×
Ad

ಜುನೇದ್‌ ಕೊಲೆ ಪ್ರಕರಣ ಖಂಡಿಸಿ ಬೃಹತ್ ಮೌನ ಪ್ರತಿಭಟಣೆ

Update: 2017-06-28 21:30 IST

ಬೆಂಗಳೂರು, ಜೂ.28: ಇತ್ತೀಚಿಗೆ ಗೋಮಾಂಸದ ಹೆಸರಿನಲ್ಲಿ ದಿಲ್ಲಿ-ಹರಿಯಾಣ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಹಿಂದೂ ಪರಿವಾರದವರು ಜುನೇದ್‌ರನ್ನು ಕೊಲೆ ಮಾಡಿದ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ನಗರದ ಟೌನ್‌ಹಾಲ್ ಮುಂಭಾಗ ಎರಡು ಗಂಟೆಗಳ ಕಾಲ ಮೌನ ಪ್ರತಿಭಟನೆ ನಡೆಸಿದರು.

ಹಿಂದುತ್ವದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲೆ ಮಾಡುವುದನ್ನು ನಾವು ಸಹಿಸುವುದಿಲ್ಲ. ‘ನಾನು ಹಿಂದೂ’, ‘ನನ್ನ ಹೆಸರಿನಲ್ಲಿ ಕೊಲೆ ಮಾಡಲು ನಿನಗೇನು ಅಧಿಕಾರವಿದೆ’, ‘ಹಿಂದೂ ಧರ್ಮದ ಹೆಸರು ಹೇಳಿಕೊಂಡು ಕೊಲೆ ಮಾಡಿದರೆ ಅದರಲ್ಲಿ ನಾನು ಭಾಗಿಯಾಗುತ್ತೇನೆ, ನೀನು ಹಿಂದೂ ಹೆಸರಿನಲ್ಲಿ ಕೊಲೆ ಮಾಡುವುದನ್ನು ನಿಲ್ಲಿಸಬೇಕು’, ‘ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಬಾಯಿ ಬಾಯಿ’, ಹೀಗೆ ಘೋಷಣೆಗಳನ್ನು ಕೂಗುತ್ತಾ ಹಿಂದುತ್ವವಾದಿಗಳ ವಿರುದ್ಧ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಗೋ ರಕ್ಷಣೆ ಹೆಸರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ದಲಿತ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದ್ದಾರೆ. ದಲಿತರು ಬೀಫ್ ಇಟ್ಟುಕೊಂಡಿದ್ದಾರೆ ಎಂದು ಜನರನ್ನು ಪ್ರಚೋದಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ. ಆದರೆ, ಹಸು ಎಂಬುದು ಒಂದು ಪ್ರಾಣಿ. ಅದಕ್ಕೆ ಧಾರ್ಮಿಕ ಭಾವನೆ ತುಂಬಿ, ಅದನ್ನು ಆಹಾರವನ್ನಾಗಿಸಿಕೊಂಡಿರುವ ಸಮುದಾಯದ ಮೇಲೆ ದಾಳಿ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ, ಜಾತಿ ಹಾಗೂ ಆಹಾರದ ಹೆಸರಿನಲ್ಲಿ ಮುಸ್ಲಿಮರು ಸೇರಿದಂತೆ ದಲಿತರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸಂಘ ಪರಿವಾರದ ಸರಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಮದ ಮೇಲೆ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರ ನಡೆಸುತ್ತಿದೆ. ಮುಸ್ಲಿಮರು ತಮ್ಮ ಗುರುತು ಸಿಗದಂತೆ ಮರೆಯಲ್ಲಿ ಬದುಕಬೇಕಾದ ವಾತಾವರಣ ನಿರ್ಮಾಣವಾಗಿದೆ ಎಂದು ಲೇಖಕ ಶ್ರೀಪಾದ್‌ಭಟ್ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ದನದ ಹೆಸರಿನಲ್ಲಿ, ಗೋ ಮಾತೆಯ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಸಾಂಸ್ಕೃತಿಕ ರಾಜಕಾರಣ ನಡೆಸುತ್ತಿದೆ. ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಮುದಾಯದ ಸಹಭಾಗಿತ್ವವಿಲ್ಲದೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರ ಕಾನೂನುಗಳನ್ನು ತರುತ್ತಿದೆ. ಇದು ಸರಿಯಾದ ಕ್ರಮವಲ್ಲ. ಎಲ್ಲರ ಸಹಭಾಗಿತ್ವದಲ್ಲಿ ಜನರನ್ನು ರಕ್ಷಣೆ ಮಾಡುವ ಕಾನೂನು ತರಲು ಕೇಂದ್ರ ಮುಂದಾಗಬೇಕು ಎಂದು ವಿದ್ಯಾರ್ಥಿ ಮುಖಂಡರಾದ ಜ್ಯೋತಿ ಅನಂತ ಸುಬ್ಬಾರಾವ್ ಪತ್ರಿಕೆಗೆ ತಿಳಿಸಿದರು.

ನಾನು ಏನು ತಿನ್ನಬೇಕು, ನಾವು ಹೇಗೆ ಬಟ್ಟೆ ಹಾಕಿಕೊಳ್ಳಬೇಕು, ನಾವು ಹೇಗೆ ಬದುಕಬೇಕು ಎಂದು ನಿರ್ಧಾರ ಮಾಡಲು ನೀವು ಯಾರು. ನಾವು ಹೇಗೆ ಬದುಕಬೇಕು ಎಂಬುದನ್ನು ನಾವೇ ತೀರ್ಮಾನ ಮಾಡುತ್ತೇವೆ. ನಮ್ಮ ಮೇಲೆ ಅನಗತ್ಯವಾಗಿ ದಾಳಿ ಮಾಡಲು ಮುಂದಾದರೆ ಸುಮ್ಮನಿರುವುದಿಲ್ಲ. ನಾವು ನೋಡುವಷ್ಟು ನೋಡುತ್ತೇವೆ. ಸರಕಾರ ಇದನ್ನು ನಿರ್ಲಕ್ಷಿಸಿದರೆ ಕಠಿಣ ಹೋರಾಟಕ್ಕೆ ಮುಂದಾಗಬೇಕಾಗುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಸದ್ದಾಂ ಬೇಗಂ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್, ಅಂಕಣಕಾರ ರಾಮಚಂದ್ರ ಗುಹಾ, ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್, ಚಿತ್ರಕಲಾವಿದ ಎಸ್.ಜಿ.ವಾಸುದೇವ್, ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ, ಪತ್ರಕರ್ತ ನವೀನ್ ಸೂರಿಂಜೆ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಲೇಖಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News