳಗ್ಗೆ ನಸುಕಿಗೆ ಮುಂಚೆ, ಪುರುಷರು ಏಳುವ ಮೊದಲೇ ತಂಬಿಗೆ ಹಿಡಿದು ಹೊರಡುವುದು ಅನಿವಾರ್ಯ" ಎಂದು ಕಾಲೇಜು ವಿದ್ಯಾರ್ಥಿನಿ ಶ್ರುತಿ ಸುಮನ್ ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಗ್ರಾಮದ ಯುವಕರಿಗೆ ವಿವಾಹ ಭಾಗ್ಯವೂ ತಪ್ಪಿದೆ. ಗ್ರಾಮದ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಡಲು ಯಾರೂ ಮುಂದೆ ಬರುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News