ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಜು.10 ರಂದು ಬೃಹತ್ ಸಮಾವೇಶ
ಬೆಂಗಳೂರು, ಜೂ.30: ರೈತರು, ದಲಿತರು, ಕೃಷಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ಹಾಗೂ ಕೃಷಿಕರ ಪರವಾದ ಬೆಳೆ ವಿಮೆ ನೀತಿಗಾಗಿ ಆಗ್ರಹಿಸಿ ದಲಿತ, ರೈತ ಸಂಘಟನೆಗಳ ಜಂಟಿಯಾಗಿ ಜು.10 ರಂದು ನಗರದ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ದುಡಿಯುವ ವರ್ಗ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಗೋ ಹತ್ಯೆ ಬಗ್ಗೆ ಮಾತಾಡುತ್ತಾರೆ. ಆದರೆ, ರೈತರ ಹತ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದ ಅವರು, ಸರಕಾರಿ ನೌಕರರಿಗೆ ಹಾಗೂ ಜನಪ್ರತಿನಿಧಿಗಳಿಗೆ ವೇತನ ಆಯೋಗ ಮಾಡಿ ವೇತನ ಹೆಚ್ಚಳ ಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ದುಡಿಯುವ ವರ್ಗಕ್ಕೆ ಆಯೋಗ ಮಾಡಿ ಎಂದು ಆಗ್ರಹಿಸಿದರು.
ರಾಜ್ಯದ ಜನರು ಸತತವಾಗಿ 3-4 ವರ್ಷಗಳಿಂದ ನಿರಂತರವಾಗಿ ಬರಗಾಲವನ್ನು ಎದುರಿಸುತ್ತಿದ್ದಾರೆ. ಈ ವರ್ಷದ ಬರಗಾಲ 40 ವರ್ಷಗಳ ಹಿಂದಿನ ಭೀಕರತೆಯನ್ನು ಮೀರಿದೆ. ಬ್ಯಾಂಕ್ ಮತ್ತು ಖಾಸಗಿಯವರಿಂದ ತಂದ ಸಾಲಗಳಲ್ಲದೆ ತಮ್ಮ ಬಳಿಯಿರುವ ಬಂಡವಾಳ, ಶ್ರಮವನ್ನು ಕಳೆದುಕೊಂಡು ಕೃಷಿಕರು ಅಸಹಾಯಕತೆಯಿಂದ ನರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತರ, ಕೃಷಿಕರ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಖಾಸಗಿ ಸಾಲಗಳಲ್ಲದೆ ಬ್ಯಾಂಕ್‌ಗಳ ಮೂಲಕ ಪಡೆದಿರುವ ಎಲ್ಲ ರೀತಿಯ ಕೃಷಿ ಸಾಲ 1.16 ಸಾವಿರ ಕೋಟಿಗಳಿಗೂ ಮೀರಿದೆ. ಇದರಲ್ಲಿ 10736 ಕೋಟಿ ರೂ.ಗಳು ರಾಷ್ಟ್ರೀಕೃತ ಹಾಗೂ 52000 ಕೋಟಿ ಖಾಸಗಿ ಬ್ಯಾಂಕ್‌ಗಳಲ್ಲಿ ರೈತರು ಸಾಲ ಮಾಡಿದ್ದಾರೆ. ಅದನ್ನು ಮನ್ನಾ ಮಾಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ರಾಜ್ಯ ಸರಕಾರ 50 ಸಾವಿರ ರೂ.ಗಳಿಗೆ ಸೀಮಿತಗೊಳಿಸಿದ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಸಾಲದ ಹಣ ಪಾವತಿಸಿದರೆ 50 ಸಾವಿರ ಮನ್ನಾದಂತಹ ಶರತ್ತುಗಳನ್ನು ತೆಗೆಯಬೇಕು ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕೆಪಿಆರ್‌ಎಸ್ ಅಧ್ಯಕ್ಷ ಜಿ.ಸಿ.ಬಯ್ಯರೆಡ್ಡಿ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೆ ರೈತರು ದಿವಾಳಿಯಾಗಿದ್ದಾರೆ. ಡಬ್ಲುಟಿಓ ನಿರ್ದೇಶಿತ ಮಾರುಕಟ್ಟೆಗಳ ದಾಳಿಗಳು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ. ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶಿಯ ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದೆ. ಇಂತಹ ನೀತಿಯಿಂದಲೇ ದೇಶದಲ್ಲಿ 50 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರಮೋದಿ ಚುನಾವಣಾಪೂರ್ವದಲ್ಲಿ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಪ್ರಚಾರ ಮಾಡಿದರು. ಆದರೆ, ಈಗ ಆ ವರದಿಯನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದರು. ಕೃಷಿಕನ ಪರವಾದ ಬೆಳೆ ವಿಮೆ ನೀತಿ ಸೇರಿದಂತೆ, ಸಾಲ ಮನ್ನಾ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 14 ದಲಿತ, ರೈತ, ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಎನ್.ಮುನಿಸ್ವಾಮಿ, ಕೃಷಿ ಕಾರ್ಮಿಕರ ಮುಖಂಡ ಎಂ.ಶಶಿಧರ, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.