ಪೇಜಾವರ ಶ್ರೀಗಳ ಸೋಗಲಾಡಿತನದ ಬಗ್ಗೆ ಎಚ್ಚರವಿರಲಿ: ದಿನೇಶ್ ಅಮಿನ್ ಮಟ್ಟು

Update: 2017-06-29 16:46 GMT

ಬೆಂಗಳೂರು, ಜೂ.29: ಬಾಬರೀ ಮಸೀದಿ ಧ್ವಂಸ ಪ್ರಕರಣದ ಪ್ರಮುಖರಲ್ಲಿ ಒಬ್ಬರಾಗಿರುವ ಉಡುಪಿ ಮಠದ ಪೇಜಾವರ ಶ್ರೀಗಳ ಸೋಗಲಾಡಿತನದ ಕುರಿತು ಪ್ರಗತಿಪರರು ಎಚ್ಚರ ವಹಿಸಿದರೆ ಒಳಿತೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಎಚ್ಚರಿಸಿದ್ದಾರೆ.

ಗುರುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯತೆ-ಭಾರತವೆಂಬ ಪರಿಕಲ್ಪನೆ’ ವಿಚಾರ ಸಂಕಿರಣದ ಮೊದಲ ಗೋಷ್ಟಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಮತೀಯವಾದಿಗಳು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳುವಲ್ಲಿ ಜಾಣರಾಗಿದ್ದಾರೆ. ಈ ಕುರಿತು ಎಚ್ಚರ ತಪ್ಪಿ ಅವರನ್ನು ನಂಬಿದರೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದರು.

ಸಂಘಪರಿವಾರ ತನ್ನ ಅನುಕೂಲಕ್ಕೆ ತಕ್ಕಂತೆ ಬಿಜೆಪಿಯ ಪ್ರಮುಖ ನಾಯಕರನ್ನು ಹೇಗೆ ಬೇಕಾದರು ಬಿಂಬಿಸುತ್ತದೆ. ಹೀಗಾಗಿ ಬಿಜೆಪಿ ನಾಯಕರ ಸೋಗಲಾಡಿತನವನ್ನು ಸರಿಯಾಗಿ ಗ್ರಹಿಸದಿದ್ದರೆ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ. ಆ ರೀತಿಯಲ್ಲಿಯೇ ಪೇಜಾವರ ಶ್ರೀಗಳ ವರ್ತನೆಯನ್ನು ಗ್ರಹಿಸಬೇಕಾಗುತ್ತದೆ. ಜಾತಿ ನಿರ್ಮೂಲನೆ ಬಗ್ಗೆ ಎಂದೂ ಮಾತನಾಡದ ಪೇಜಾವರರನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಹುಸಂಸ್ಕೃತಿಯ ನೆಲೆಯಾಗಿರುವ ಭಾರತದಲ್ಲಿ ರಾಷ್ಟ್ರೀಯತೆಯ ಕಲ್ಪನೆ ಹುಟ್ಟಿರಲಿಲ್ಲ. 1924ರಲ್ಲಿ ಆರೆಸ್ಸೆಸ್ ಸ್ಥಾಪನೆಯಾದ ನಂತರ ಗೋಳ್ವಾಲ್ಕರ್ ಹಾಗೂ ಸಾವರ್ಕರ್ ತಮ್ಮ ಬ್ರಾಹ್ಮಣ ಸಿದ್ಧಾಂತವನ್ನು ಹಿಂದೂ ಧರ್ಮದ ಹೆಸರಿನಲ್ಲಿ ರಾಷ್ಟ್ರೀಯತೆಯ ಕಲ್ಪನೆಯನ್ನು ಬಿತ್ತಲು ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೂ ಕೋಮುವಾದಿಗಳು ರಾಷ್ಟ್ರೀಯತೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ಹಿಂಸಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಸಂಘಪರಿವಾರ ಪ್ರತಿಬಿಂಬಿಸುವ ಜನವಿರೋಧಿ ರಾಷ್ಟ್ರೀಯವಾದಕ್ಕೂ ವಿವೇಕಾನಂದ ಚಿಂತನೆಯ ಸಕಲ ಜಾತಿ, ಧರ್ಮಗಳನ್ನು ಒಳಗೊಳ್ಳುವ ರಾಷ್ಟ್ರೀಯವಾದಕ್ಕೂ ನಡುವೆ ಸಾಕಷ್ಟು ಅಂತರವಿದೆ. ಆದರೆ, ಸಂಘಪರಿವಾರ ವಿವೇಕಾನಂದರ ಪ್ರತಿಮೆಯನ್ನು ಮಾತ್ರ ಪಡೆದು, ಅದಕ್ಕೆ ಬ್ರಾಹ್ಮಣ ಧರ್ಮದ ರಾಷ್ಟ್ರೀಯತೆಯನ್ನು ಲೇಪಿಸಿ, ಹುಸಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಗತಿಪರರು ಬುದ್ಧ, ಬಸವಣ್ಣ, ವಿವೇಕಾನಂದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಜನಪರವಾದ ರಾಷ್ಟ್ರೀಯತೆಗಳನ್ನು ಮುನ್ನೆಲೆಗೆ ತರಬೇಕಿದೆ ಎಂದು ಅವರು ಹೇಳಿದರು.

'ವಾರ್ತಾಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ರಾಷ್ಟ್ರೀಯತೆಯನ್ನು ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಹಾಗೂ ಗಡಿ ರೇಖೆಗಳಿಂದ ಬಂಧಿಸಿಡಲು ಸಾಧ್ಯವಿಲ್ಲ. ದೇಶ ಹಾಗೂ ರಾಜ್ಯಗಳಿಗೆ ಗಡಿಗಳನ್ನು ನಿರ್ಮಿಸುವ ಮೂಲಕ ಪ್ರೀತಿ ಹಾಗೂ ದ್ವೇಷವನ್ನು ಕೃತಕವಾಗಿ ಉತ್ಪಾದಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಭಾರತದಲ್ಲಿ ಗಡಿಯಾಚೆಗಿನ ಆತಂಕಕ್ಕಿಂತ ದೇಶದೊಳಗೆ ಧರ್ಮ ಹಾಗೂ ಗೋ ಹತ್ಯೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಗಳಿಂದ ಇಲ್ಲಿನ ಸಾಮಾನ್ಯ ಜನತೆ ಭಯಭೀತರಾಗಿದ್ದಾರೆ. ಹೀಗಾಗಿ ನಮಗೆ ಎಂತಹ ರಾಷ್ಟ್ರೀಯತೆ ಬೇಕು ಎಂಬುದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ನೆಲೆಸಿರುವ ವಿವಿಧ ಧರ್ಮ, ಜಾತಿ ಹಾಗೂ ಸಂಸ್ಕೃತಿಯನ್ನು ಆಚರಿಸುವ ಜನತೆ ಯಾವುದೇ ಭಯವಿಲ್ಲದೆ ಸ್ವಚ್ಛಂದವಾಗಿ ಬದುಕುವಂತಹ ವಾತಾವರಣ ನಿರ್ಮಿಸುವುದೇ ನಿಜವಾದ ರಾಷ್ಟ್ರೀಯತೆಯಾಗಿದೆ. ಇಂತಹ ಸ್ಥಿತಿ ಸಾಧಿಸುವುದೇ ದೇಶದ ಬಗೆಗಿನ ನಿಜವಾದ ಕಾಳಜಿಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ದೇಶದಲ್ಲಿ ಶ್ರೀಮಂತ-ಬಡವರ ಅಂತರ ದಿನೇ ದಿನೇ ಹಿಗ್ಗುತ್ತಿದೆ. ಶೇ.1ರಷ್ಟಿರುವ ಶ್ರೀಮಂತರ ಬಳಿ ದೇಶದ ಶೇ.53ರಷ್ಟು ಸಂಪತ್ತು ಕೊಳೆಯುತ್ತಿದೆ. ಈ ರೀತಿಯ ಸಂಪತ್ತಿನ ಅಸಮಾನ ಹಂಚಿಕೆ ಕಾನೂನು ಬಾಹಿರವಾಗಿದ್ದರೂ ಅದನ್ನು ನಿಭಾಯಿಸುವಷ್ಟು ಶೇ.1ರಷ್ಟಿರುವ ಬಂಡವಾಳ ಶಾಹಿಗಳಿಗೆ ಸಾಧ್ಯವಾಗಿರುವಾಗ, ತಮ್ಮ ಪಾಲಿನ ಸಂಪತ್ತನ್ನು ಪಡೆಯಲು ಬಡವರನ್ನು ಸಮರ್ಥಗೊಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಗೌರಮ್ಮ, ಲಕ್ಷ್ಮಿ ಸೇರಿದಂತೆ ಸಂಟನೆಯ ಹಲವು ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News