ತೆರಿಗೆ ರಾಷ್ಟ್ರೀಯತೆಯ ಮರೆಯಲ್ಲಿ ಸುಲಿಗೆ

Update: 2017-07-01 03:40 GMT

70 ವರ್ಷಗಳ ಹಿಂದೆ ಮಧ್ಯರಾತ್ರಿಯಲ್ಲಿ ಪಡೆದ ಸ್ವಾತಂತ್ರ ದೇಶದ ಜನರಿಗೆ ನಿಜಕ್ಕೂ ಬಿಡುಗಡೆಯನ್ನು ತಂದಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಗದಿರುವಾಗ, ಇಂದು ಮಧ್ಯರಾತ್ರಿಯಿಂದ ಭಾರತದ ಜನತೆ ಮತ್ತೊಂದು ಆತಂಕಕ್ಕೆ ಗುರಿಯಾಗಲಿದ್ದಾರೆ. ಸ್ವಾತಂತ್ರಾ ನಂತರದ ಭಾರತದಲ್ಲಿ ಅತೀ ದೊಡ್ಡ ತೆರಿಗೆ ಸುಧಾರಣೆ ಎಂದು ಕರೆಸಿಕೊಳ್ಳುತ್ತಿರುವ ‘ಸರಕು ಮತ್ತು ಸೇವಾ ತೆರಿಗೆ’ (ಗೂಡ್ಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್-ಜಿಎಸ್‌ಟಿ) ಎಂಬ ಹೊಸ ತೆರಿಗೆ ವ್ಯವಸ್ಥೆಯನ್ನು ಮೋದಿ ನೇತೃತ್ವದ ಸರಕಾರ ಜನತೆಯ ಮೇಲೆ ಹೇರುತ್ತಿದೆ.

ಒಂದೆಡೆ ಸರಕಾರ ಮತ್ತು ಅದು ಸಾಕುತ್ತಿರುವ ಮಾಧ್ಯಮಗಳು, ಈ ಹೊಸ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತ್ತದೆ ಎಂದು ವಾದಿಸುತ್ತಿವೆ. ಈ ತೆರಿಗೆ ವ್ಯವಸ್ಥೆ ಮೂಲಕ ದೇಶಕ್ಕೆ, ರಾಜ್ಯಗಳಿಗೆ, ಉತ್ಪಾದಕರಿಗೆ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಎಲ್ಲರಿಗೂ ಸಮಾನವಾಗಿ ಲಾಭವಾಗುತ್ತದೆ ಎನ್ನುವುದು ಅವರ ಪ್ರತಿಪಾದನೆ. ಅಲ್ಲದೆ ಈ ಹೊಸ ವ್ಯವಸ್ಥೆಯಿಂದ ಆರ್ಥಿಕ ವಹಿವಾಟುಗಳು ಸುಗಮವಾಗಿ ನಡೆಯಲಿದ್ದು ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಶೇ.2ರಷ್ಟು ಅಂದಾಜು 3ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ತೆರಿಗೆ ವ್ಯವಸ್ಥೆಗೆ ನೇರ ಬಲಿಪಶುಗಳಾಗಲಿರುವ ಜನತೆ, ತೆರಿಗೆದಾರರು, ವ್ಯಾಪಾರಿಗಳು ಅತ್ಯಂತ ಆತಂಕದಲ್ಲಿದ್ದಾರೆ.

ಕಳೆದ ಮೂರು ದಿನಗಳಿಂದ ದೇಶಾದ್ಯಂತ ಜವಳಿ ವರ್ತಕರ ಸಹಿತ ಬೇರೆ ಬೇರೆ ಕ್ಷೇತ್ರಗಳ ಉದ್ಯಮಿಗಳು ಜಿಎಸ್‌ಟಿಯನ್ನು ವಿರೋಧಿಸಿ ಮುಷ್ಕರ ಹೂಡಿರುವುದು ಶ್ರೀಸಾಮಾನ್ಯರ ಆತಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ. ಉಳಿದಂತೆ ದೇಶದ ದೊಡ್ಡ ದಾಸ್ತಾನುದಾರರು, ವ್ಯಾಪಾರಿಗಳು ಮುಂದೇನೆಂಬ ಚಿಂತೆಯಲ್ಲಿ ಸರಕುಗಳನ್ನೆಲ್ಲ ಅರ್ಧ ಬೆಲೆಗೆ ಮಾರಾಟ ಮಾಡುತ್ತಾ ಕಂಗಾಲಾಗಿ ಕೂತಿದ್ದಾರೆ. ದೇಶದಲ್ಲಿ ಆರೂವರೆ ಕೋಟಿ ವ್ಯಾಪಾರಿಗಳಿದ್ದಾರೆ. ವ್ಯಾಪಾರಿಗಳ ಮಹಾಮಂಡಳದ ಒಕ್ಕೂಟದ ಅಧ್ಯಕ್ಷರಾಗಿರುವ ಕಂಡೇಲ್‌ವಾಲ ಅವರು ಬಿಜೆಪಿಯ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರೇ ಒಪ್ಪಿಕೊಂಡಂತೆ ಶೇ.90ರಷ್ಟು ವ್ಯಾಪಾರಿಗಳು ಈ ತೆರಿಗೆ ವ್ಯವಸ್ಥೆಗೆ ಸಿದ್ಧರಿಲ್ಲ ಹಾಗೂ ಅವರಿಗೆ ಮಾಹಿತಿಯೇ ಇಲ್ಲ. ಆದರೂ ಅವಸರದಿಂದ ಜುಲೈ 1ರಂದು ಸರಕಾರ ಜಿಎಸ್‌ಟಿಯನ್ನು ಜಾರಿ ಮಾಡುವ ಕಾರಣವಾದರೂ ಏನು?

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಯೆಂದರೆ ಈವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸುತ್ತಿದ್ದ ವಿವಿಧ ಪರೋಕ್ಷ ತೆರಿಗೆಗಳ ಬದಲಿಗೆ ಹೇರಲಾಗುವ ಏಕರೂಪದ ಪರೋಕ್ಷ ತೆರಿಗೆ ವ್ಯವಸ್ಥೆಯೇ ಆಗಿದೆ.. ಸರಕಾರ ಇದನ್ನು ‘ಒಂದು ರಾಷ್ಟ್ರ -ಒಂದು ಮಾರುಕಟ್ಟೆ-ಒಂದು ತೆರಿಗೆ’ ಎಂಬ ಭಾವನಾತ್ಮಕ ರಾಷ್ಟ್ರೀಯತೆಯೊಂದಿಗೆ ಬೆಸೆದು ಇದು ಮಾಡಬಹುದಾದ ಅನುಕೂಲ ಹಾಗೂ ಅನನುಕೂಲಗಳ ಗಂಭೀರ ಚರ್ಚೆಯನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಒಂದು ಪ್ರಗತಿಪರ ದೇಶ ತನ್ನ ಜನತೆಯ ಹಿತಾಸಕ್ತಿಯನ್ನು ಬಯಸುವುದಾದರೆ ಅದು ಒಂದು ಪ್ರಗತಿಪರ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಅಂದರೆ ಒಬ್ಬ ವ್ಯಕ್ತಿ ತನ್ನ ವರಮಾನಕ್ಕೆ ತಕ್ಕಂತೆ ತೆರಿಗೆಯನ್ನು ಕಟ್ಟಬೇಕು.

ಡಾ. ಅಂಬೇಡ್ಕರ್ ಬಯಸಿದ್ದು ಇದನ್ನೇ. ಈಗ ಅಳವಡಿಸುತ್ತಿರುವ ಸರಕು ಸೇವಾ ತೆರಿಗೆ ವ್ಯವಸ್ಥೆ ಒಂದು ಪರೋಕ್ಷ ತೆರಿಗೆ ವ್ಯವಸ್ಥೆಯೇ ಆಗಿದ್ದು, ಶ್ರೀಮಂತರಿಗಿಂತ ಹೆಚ್ಚಾಗಿ ಬಡವರಿಂದಲೇ ಹೆಚ್ಚಿನ ಸುಂಕವನ್ನು ಸುಲಿಯುವ ಇರಾದೆಯನ್ನು ಹೊಂದಿದೆ. ಅದನ್ನು ಇಡೀ ದೇಶಾದ್ಯಂತ ಎಲ್ಲಾ ಜನಸಾಮಾನ್ಯರು ಒಂದೇ ಬಗೆಯ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ‘ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ತೆರಿಗೆ’ ಎಂಬ ಹೆಸರಿನಲ್ಲಿ ಹೇರಲಾಗುತ್ತಿರುವ ಈ ಏಕರೂಪ ತೆರಿಗೆ ವ್ಯವಸ್ಥೆ ದೇಶಾದ್ಯಂತ ಜನಸಾಮಾನ್ಯರಿಂದ ಏಕರೂಪದಲ್ಲಿ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತದೆ.

ಹೀಗಾಗಿ ‘ಏಕರೂಪ ಆರ್ಥಿಕ ರಾಷ್ಟ್ರೀಯತೆ’ಯ ಬಗ್ಗೆ ಜನರು ಸಂಭ್ರಮಿಸಲು ಕಾರಣಗಳೇನೂ ಇಲ್ಲ. ಒಂದೆಡೆ ಸರಕಾರ ಏಕರೂಪ ತೆರಿಗೆಯೆಂದು ಹೇಳುತ್ತಿದ್ದರೆ ವಾಸ್ತವದಲ್ಲಿ ರಾಜ್ಯ ಜಿಎಸ್‌ಟಿ, ಕೇಂದ್ರ ಜಿಎಸ್‌ಟಿ ಮತ್ತು ಅಂತಾರಾಜ್ಯ ಜಿಎಸ್‌ಟಿ ಎಂಬ ಮೂರು ಬಗೆಯ ತೆರಿಗೆಗಳಿರುತ್ತವೆೆ. ಹಾಗಿದ್ದಲ್ಲಿ, ಈ ಹಿಂದೆ ಇದ್ದ ಮಾರಾಟ ತೆರಿಗೆ, ಎಕ್ಸೈಸ್ ತೆರಿಗೆಗಳಿಗಿಂತ ಕ್ರಾಂತಿಕಾರಿ ಬದಲಾವಣೆ ಅಲ್ಲ ಎನ್ನುವುದನ್ನು ಇದು ಹೇಳುತ್ತದೆ. ಇದಲ್ಲದೆ ಈ ಬಗೆಯ ವೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲಿ ಅಳವಡಿಸಿಕೊಂಡ ಮುಂದುವರಿದ ದೇಶಗಳಿಗೆ ಎಲ್ಲಾ ಬಗೆಯ ಸರಕು ಮತ್ತು ಸೇವೆಗಳಿಗೆ ಶೇ.7ರಿಂದ 10% ಒಂದೇ ತೆರಿಗೆಯನ್ನು ವಿಧಿಸುತ್ತದೆ. ಆದರೆ ಒಂದೇ ತೆರಿಗೆ ಒಂದೇ ದೇಶ ಎಂದು ಹೇಳುತ್ತಾ ಸರಕಾರವು ಐದು ಬಗೆಯ ತೆರಿಗೆಗಳನ್ನು ವಿಧಿಸುತ್ತದೆ. ಅವು ಶೇ.3, ಶೇ.5, ಶೇ.12, ಶೇ.18, ಶೇ.28. ಇಷ್ಟಲ್ಲದೆ ತುರ್ತು ಸ್ಥಿತಿಯಲ್ಲಿ ಶೇ.40ಷ್ಟು ತೆರಿಗೆಯನ್ನು ವಿಧಿಸುವ ಅವಕಾಶವನ್ನು ಇಟ್ಟುಕೊಂಡಿದೆ.

ಆ ಅರ್ಥದಲ್ಲಿ ಸರಕಾರ ಹೇಳಿಕೊಳ್ಳುವಂತೆ ಜಿಎಸ್‌ಟಿ ‘ಒಂದು ರಾಷ್ಟ್ರ-ಒಂದು ಮಾರುಕಟ್ಟೆ-ಒಂದು ತೆರಿಗೆ’ ಎನ್ನುವ ವ್ಯವಸ್ಥೆಯೇ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ರಾಜ್ಯಗಳಿಗೆ ಅವುಗಳು ಹೇರುತ್ತಿದ್ದ ತೆರಿಗೆಯ ಮೂಲಕ ಗಳಿಸುತ್ತಿದ್ದ ರಾಜಸ್ವವನ್ನು ಖಾತರಿಗೊಳಿಸುವುದಾಗಿ ಭರವಸೆ ನೀಡಿದೆ(ರೆವೆನ್ಯೂ ನ್ಯೂಟ್ರಲ್ ರೇಟ್/ ರಾಜಸ್ವ ಖಾತರಿ ದರ). ಹೀಗಾಗಿ ಜಿಎಸ್‌ಟಿ ಬಂದರೆ ಬೆಲೆಗಳು ಇಳಿಯುತ್ತವೆ ಎಂಬ ಭರವಸೆಯ ಮಾತುಗಳು ಅಪ್ಪಟ ಸುಳ್ಳಿನ ಕಂತೆಯಾಗಿದೆ. ಯಾಕೆಂದರೆ ಬೆಲೆಗಳು ಇಳಿದಲ್ಲಿ ಅದೇ ಪ್ರಮಾಣದಲ್ಲಿ ತೆರಿಗೆ ಸಂಗ್ರಹವೂ ಇಳಿಯುತ್ತದೆ. ಆದರೆ ಎಲ್ಲಾ ರಾಜ್ಯಗಳಿಗೆ ಅವುಗಳು ಪಡೆಯುತ್ತಿದ್ದ ತೆರಿಗೆ ಆದಾಯವನ್ನು ಖಾತರಿಪಡಿಸಿರುವುದರಿಂದ ಒಂದು ಸರಕು ಮತ್ತು ಸೇವಾ ತೆರಿಗೆ ಇಳಿದರೆ ಮತ್ತೊಂದು ಸರಕು ಮತ್ತು ಸೇವಾ ತೆರಿಗೆ ದರ ಹೆಚ್ಚಾಗಲಿದೆ.

ಹಾಗಿದ್ದಲ್ಲಿ ಇಷ್ಟೊಂದು ತರಾತುರಿಯಿಂದ ಜಿಎಸ್‌ಟಿ ಜಾರಿ ಮಾಡುತ್ತಿರುವ ಕಾರಣವೇನು? ಭಾರತವು ಬಹುಬಗೆಯ ಸಮಾಜ ಹಾಗೂ ಬಹುಬಗೆಯ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳ ಒಕ್ಕೂಟವಾಗಿದೆ. ಆದ್ದರಿಂದಲೇ ಸಂವಿಧಾನವನ್ನು ರಚಿಸುವಾಗ ಕೇಂದ್ರಕ್ಕೆ ಒಂದಷ್ಟು ಅಧಿಕಾರವನ್ನು ನೀಡಲಾಗಿದ್ದರೆ ಮತ್ತಷ್ಟು ಅಧಿಕಾರವನ್ನು ರಾಜ್ಯಗಳಿಗೆ ಒದಗಿಸಲಾಗಿದೆ. ಅದರಲ್ಲಿ ತಮ್ಮ ರಾಜ್ಯದ ಜನತೆಯ ಆರ್ಥಿಕ ಸ್ಥಿತಿಗತಿ ಮತ್ತು ಅಗತ್ಯಗಳ ಅನುಸಾರವಾಗಿ ತಮ್ಮದೇ ಆದ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳುವ ಅಧಿಕಾರವೂ ಒಂದು. ಅದನ್ನು ಮುಂದುವರಿಸುವಾಗಲೇ ಆಯಾ ರಾಜ್ಯಗಳು ತಮ್ಮ ಸಂಪನ್ಮೂಲ ಮತ್ತು ಜನತೆಯ ಅಗತ್ಯಗಳನ್ನು ಆಧರಿಸಿ ಸಂವಿಧಾನ ಬದ್ಧವಾದ ಅಧಿಕಾರವನ್ನು ಬಳಸಿ ತಮ್ಮ ರಾಜ್ಯಕ್ಕೆ ಸೂಕ್ತವಾದ ತೆರಿಗೆ ನೀತಿಯನ್ನು ಅಳವಡಿಸುತ್ತಿದ್ದರು.

ಅಂದರೆ ಒಂದು ಪ್ರಜಾತಂತ್ರ ಒಕ್ಕೂಟದಲ್ಲಿ ರಾಜ್ಯಗಳಿಗೆ ತೆರಿಗೆ ನೀತಿಯನ್ನು ರಚಿಸಲು ಸಮಾನ ಅಧಿಕಾರ ದೊರೆಯುತ್ತಿತ್ತು. ಆದರೆ ದೇಶದಲ್ಲಿ ಕಾರ್ಪೊರೇಟ್ ಆರ್ಥಿಕ ಶಕ್ತಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಆರ್ಥಿಕತೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿದ್ದಂತೆ ಈ ಒಕ್ಕೂಟ ರಚನೆಯೇ ಅವರ ವಹಿವಾಟಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಒಂದೇ ಮಾರುಕಟ್ಟೆ, ಒಂದೇ ತೆರಿಗೆ ನೀತಿಯನ್ನು ಅವರು ಬಯಸುತ್ತಿದ್ದಾರೆ. ಈ ಜಿಎಸ್‌ಟಿ ತೆರಿಗೆ ಪದ್ಧತಿ ಅದಕ್ಕಾಗಿಯೇ ರೂಪುಗೊಂಡಿದೆ. ಈ ಜಿಎಸ್‌ಟಿಯನ್ನು ಜಾರಿಗೆ ತರಲು ಜಿಎಸ್‌ಟಿ ಕೌನ್ಸಿಲ್ ಒಂದನ್ನು ರೂಪಿಸಲಾಗಿದೆ. ಈ ಪರಿಷತ್ತು ದೇಶಾದ್ಯಂತ ಯಾವ ಯಾವ ಸರಕು ಮತ್ತು ಸೇವೆಗಳಿಗೆ ಎಷ್ಟು ತೆರಿಗೆ ಹಾಕಬೇಕೆಂದು ತೀರ್ಮಾನ ಮಾಡುತ್ತದೆ.

ಅಂದರೆ ಪರ್ಯಾಯ ವಿಧಾನಸಭೆ ಹಾಗೂ ಪರ್ಯಾಯ ಸಂಸತ್ತಾಗಿ ಕೆಲಸ ಮಾಡುತ್ತದೆ. ಇದರ ಅಧ್ಯಕ್ಷರು ಕೇಂದ್ರ ಹಣಕಾಸು ಮಂತ್ರಿಯಾಗಿರುತ್ತಾರೆ. ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳ ಜೊತೆಗೆ ಕೇಂದ್ರದಿಂದ ನಿಯೋಜಿತಗೊಂಡ ಪ್ರತಿನಿಧಿಗಳಿರುತ್ತಾರೆ. ಆದರೆ ರಾಜ್ಯಗಳ ಪ್ರತಿನಿಧಿತ್ವ ಮೂರನೆ ಎರಡರಷ್ಟಿದ್ದರೆ ಕೇಂದ್ರ ಪ್ರತಿನಿಧಿತ್ವ ಮೂರನೆ ಒಂದು ಭಾಗದಷ್ಟಿರುತ್ತದೆ ಹಾಗೂ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಬೇಕೆಂದರೆ ಈ ಪರಿಷತ್ತಿನಲ್ಲಿ ಶೇ.75ರಷ್ಟು ಸಮ್ಮತಿ ಬೇಕಾಗಿರುತ್ತದೆ. ಹೀಗಾಗಿ ಸ್ಪಷ್ಟವಾಗಿ ಕಾಣುತ್ತಿರುವಂತೆಯೇ ಭಾರತದ ಒಕ್ಕೂಟ ರಚನೆಯನ್ನು ಧಿಕ್ಕ್ಕರಿಸಿ ಸಂಸತ್ತು ವಿಧಾನಸಭೆಗಳನ್ನು ಮೂಲೆ ಗುಂಪಾಗಿಸಿ ಕೇಂದ್ರದ ಆಧಿಪತ್ಯ ಜಾರಿಯಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ಸಹ ಇದನ್ನೇ ಬಹುದಿನಗಳಿಂದ ಬಯಸುತ್ತಿದ್ದವು.

 ಸರಕಾರ ಒಂದು ವಿಷಯದಲ್ಲಿ ನಿಜ ಹೇಳುತ್ತಿದೆ. ಅದೇನೆಂದರೆ ಒಟ್ಟಾರೆ ಪರೋಕ್ಷ ತೆರಿಗೆ ಆದಾಯವನ್ನು ಎರಡರಿಂದ ಮೂರು ಲಕ್ಷ ಕೋಟಿಗಳಿಗೆ ಹೆಚ್ಚಿಸಿಕೊಂಡು ಶ್ರೀಮಂತರಿಂದ ಹಾಗೂ ಕಾರ್ಪೊರೇಟ್‌ಗಳ ಮೇಲೆ ಹಾಕುತ್ತಿದ್ದ ನೇರ ತೆರಿಗೆಯನ್ನು ಕಡಿಮೆ ಮಾಡುವುದು ಈ ಜಿಎಸ್‌ಟಿಯ ಹಿಂದಿನ ಹುನ್ನಾರವಾಗಿದೆ. ಪರೋಕ್ಷ ತೆರಿಗೆಯನ್ನು ಹೆಚ್ಚಿಸಿಕೊಳ್ಳಲು ಸರಕಾರವು ಈವರೆಗೆ ತೆರಿಗೆ ವ್ಯಾಪ್ತಿಗೆ ಬಾರದಿದ್ದ ಸಣ್ಣಪುಟ್ಟ ಉತ್ಪಾದಕರು, ವ್ಯಾಪಾರಿಗಳನ್ನು ಗುರಿ ಮಾಡಿಕೊಂಡಿದೆ. ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ಒಂದು ಕೋಟಿ ರೂ.ಗೂ ಹೆಚ್ಚಿನ ವಹಿವಾಟು ಹೊಂದಿರುವವರು ಮಾತ್ರ ಪರೋಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತಿದ್ದರು.

ಈಗ ಅದನ್ನು ವಾರ್ಷಿಕ ಇಪ್ಪತ್ತು ಲಕ್ಷಕ್ಕೆ ಇಳಿಸಲಾಗಿದೆ. ಅಂದರೆ ಮಾಹೆಯಾನ ಒಂದು ಒಂದೂವರೆ ಲಕ್ಷ ವಹಿವಾಟು ಮಾಡುವ ಗೂಡಂಗಡಿ ಹಾಗೂ ಸಣ್ಣಪುಟ್ಟ ಅಂಗಡಿಗಳೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ ನೋಟು ನಿಷೇಧದ ಭಾರದಿಂದ ವ್ಯವಹಾರದಲ್ಲಿ ಕುಸಿತ ಕಂಡು ಕಂಗಾಲಾಗಿದ್ದವರಿಗೆ, ಈಗ ಈ ಹೊಸ ಸರಕು ಮತ್ತು ಸೇವಾ ತೆರಿಗೆ ಇನ್ನಷ್ಟು ದೊಡ್ಡ ಪ್ರಹಾರವನ್ನು ಮಾಡಲಿದೆ. ಅಷ್ಟು ಮಾತ್ರವಲ್ಲ ಈ ಸಣ್ಣ ಪುಟ್ಟ ವ್ಯಾಪಾರಿಗಳು ಈವರೆಗೆ ಒಂದೋ ತೆರಿಗೆಯ ಕಾಗದ ಪತ್ರಗಳನ್ನು ಸಲ್ಲಿಸಬೇಕಾಗಿರಲಿಲ್ಲ ಅಥವಾ ವರ್ಷಕ್ಕೊಮ್ಮೆ ಸಲ್ಲಿಸಿದರೆ ಸಾಕಾಗುತ್ತಿತ್ತು. ಆದರೆ ಈ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಎಲ್ಲರೂ ತಿಂಗಳಿಗೆ ಮೂರರಂತೆ ವರ್ಷಕ್ಕೆ ನಲವತ್ತು ಬಾರಿ ತೆರಿಗೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

ಅದೂ ಕಂಪ್ಯೂಟರ್ ಮೂಲಕ ಪ್ರತಿನಿತ್ಯ ತಮ್ಮ ವಹಿವಾಟನ್ನು ಹಾಗೂ ಉಳಿದಿರುವ ಸರಕಿನ ಮೊತ್ತವನ್ನು ನಮೂದಿಸಬೇಕಾಗುತ್ತದೆ. ಹೀಗಾಗಿ ತೆರಿಗೆಯ ಜೊತೆ ಜೊತೆಗೆ ತಮ್ಮ ಸೀಮಿತ ಆದಾಯದಿಂದಲೇ ಕಂಪ್ಯೂಟರ್ ಕೊಳ್ಳುವ ಹಾಗೂ ಲೆಕ್ಕಾಚಾರವನ್ನು ಇಟ್ಟುಕೊಳ್ಳಲು ಒಬ್ಬ ಶಾನುಭೋಗನನ್ನು ಇರಿಸಿಕೊಳ್ಳುವ ಹೊರೆ ಬೀಳುತ್ತದೆ. ಇದರ ಪರಿಣಾಮವಾಗಿ ಆದಾಯವು ಕುಸಿಯುತ್ತ ಸಣ್ಣ ಪುಟ್ಟ ವ್ಯಾಪಾರಸ್ಥರ ವಹಿವಾಟು ಕುಸಿಯಬಹುದು. ಹಾಗೆಯೇ ಆ ಮಾರುಕಟ್ಟೆಯು ಸಹ ದೈತ್ಯ ಕಾರ್ಪೊರೇಟ್ ಸಂಸ್ಥೆಗಳ ಪಾಲಾಗಬಹುದು. ಜಿಎಸ್‌ಟಿಯ ಅಸಲಿ ಹುನ್ನಾರ ಇದೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News