×
Ad

ಜು.1 ರಂದು ಜೆಡಿಎಸ್ ಸಮಾವೇಶ

Update: 2017-06-28 18:36 IST

ಬೆಂಗಳೂರು, ಜೂ.28: ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ರಾಜ್ಯ ಮಟ್ಟದ ಜೆಡಿಎಸ್ ಸಮಾವೇಶವನ್ನು ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನತಾದಳದ ಹಿರಿಯ ಉಪಾಧ್ಯಕ್ಷ ಎಂ. ನಾಗರಾಜು ಅವರು ತಿಳಿಸಿದ್ದಾರೆ.
 
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜ ರಾಜಕೀಯ ಪ್ರಾತಿನಿಧ್ಯತೆಯಿಂದ ದೂರ ಉಳಿದಿದೆ. ಆದ್ದರಿಂದ ಸಮಾವೇಶದ ಮೂಲಕ ವಾಲ್ಮೀಕಿ ಸಮಾಜಕ್ಕೆ ಸೂಕ್ತ ಸೌಲಭ್ಯಗಳನ್ನು ಮತ್ತು ರಾಜಕೀಯ ಸ್ಥಾನಮಾನವನ್ನು ನೀಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುರು ಕಾಣಿಕೆಯ ರೀತಿಯಲ್ಲಿ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ಸಮಾವೇಶದಲ್ಲಿ ಸುಮಾರು 4 ಲಕ್ಷ ವಾಲ್ಮೀಕಿ ಸಮಾಜದ ಜನರು ಸೇರುವ ನಿರೀಕ್ಷೆಯಿದ್ದು, ರಾಜ್ಯ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ಹೊದಿಗೆರೆ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ.
ಎಸ್ಟಿ ಮೀಸಲಾತಿ ಅನುಪಾತವನ್ನು ಶೇ. 7ರಷ್ಟು ಸರಕಾರ ಹೆಚ್ಚಿಸಬೇಕು. ವಾಲ್ಮೀಕಿ ಸಮಾಜಕ್ಕೆ ಒಂದು ಪ್ರಾಧಿಕಾರ ರಚಿಸಬೇಕು ಎನ್ನುವುದು ಸೇರಿದಂತೆ, ಅನೇಕ ಮಹತ್ವದ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News