×
Ad

ಎಚ್‌ಡಿಕೆ ವಿರುದ್ದದ ಜಂತಕಲ್ ಮೈನಿಂಗ್ ಪ್ರಕರಣ: ಅರ್ಜಿ ವಿಚಾರಣೆ ಜುಲೈಗೆ ಮುಂದೂಡಿದ ಹೈಕೋರ್ಟ್

Update: 2017-06-28 20:18 IST

ಬೆಂಗಳೂರು, ಜೂ.28: ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ ಕೊನೆಯ ವಾರಕ್ಕೆ ಮುಂದೂಡಿದೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಆದರೆ, ಎಸ್‌ಐಟಿ ಅಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ, ಎಸ್‌ಐಟಿ ಅಧಿಕಾರಿಗಳ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ನ್ಯಾಯಪೀಠವು ಸೂಚಿಸಿದೆ.

ಎಸ್‌ಐಟಿ ಪರ ವಾದಿಸಿದ ವಕೀಲ ಪಿ.ಗೋವಿಂದ್ ಅವರು, ಲಿಖಿತ ಸಕಾರಣ ನೀಡಿ ಬಂಧಿಸಲು ಅವಕಾಶಗಳಿದ್ದು, ಪ್ರಕರಣದ ತನಿಖೆ ನಡೆಸುವ ಉದ್ದೇಶದಿಂದ ಕುಮಾರಸ್ವಾಮಿ ಅವರಿಗೆ ಜಾಮೀನು ನೀಡಬಾರದು ಎಂದು ಎಸ್‌ಐಟಿ ಅಧಿಕಾರಿಗಳು ಹೈಕೋರ್ಟ್‌ಗೆ ಮನವಿ ಮಾಡಿದರು. ಎಚ್‌ಡಿಕೆ ಪರ ವಾದಿಸಿದ ವಕೀಲ ಹಷ್ಮತ್ ಪಾಷಾ ಅವರು ಎಸ್‌ಐಟಿ ಕುಮಾರಸ್ವಾಮಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಇದು ಬಂಧನದ ಭೀತಿಯನ್ನು ಹೆಚ್ಚಿಸುತ್ತಿದೆ. ನೋಟಿಸ್‌ಗೆ ಸಕಾರಾತ್ಮಕವಾಗಿ ಕುಮಾರಸ್ವಾಮಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ, ಜಾಮೀನು ನೀಡಲೇಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಯಾಗಿದ್ದು, ಅವರನ್ನು ಈಗ ಬಂಧಿಸಿದರೆ ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ಹೊಡೆತ ಬೀಳುತ್ತದೆ. ಅಲ್ಲದೆ, ಈ ನಷ್ಟವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಹೀಗಾಗಿ, ಅವರನ್ನು ಬಂಧಿಸದಂತೆ ಸೂಚಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದೇ ವೇಳೆ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಎಫ್‌ಐಆರ್ ದಾಖಲಾಗಿವೆ. ಅದರಲ್ಲಿ 2 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಮೂರನೇ ಎಫ್‌ಐಆರ್ ದಾಖಲಿಸುವ ಅಗತ್ಯತೆ ಏನಿದೆ? ಈ ಬಗ್ಗೆ ವಿವರಣೆ ನೀಡುವಂತೆ ನ್ಯಾಯಪೀಠವು ಎಸ್‌ಐಟಿ ಪರ ವಕೀಲರಿಗೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಐಟಿ ಪರ ವಕೀಲರು, ಇದೇ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ವಿಚಾರಣೆ ನಡೆದ ನಂತರ ವಿವರಣೆ ನೀಡುತ್ತೇವೆ. ಅಲ್ಲಿಯವರೆಗೆ ಕಾಲಾವಕಾಶ ನೀಡುವಂತೆ ಎಸ್‌ಐಟಿ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News