ಸಂಸತ್ತಿನ ಸೆಂಟ್ರಲ್‌ಹಾಲ್ ಬಳಕೆಗೆ ಸಿಎಂ ವಿರೋಧ
ಬೆಳಗಾವಿ, ಜೂ.30: ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕಾಯ್ದೆಗೆ ಚಾಲನೆ ನೀಡಲು ಕೇಂದ್ರ ಸರಕಾರ ಸಂಸತ್ತಿನ ಸೆಂಟ್ರಲ್ ಹಾಲ್ ಬಳಸಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಜಿಎಸ್‌ಟಿ ಕಾಯ್ದೆಗೆ ತಮ್ಮ ವಿರೋಧವಿಲ್ಲ. ಆದರೆ, ಸಂಸತ್ತಿನ ಸೆಂಟ್ರಲ್‌ಹಾಲ್‌ಗೆ ತನ್ನದೇ ಆದ ಮಹತ್ವ, ಪಾವಿತ್ರತೆ ಇದೆ. ಈ ಕಾಯ್ದೆಗೆ ಚಾಲನೆ ನೀಡಲು ಸೆಂಟ್ರಲ್ ಹಾಲ್ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ದೇಶದ 25 ಹಾಗೂ 50ನೆ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಸೆಂಟ್ರಲ್ ಹಾಲ್ ಅನ್ನು ಬಳಸಿಕೊಳ್ಳಲಾಗಿತ್ತು. ಆದರೆ, ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್‌ಟಿ ಕಾಯ್ದೆಗೆ ಚಾಲನೆ ನೀಡಲು ಸೆಂಟ್ರಲ್ ಹಾಲ್ ಬಳಸಿಕೊಳ್ಳುತ್ತಿರುವ ಕ್ರಮ ಸರಿಯಲ್ಲ ಎಂದು ಅವರು ಹೇಳಿದರು.
ಜಿಎಸ್‌ಟಿ ಅನುಷ್ಠಾನದಿಂದ ರಾಜ್ಯದ ರಾಜಸ್ವಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಬರುವ ರಾಜಸ್ವದಲ್ಲಿ ಕುಸಿತವುಂಟಾದರೆ, ಕೇಂದ್ರ ಸರಕಾರ ಆ ನಷ್ಟವನ್ನು ಭರಿಸಿಕೊಡುವ ಆಶ್ವಾಸನೆ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.