ಸರಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ: ಡಾ.ಕೃಪಾ ಆಳ್ವ
ಧಾರವಾಡ, ಜೂ.28: ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಬಲಪಡಿಸಲು ಜುಲೈ ತಿಂಗಳ ಅಂತ್ಯದೊಳಗೆ ಎಲ್ಲ ಸರಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಹೇಳಿದ್ದಾರೆ.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸರಕಾರಿ ಶಾಲೆಗಳ ಬಲವರ್ಧನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರವು ಶಾಲೆಗಳ ಬಲವರ್ಧನೆಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಅದರ ಜೊತೆಗೆ, ಸಾರ್ವಜನಿಕರು, ಉದ್ದಿಮೆಗಳು, ಸಂಘ ಸಂಸ್ಥೆಗಳ ಸಹಕಾರವು ಅಗತ್ಯ ಎಂದರು.
ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಿಗೆ ಏರಿರುವ ಲಕ್ಷಾಂತರ ಜನ ರಾಜ್ಯದಲ್ಲಿದ್ದಾರೆ. ತಾವು ಕಲಿತ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಲು ಅವರು ಸಿದ್ಧರಿದ್ದಾರೆ. ಅವರನ್ನೆಲ್ಲ ಸೇರಿಸಿಕೊಂಡು ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಬೇಕು. ಶಾಲೆಗಳಿಗೆ ಕಟ್ಟಡ, ಶುದ್ಧ ಕುಡಿಯುವ ನೀರು, ಕಾಂಪೌಂಡ್, ಶೌಚಾಲಯ, ವಿದ್ಯುತ್ ಸಂಪರ್ಕ, ಉದ್ಯಾನವನಗಳನ್ನು ನಿರ್ಮಿಸಲು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕೃಪಾ ಆಳ್ವ ಹೇಳಿದರು.
ಜೊತೆಗೆ ಕಂಪ್ಯೂಟರ್, ಸ್ಮಾರ್ಟ್‌ಬೋರ್ಡ್, ಗ್ರಂಥಾಲಯ, ಆಟದ ಮೈದಾನ, ಕ್ರೀಡಾ ಸಾಮಗ್ರಿಗಳು, ವ್ಯಾಯಾಮ ಶಾಲೆ, ಫ್ಯಾನುಗಳು ಹಾಗೂ ವಿಜ್ಞಾನ ಪ್ರಯೋಗಾಲಯಗಳ ಸೌಲಭ್ಯವನ್ನು ಸರಕಾರಿ ಶಾಲೆಗಳಲ್ಲಿ ಹೊಂದಲು ಈ ಸಂಘಗಳ ಸಹಾಯ ಪಡೆಯಬೇಕು ಎಂದು ಅವರು ತಿಳಿಸಿದರು.
ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳು ದೊರೆತಾಗ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಿಸಬಹುದು. ಶಿಕ್ಷಣದ ಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯು ಆ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಶಿಕ್ಷಕರು ತಮ್ಮ ವೃತ್ತಿಯನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವುದರ ಜೊತೆಗೆ ಮಕ್ಕಳ ಜೀವನ ಮತ್ತು ಭವಿಷ್ಯವನ್ನು ರೂಪಿಸಬೇಕು ಎಂದು ಕೃಪಾ ಆಳ್ವ ಹೇಳಿದರು.
ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಏಕೈಕ ಪರಿಹಾರ ಮಾರ್ಗವಾಗಿದೆ. ಎಲ್ಲ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು, ಕನಿಷ್ಠ ಎರಡು ಶಾಲೆಗಳ ಒಬ್ಬರಂತೆ ದೈಹಿಕ ಶಿಕ್ಷಣ, ಸಂಗೀತ ಶಿಕ್ಷಕರನ್ನು ನೇಮಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯೆ ರೂಪ್ಲ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಟಿ.ಪಡಗಣ್ಣವರ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಓ, ಬಿಆರ್‌ಸಿ ಸಮನ್ವಯಾಧಿಕಾರಿಗಳು ಉಪಸ್ಥಿತರಿದ್ದರು.