ಪತ್ರಕರ್ತರಿಗೆ ಕಾರಾಗೃಹ ಶಿಕ್ಷೆ: ಕಪ್ಪು ಪಟ್ಟಿ ಧರಿಸಿ ನಾಳೆ ಪ್ರತಿಭಟನೆ

Update: 2017-06-30 13:28 GMT

ಬೆಂಗಳೂರು, ಜೂ. 30: ಪತ್ರಕರ್ತರಿಬ್ಬರಿಗೆ ಕಾರಾಗೃಹ ಶಿಕ್ಷೆ ವಿಧಿಸಿದ ವಿಧಾನಸಭೆ ತೀರ್ಮಾನವನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಜುಲೈ 1ರ ಪತ್ರಿಕಾ ದಿನಾಚರಣೆ ಸಂದರ್ಭದಲ್ಲೆ ಕಪ್ಪು ಪಟ್ಟಿ ಧರಿಸಿ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಶುಕ್ರವಾರ ಇಲ್ಲಿನ ಕಂದಾಯ ಭವನದಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್, ಬೆಂಗಳೂರು ವರದಿಗಾರರ ಕೂಟ, ಟಿವಿ ಜರ್ನಲಿಸ್ಟ್ ಅಸೋಸಿಯೇಷನ್, ಹಿರಿಯ ಪತ್ರಕರ್ತರ ವೇದಿಕೆ ಸೇರಿ ಮಾಧ್ಯಮ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿಧಾನಸಭೆ ಹಕ್ಕುಚ್ಯುತಿ ಸಮಿತಿ ಶಿಫಾರಸಿನನ್ವಯ ಪತ್ರಕರ್ತರಿಬ್ಬರಿಗೆ 1ವರ್ಷ ಕಾರಾಗೃಹ ಶಿಕ್ಷ, 10 ಸಾವಿರ ರೂ.ದಂಡ ವಿಧಿಸಿರುವುದು ರಾಜ್ಯದ ಇತಿಹಾಸದಲ್ಲೆ ಇದೇ ಮೊದಲು. ಇದು ಜಾರಿಯಾದರೆ ಮುಂಬರುವ ದಿನಗಳಲ್ಲಿ ಜನ ಪ್ರತಿನಿಧಿಗಳು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಪತ್ರಕರ್ತರಿಬ್ಬರಿಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿರುವ ಕ್ರಮ ಸರಿಯಲ್ಲ. ಆದುದರಿಂದ ಈ ಬಗ್ಗೆ ಮರು ಪರಿಶೀಲನೆ ಅಗತ್ಯ. ಮುಂದಿನ ದಿನಗಳಲ್ಲಿ ಪತ್ರಕರ್ತರು ಎದುರಿಸುವ ಆತಂಕವನ್ನು ನಿವಾರಿಸಲು ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ಸಂಚಾಲನ ಸಮಿತಿಯನ್ನು ರಚಿಸಬೇಕೆಂದು ಆಗ್ರಹಿಸಲು ನಿರ್ಧರಿಸಲಾಗಿದೆ.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಉಪಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ವೆಂಕಟೇಶ್, ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ರವೀಶ್, ಯೂಸಫ್ ಪಟೇಲ್, ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News