ರಾಷ್ಟ್ರಪತಿ ಚುನಾವಣೆಗೆ ಮೊದಲು ವಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು!

Update: 2017-07-01 09:18 GMT

ಹೊಸದಿಲ್ಲಿ, ಜು.1: ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಮಧ್ಯರಾತ್ರಿ ನಡೆದ ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಹುಚರ್ಚಿತ ಜಿಎಸ್‌ಟಿಗೆ ಚಾಲನೆ ನೀಡಿದ್ದರು. ವಿಶೇಷ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಪ್ರಫುಲ್ ಪಟೇಲ್ ಸಹಿತ ವಿರೋಧ ಪಕ್ಷದ ಪ್ರಮುಖ ನಾಯಕರು ಹಾಜರಿದ್ದರು.

ಕಾಂಗ್ರೆಸ್ ಸಹಿತ ಹಲವು ವಿರೋಧ ಪಕ್ಷಗಳು ಮಧ್ಯರಾತ್ರಿ ಸೆಂಟ್ರಲ್ ಹಾಲ್‌ನಲ್ಲಿ ನಡೆದಿದ್ದ ವಿಶೇಷ ಅಧವೇಶನವನ್ನು ಬಹಿಷ್ಕರಿಸಿದ್ದವು. ಆದರೆ, ಎನ್‌ಸಿಪಿ, ಜೆಡಿ(ಯು), ಬಿಎಸ್ಪಿ, ಸಮಾಜವಾದಿಪಕ್ಷ ಹಾಗೂ ಜನತಾದಳ(ಎಸ್) ಅಧಿವೇಶನದಲ್ಲಿ ಭಾಗವಹಿಸಿವೆೆ. ಈ ಬೆಳವಣಿಗೆಯು ಜು.17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮೊದಲು ವಿಪಕ್ಷಗಳ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸಿದೆ.
 ರಾಷ್ಟ್ರಪತಿ ಹುದ್ದೆಗಾಗಿ ಎನ್‌ಡಿಎ ಅಭ್ಯರ್ಥಿ ರಾಮ್ ನಾಥ ಕೋವಿಂದ್ ವಿರುದ್ಧ 17 ವಿಪಕ್ಷಗಳು ಮೀರಾಕುಮಾರ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದವು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು, ಡಿಎಂಕೆ, ಎನ್‌ಸಿ ಹಾಗೂ ಆರ್‌ಜೆಡಿ ಸಹಿತ ಇತರ ಪಕ್ಷಗಳು ವಿಶೇಷ ಅಧಿವೇಶನದಲ್ಲಿ ಭಾಗವಹಿಸಿರಲಿಲ್ಲ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಪ್ರಮುಖ ಅಂಗಪಕ್ಷವಾಗಿದ್ದ ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಪ್ರಫುಲ್ ಪಟೇಲ್ ಹಾಗೂ ತಾರಿಖ್ ಅನ್ವರ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದ್ದರು.
 
ಜೆಡಿಎಸ್ ಮುಖ್ಯಸ್ಥ ದೇವೇಗೌಡರು ಕಾಂಗ್ರೆಸ್‌ನ ಹಿರಿಯ ನಾಯಕರ ವಿನಂತಿಯ ಹೊರತಾಗಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವೇಗೌಡರನ್ನು ಮಾಜಿ ಪ್ರಧಾನಮಂತ್ರಿ ಎಂಬ ನೆಲೆಯಲ್ಲಿ ಆಹ್ವಾನ ನೀಡಲಾಗಿತ್ತು. ಹೀಗಾಗಿ ನಾವು ಆ ಆಹ್ವಾನವನ್ನು ಸ್ವೀಕರಿಸಿದ್ದೇವೆ ಎಂದು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಹೇಳಿದ್ದಾರೆ.
ಬಿಎಸ್ಪಿ ಪರವಾಗಿ ಇಬ್ಬರು ಶಾಸಕರು ಹಾಜರಿದ್ದರು. ಅಧಿವೇಶನವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಎಸ್ಪಿ ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿತ್ತು.
  "ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ವಿಪಕ್ಷಗಳು 2019ರ ಲೋಕಸಭಾ ಚುನಾವಣೆಯ ತನಕ ಒಗ್ಗಟ್ಟು ಕಾಯ್ದುಕೊಳ್ಳಲಿವೆ'' ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News