ಬಿತ್ತನೆ ಪ್ರಮಾಣದಲ್ಲಿ ಭಾರೀ ಇಳಿಕೆ: ಕೃಷ್ಣ ಬೈರೇಗೌಡ

Update: 2017-06-30 13:22 GMT

ಬೆಂಗಳೂರು, ಜೂ. 30: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದವರೆಗೂ 16.86ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 10ಲಕ್ಷ ಹೆಕ್ಟೇರ್ ವಿಸ್ತೀರ್ಣದ ಬಿತ್ತನೆ ಕಡಿಮೆಯಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಇದೇ ವೇಳೆಗೆ ಒಟ್ಟು 26.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಸರಾಸರಿ ನೋಡಿದರೆ ಬಿತ್ತನೆ ಸದ್ಯಕ್ಕೆ ಉತ್ತಮವಾಗಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಜೂನ್ ತಿಂಗಳಿನಲ್ಲಿ ರಾಜ್ಯದ 98 ತಾಲೂಕುಗಳಲ್ಲಿಯೂ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇದೆ ಎಂದ ಅವರು, ಹವಾಮಾನ ಇಲಾಖೆ ಮುನ್ಸೂಚನೆ ಅಷ್ಟೇನೂ ಸರಿಯಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಸಿರಿಧಾನ್ಯ ಬೆಳೆಗಳಿಗೆ ವಿಶೇಷ ಪ್ಯಾಕೇಜ್: ರಾಗಿ, ಬಿಳಿಜೋಳ, ಸಜ್ಜೆ ಸೇರಿ ಸಿರಿಧಾನ್ಯಗಳ ಬೆಳೆಗಳನ್ನು ಉತ್ತೇಜಿಸಲು ಪ್ರತಿ ಹೆಕ್ಟೇರ್‌ಗೆ 2,500 ರೂ.ನಗದು ರೂಪದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು. ಈ ಯೋಜನೆಗೆ 34.87 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಿದರು.
ಸಿರಿಧ್ಯಾನಗಳ ದೇಹದ ಆರೋಗ್ಯಕ್ಕೆ ಒಳ್ಳೆಯದು. ರಾಗಿ, ಜೋಳ, ಸಜ್ಜೆ ಪ್ರಸ್ತುತ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಅದನ್ನು 18 ಅಥವಾ 19 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸುವ ಗುರಿ ಇದೆ. ಅದೇ ರೀತಿಯಲ್ಲಿ ನವಣೆ, ಸಾಮೆ, ಹಾರಕ ಸೇರಿದಂತೆ ಇತರೆ ಸಿರಿಧಾನ್ಯ ಬೆಳೆ ಪ್ರವೇಶವನ್ನು 20 ಸಾವಿರದಿಂದ 40 ಸಾವಿರ ಹೆಕ್ಟೇರ್‌ಗೆ ಹೆಚ್ಚಿಸಲಾಗುವುದು ಎಂದರು.

ಸಿರಿಧಾನ್ಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ರಾಜ್ಯದಲ್ಲಿ 20ರಿಂದ 100 ಹೆಕ್ಟೇರ್ ಪ್ರದೇಶಗಳ ಗ್ರಾಮ ಗುಚ್ಚ(ಕ್ಲಸ್ಟರ್)ಗಳನ್ನು ರಚಿಸಿದ್ದು, ಒಟ್ಟು 392ರೈತ ಗುಂಪುಗಳಿವೆ. ಇಲಾಖೆ ಹೊಸ ಯೋಜನೆಗಳ ಮೂಲಕ ಸಿರಿಧಾನ್ಯಗಳ ಉತ್ಪಾದನಾ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News