×
Ad

ಬಸವೇಶ್ವರ(ಕೆಂಪವಾಡ) ಏತ ನೀರಾವರಿ ಯೋಜನೆಗೆ ಸಿಎಂ ಶಂಕುಸ್ಥಾಪನೆ

Update: 2017-06-30 20:05 IST

ಬೆಳಗಾವಿ, ಜೂ.30: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಬಸವೇಶ್ವರ(ಕೆಂಪವಾಡ) ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಸಿದೆ ಎಂದರು.
ಬಸವೇಶ್ವರ(ಕೆಂಪವಾಡ) ಏತ ನೀರಾವರಿ ಯೋಜನೆಯಿಂದ ಅಥಣಿ ತಾಲೂಕಿನ ಉತ್ತರ ಭಾಗದ 22 ಗ್ರಾಮದ ಜನರಿಗೆ ಅನುಕೂಲವಾಗಲಿದೆ. 1300 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಯೋಜನೆಯಿಂದ 68 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಅವರು ಹೇಳಿದರು.

ಯೋಜನೆಯ ವಿವರ: ಬರಗಾಲ ಪೀಡಿತ ಹಾಗೂ ನೀರಾವರಿ ವಂಚಿತ 22 ಗ್ರಾಮಗಳ ರೈತರ ಅಶೋತ್ತರಗಳನ್ನು ನೀಗಿಸಲು ಈ ಮಹತ್ವಾಕಾಂಕ್ಷಿ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯನ್ನು ಅಥಣಿ ತಾಲೂಕಿನ ಐನಾಪೂರ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ 4 ಟಿ.ಎಂ.ಸಿ. ನೀರನ್ನು ಮಳೆಗಾಲದಲ್ಲಿ ಬಳಸಿಕೊಂಡು, ಪ್ರತಿ ವರ್ಷ ಮಳೆಯ ಆಸರೆ ಇಲ್ಲದೆ ಬರಗಾಲದಿಂದ ತತ್ತರಿಸುವ ಸದರಿ 22 ಗ್ರಾಮಗಳ 27,462 ಹೇಕ್ಟರ್ (67,859 ಎಕರೆ) ಜಮೀನುಗಳಿಗೆ ಸಾಂಪ್ರದಾಯಕ ಕಾಲುವೆ ಮುಖಾಂತರ ನೀರಾವರಿ ಸೌಲಭ್ಯವನ್ನು ಒದಗಿಸಲು ಯೋಜಿಸಲಾಗಿದೆ.
ಈ ಯೋಜನೆಯ ವಿವರವಾದ ಯೋಜನಾ ವರದಿಗೆ ರಾಜ್ಯ ಸರಕಾರವು 2016ರ ಜೂ.22ರಂದು ಯೋಜನಾ ಅಂದಾಜು 1120.36 ಕೋಟಿ ರೂ.ಗಳಿಗೆ (2012-13 ರ ದರಸೂಚಿ ಪ್ರಕಾರ) ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕಾಮಗಾರಿಯ ಅನುಷ್ಠಾನಕ್ಕಾಗಿ ಹೆಡ್ವರ್ಕ್(ಇನ್ಟೇಕ್ ನಾಲೆ, ಜಾಕವೇಲ್, ಪಂಪಹೌಸ್, ಇಲೆಕ್ಟ್ರೋ ಮೆಕ್ಯಾನಿಕಲ್, ಪಂಪ್ಸ್, ಮೋಟರ್ಸ್, ವಿದ್ಯುತ್ ಸಂಪರ್ಕ ಕೆಲಸ, ಏರು ಕೊಳವೆ ಮಾರ್ಗ, ವಿತರಣಾ ತೊಟ್ಟಿ ಇತ್ಯಾದಿ) ಮತ್ತು ಮುಖ್ಯ ಕಾಲುವೆಯೊಂದಿಗೆ ವಿತರಣಾ ಕಾಲುವೆಗಳ ಜಾಲದ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ 1287.36 ಕೋಟಿ ರೂ.ಗಳಿಗೆ (2016-17 ದರಸೂಚಿ) ರಾಜ್ಯ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಮುಖ್ಯ ಇಂಜಿನಿಯರ್ ತಾಂತ್ರಿಕ ಮಂಜೂರಾತಿಯನ್ನು ನೀಡಿದ್ದಾರೆ.

ಕಾಮಗಾರಿಯನ್ನು ಟರ್ನ್-ಕೀ ಟೆಂಡರ್ ಆಧಾರದ ಮೇಲೆ ಗಾಯತ್ರಿ, ಆರ್ಎನ್ಎಸ್, ಎಸ್ಐಪಿಎಲ್ (ಜ್ಹೆ) ಹೈದರಾಬಾದ್ ಇವರಿಗೆ ಮೂರು ವರ್ಷ ಕಾಲಾವಧಿಯೊಂದಿಗೆ 1363.48 ಕೋಟಿ ರೂ.ಗಳಿಗೆ ಕರಾರು ಒಪ್ಪಂದ ಮಾಡಿಕೊಂಡು ಕೆಲಸವನ್ನು ವಹಿಸಿಕೊಡಲಾಗಿದೆ.
ಈ ಶಂಕುಸ್ಥಾಪನೆ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ಜಾರಕಿಹೊಳಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಚಿಕ್ಕೋಡಿ ಸಂಸದ ಪ್ರಕಾಶ್ಹುಕ್ಕೇರಿ, ಕಾಗವಾಡ ಶಾಸಕ ಭರಮಗೌಡ (ರಾಜು) ಅ.ಕಾಗೆ ಸೇರಿದಂತೆ ಮತ್ತಿತತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News