ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ಸೌಲಭ್ಯ ಕಲ್ಪಿಸಿ: ಡಿ.ವಿ.ಸದಾನಂದಗೌಡ

Update: 2017-06-30 13:14 GMT

ಬೆಂಗಳೂರು, ಜೂ.30: ರಾಷ್ಟ್ರೀಕೃತ ಬ್ಯಾಂಕುಗಳು ಮುದ್ರಾ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಕೇಂದ್ರ ಸಾಂಖ್ಯಿಕ ಮತ್ತು ವ್ಯವಹಾರಗಳ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸೂಚನೆ ನೀಡಿದ್ದಾರೆ.

ಶುಕ್ರವಾರ ನಗರದ ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ ಕಾರ್ಯಕ್ಷಮತಾ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿರುವ ಬಡವರಲ್ಲಿ ಶೇ.40ರಷ್ಟು ಜನ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಹಣದ ನೆರವಿನ ಅಗತ್ಯವಿದೆ. ಇವರ ಜೀವನವನ್ನು ಸುಧಾರಿಸಲು ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯೊಳಗೆ ಕನಿಷ್ಠವಾದರೂ 200 ಜನರಿಗೆ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದರು.

ರಾಜ್ಯದ ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸಲು ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮಸಭೆಯಲ್ಲಿ ಈ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಇದರ ಜೊತೆಗೆ ನರೇಗಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸೂಚಿಸಬೇಕು ಎಂದು ತಿಳಿಸಿದರು.
ಬ್ಯಾಂಕಿಂಗ್ ವಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ದೊಡ್ಡ ಜಾಲವನ್ನು ಹೊಂದಿದೆ. ಆದರೆ, ಈ ಸಭೆಗೆ ಬ್ಯಾಂಕಿನ ಅಧಿಕಾರಿಗಳು ಗೈರು ಆಗಿರುವುದು ಖಂಡನೀಯ. ಅಧಿಕಾರಿಗಳ ಗೈರಿನ ಕುರಿತು ಆರ್‌ಬಿಐ ಹಾಗೂ ಹಣಕಾಸು ಸಚಿವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗುರುದತ್, ನಬಾರ್ಡ್ ಎಜಿಎಂ ಪ್ರಭಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುಶ್ರೀ ಸೇರಿದಂತೆ ಇತರರು ಇದ್ದರು.

ಸಚಿವರ ಮೆಟ್ರೋ ಪ್ರಯಾಣ
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಸಭಾಂಗಣಕ್ಕೆ ತಲುಪಲು ನಗರದ ಮೈಸೂರು ಗಂಧದ ಕಾರ್ಖಾನೆ ನಿಲ್ದಾಣದಿಂದ ಬನಶಂಕರಿ ನಿಲ್ದಾಣದವರೆಗೂ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದರು. ಈ ವೇಳೆ ಮೆಟ್ರೋ ಪ್ರಯಾಣಿಕರೊಂದಿಗೆ ಬೆರೆತು, ಸಾಮಾನ್ಯರಂತೆ ಮಾತುಕತೆ ನಡೆಸಿ ಪ್ರಯಾಣದ ಅನುಭವವನ್ನು ಹಂಚಿಕೊಂಡರು. ಇದೇ ವೇಳೆ ಪ್ರಯಾಣಿಕರು ಸದಾನಂದಗೌಡರ ಜೊತೆ ಸೇಲ್ಫಿ ಕ್ಲಿಕಿಸಿಕೊಳ್ಳಲು ಮುಂದಾಗಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News