‘ವಿಧವೆಯರ ಮನೆಯಲ್ಲಿ ವಾಸ್ತವ್ಯ’ : ಮಹಿಳಾ ಕಾಂಗ್ರೆಸ್ ನಿರ್ಧಾರ
ಬೆಂಗಳೂರು, ಜೂ.28: ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿರುವ ಮಹಿಳೆಯರು ಒಂದು ಗ್ರಾಮದ ವಿಧವೆಯ ಮನೆಯಲ್ಲಿ ವಾಸ್ತವ್ಯ ಹೂಡಿ, ಸಹ ಭೋಜನ ಸ್ವೀಕರಿಸುವುದು ಕಡ್ಡಾಯ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆಗೆ ಮಹಿಳಾ ಆಕಾಂಕ್ಷಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯ. ಒಂದು ಗ್ರಾಮದ ವಿಧವೆಯ ಮನೆಯಲ್ಲಿ ವಾಸ್ತವ್ಯ ಹೂಡುವುದು. ಸಹ ಭೋಜನ ಸ್ವೀಕರಿಸಿ ಅವರ ಕಷ್ಟ ಸುಖದಲ್ಲಿ ನಾವು ಭಾಗಿ ಅನ್ನೋ ಸಂದೇಶ ರವಾನೆ ಮಾಡಬೇಕಿದೆ ಎಂದು ಅವರು ಹೇಳಿದರು.
ನಮ್ಮಳಗಿನ ಇಂದಿರಾ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿ ಅವರ ಹಕ್ಕುಗಳು, ಅವಕಾಶಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ಸೆಳೆಯಲಾಗುವುದು ಎಂದು ಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೂ ಹೆಚ್ಚಿನ ಟಿಕೆಟ್ ನೀಡುವಂತೆ ವೇಣುಗೋಪಾಲ್ ಅವರಿಗೆ ಮನವಿ ಮಾಡಲಾಗಿದೆ. ಬಿಜೆಪಿ ಮುಖಂಡರು ದಲಿತರ ಮನೆಗಳಿಗೆ ಭೇಟಿ ನೀಡುತ್ತಿರುವ ವಿಚಾರದ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.