ರೇಷ್ಮೆ ಜವಳಿ ಮೇಲಿನ ಶೇ.5 ತೆರಿಗೆಗೆ ವಿರೋಧ
ಬೆಂಗಳೂರು, ಜೂ.30: ರೇಷ್ಮೆ ಜವಳಿ ಮೇಲೆ ವಿಧಿಸಲು ಉದ್ದೇಶಿಸಿರುವ ಶೇ.5 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ರೇಷ್ಮೆ ಬೆಳೆಗಾರರು, ನೇಕಾರರು ಹಾಗೂ ವರ್ತಕರು ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ರೇಷ್ಮೆ ಉದ್ಯಮವು ಭಾರತದ ಪುರಾತನ ಉದ್ಯಮಗಳಲ್ಲಿ ಒಂದಾಗಿದ್ದು, ಚಾಕಿ ಸಾಕಾಣಿಕೆದಾರರು, ರೇಷ್ಮೆ ಬೇಸಾಯಗಾರರು, ರೇಷ್ಮೆ ಗೂಡು ಬೆಳೆಗಾರರು, ರೇಷ್ಮೆ ಮೊಟ್ಟೆ ಉತ್ಪಾದಕರು, ರೀಲರುಗಳು, ಬಣ್ಣ ಹಾಕುವವರು ಸೇರಿದಂತೆ ಅನೇಕ ಹಂತದ ಕುಟುಂಬದ ಸದಸ್ಯರನ್ನು ಒಳಗೊಂಡಿದೆ. ರೇಷ್ಮೆ ಉದ್ಯಮವನ್ನು ನಂಬಿಕೊಂಡು 85 ಲಕ್ಷಕ್ಕೂ ಅಧಿಕ ಜನರು ಜೀವನ ನಡೆಸುತ್ತಿದ್ದಾರೆ ಎಂದರು.
ವ್ಯಾಪಾರಿ, ಹಂಚಿಕೆದಾರ, ಸಗಟು ವ್ಯಾಪಾರಿ ಮತ್ತು ಚಿಲ್ಲರೆ ವ್ಯಾಪಾರಿಗಳ ಎಲ್ಲ ಹಂತಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಇದರಿಂದಾಗಿ ದೇಶದಾದ್ಯಂತ ಅಂದಾಜು 1 ಕೋಟಿಗೂ ಅಧಿಕ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಲವಾರು ಜನರು ನಿರುದ್ಯೋಗಿಗಳಾಗುತ್ತಾರೆ. ಇದನ್ನೆ ನಂಬಿ ಜೀವನ ನಡೆಸುತ್ತಿರುವವರು ಸಂಕಷ್ಟದ ಸ್ಥಿತಿ ಎದುರಿಸುವಂತಾಗುತ್ತದೆ ಎಂದು ತಿಳಿಸಿದರು.
ರೇಷ್ಮೆ ಉದ್ಯಮವು ಕೃತಕ ನೂಲಿನಿಂದ ತಯಾರಿಸುವ ಜವಳಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಅತ್ಯಂತ ಮುಂದುವರಿದ ತಂತ್ರಜ್ಞಾನ ಬಳಸಿ ರೇಷ್ಮೆ ಜವಳಿಯನ್ನು ಅನುಕರಿಸುವ, ಬಳಕೆದಾರರು ಗುರುತಿಸಲಾಗದ ಜವಳಿಯನ್ನು ಕೃತಕ ನೂಲಿನಿಂದ ತಯಾರಿಸಲಾಗುತ್ತಿದೆ. ಇದರಿಂದಾಗಿ ರೇಷ್ಮೆ ಜವಳಿಯ ದರದ ಶೇ.10 ರಷ್ಟು ದರದಲ್ಲಿ ಕೃತಕ ನೂಲಿನ ಜವಳಿ ಸಿಗುತ್ತಿದ್ದು, ರೇಷ್ಮೆಗೆ ಮಾರುಕಟ್ಟೆ ಪ್ರಮಾಣ ಇಳಿಕೆಯಾಗಿದೆ. ಇದೀಗ ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಜಿಎಸ್‌ಟಿಯಿಂದಾಗಿ ಮತ್ತಷ್ಟು ಇಳಿಮುಖವಾಗುತ್ತದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸರಕಾರ ರೇಷ್ಮೆ ಬೆಳೆಗಾರರ, ನೇಕಾರರ ಹಾಗೂ ಮಾರಾಟಗಾರರ ಹಿತದೃಷ್ಟಿಯಿಂದ ಪುನರ್ ವಿಮರ್ಶೆ ಮಾಡಿ, ಪರಿಶೀಲನೆ ನಡೆಸಿ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನೇಕಾರರ ಸಂಘದ ಅಧ್ಯಕ್ಷ ಟಿ.ವಿ.ಮಾರುತಿ, ನಿವೃತ್ತ ಐಪಿಎಸ್ ಅಧಿಕಾರಿ ಡಿ.ಮುನಿಕೃಷ್ಣ ಉಪಸ್ಥಿತರಿದ್ದರು.