×
Ad

ಹಾಸ್ಟೆಲ್ ನೌಕರರ ಅನಿರ್ದಿಷ್ಟಾವಧಿ ಧರಣಿ 3ನೇ ದಿನಕ್ಕೆ

Update: 2017-06-28 21:34 IST

ಬೆಂಗಳೂರು, ಜೂ. 28: ಸರಕಾರಿ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆಯ ನೂರಾರು ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೆ ದಿನಕ್ಕೆ ಮುಂದುವರೆದಿದೆ. ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ 300 ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ನೌಕರರು ರಾತ್ರಿಯಿಡೀ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಲಗಿದ್ದರು. ಅನಂತರ ಬೆಳಗ್ಗೆ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿಗೆ ಅವಕಾಶ ಕಲ್ಪಿಸಲಾಗಿದೆ.

ನೌಕರರನ್ನು ಖಾಯಂ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸುವ ಕುರಿತು ಸರಕಾರ ಲಿಖಿತ ಭರವಸೆ ನೀಡುವವರೆಗೂ ಧರಣಿ ಮುಂದುವರಿಯುತ್ತದೆ. ಆದರೆ, ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಧರಣಿಯ ಮೊದಲನೆ ದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಸೇರಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಆದರೆ, ಸಭೆಯಲ್ಲಿ ನಮ್ಮ ಬೇಡಿಕೆಗಳು ಈಡೇರಿಸುವ ಸಂಬಂಧ ಯಾವುದೇ ಪರಿಣಾಮಕಾರಿಯಾದ ತೀರ್ಮಾನ ಕೈಗೊಂಡಿಲ್ಲ ಎಂದು ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.

ಸರಕಾರದ ಅಧಿಕಾರಿಗಳು ಸಭೆಯ ನಂತರ ನೀಡಿರುವ ಲಿಖಿತ ಆದೇಶದಲ್ಲಿ ಸಭೆಯಲ್ಲಿ ಕೊಟ್ಟ ಯಾವುದೇ ಭರವಸೆಯನ್ನು ಉಲ್ಲೇಖಿಸಿಲ್ಲ. ಹೀಗಾಗಿ ಈ ಆದೇಶ ಸಮಾಧಾನಕರ ವಾಗಿಲ್ಲ. ಆದುದರಿಂದ ಧರಣಿ ಮುಂದುವರಿಯಲಿದ್ದು, ಸರಕಾರದ ಸಂಬಂಧಪಟ್ಟ ಮಂತ್ರಿಗಳು ಲಿಖಿತ ಭರವಸೆ ನೀಡುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಅವರು ತಿಳಿಸಿದರು.

ಭಾಗಿಯಾದವರಿಗೆ ಬೆದರಿಕೆ ನೋಟಿಸ್: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಸ್ಟೆಲ್ ನೌಕರರು ಹಗಲು-ರಾತ್ರಿಯಲ್ಲಿ ಮಳೆಯನ್ನು ಲೆಕ್ಕಿಸದೆ ಧರಣಿ ನಡೆಸುತ್ತಿದ್ದಾರೆ. ಆದರೆ, ಮುಷ್ಕರದಲ್ಲಿ ಎರಡು ದಿನಗಳಿಂದ ಭಾಗಿಯಾದವರಿಗೆ ಸರಕಾರದಿಂದ ಗೈರು ಹಾಜರಿ ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಧರಣಿಯಲ್ಲಿ ಭಾಗಿಯಾದವರಿಗೆ ಭಯ ಹುಟ್ಟಿಸುವ ಮೂಲಕ ಹೋರಾಟವನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ನಿತ್ಯಾನಂದಸ್ವಾಮಿ ತೀವ್ರವಾಗಿ ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News