ಎಸ್‌ಐಟಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜೂ.28: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆಹೋಗಿದ್ದಾರೆ.
ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಗಗನ್ ಬಡೇರಿಯಾ ಅರ್ಜಿ ಸಂಬಂಧ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ನೋಟಿಸ್ ಜಾರಿಗೊಳಿಸಿ, ಜುಲೈ 10ಕ್ಕೆ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಾದಮಂಡಿಸಿದ ಹಿರಿಯ ವಕೀಲ ಎಂ.ಟಿ ನಾಣಯ್ಯ, ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನಮ್ಮ ಕಕ್ಷಿದಾರರಿಗೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿದೆ. ಈ ಹಿಂದೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾಗೂ, ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಸಂಧರ್ಭದಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ಹೀಗಾಗಿ ತಮ್ಮ ಕಕ್ಷಿದಾರರನ್ನೂ ವಿಚಾರಣೆ ನೆಪದಲ್ಲಿ ಬಂಧಿಸುವ ಸಾಧ್ಯತೆಯಿದ್ದು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿದರು.
ಈ ವಾದ ಆಲಿಸಿದ ನ್ಯಾಯಪೀಠ, ಈ ಅರ್ಜಿ ಸಂಬಂಧ ಮೊದಲು ಎಸ್‌ಐಟಿ ಆಕ್ಷೇಪಣೆ ಸಲ್ಲಿಸಲಿ, ಮುಂದಿನ ವಿಚಾರಣೆ ವೇಳೆ ಪರಿಶೀಲಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.