"ಟಿವಿ ನಿರೂಪಕಿಯ ಹೀಯಾಳಿಕೆಯ ಪ್ರಶ್ನೆ ಸರ್ಜಿಕಲ್ ಸ್ಟ್ರೈಕ್ ಗೆ ಪ್ರೇರಣೆ"

Update: 2017-07-01 09:30 GMT

ಪಣಜಿ, ಜು.1: ಮ್ಯಾನ್ಮಾರ್ ಗಡಿಯಲ್ಲಿ 2015ರಲ್ಲಿ ನಡೆದ ಕಾರ್ಯಾಚರಣೆಯ ನಂತರ ಸಚಿವ ರಾಜವರ್ಧನ ಸಿಂಗ್ ರಾಥೋರ್ ಅವರಿಗೆ ಟಿವಿ ನಿರೂಪಕಿಯೊಬ್ಬರು  ಕೇಳಿದ ಹೀಯಾಳಿಕೆಯ ಪ್ರಶ್ನೆಯೊಂದು ಕಳೆದ ವರ್ಷದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ಗೆ ಕಾರಣವಾಗಿತ್ತು ಎಂದು ಮಾಜಿ ರಕ್ಷಣಾ ಸಚಿವರಾಗಿರುವ ಗೋವಾ ಮುಖ್ಯಮಂತ್ರಿ  ಮನೋಹರ್ ಪಾರಿಕ್ಕರ್ ಬಹಿರಂಗಗೊಳಿಸಿದ್ದಾರೆ.

ಉದ್ಯಮಿಗಳ ಸಭೆಯೊಂದರಲ್ಲಿ ಮಾತನಾಡಿದ ಅವರು "ಸರ್ಜಿಕಲ್ ಸ್ಟ್ರೈಕ್ ಅನ್ನು 15 ತಿಂಗಳ ಮೊದಲೇ ಯೋಜಿಸಲಾಗಿತ್ತು'' ಎಂದರು. ಜೂನ್ 4, 2015ರಲ್ಲಿ  ತೀವ್ರಗಾಮಿಗಳ ಸಂಘಟನೆ ಎನ್ ಎಸ್ ಸಿ ಎನ್ -ಕೆ ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ 18 ಜವಾನರನ್ನು ಕೊಂದ ಘಟನೆ ನನಗೆ ಅತೀವ ನೋವು ಹಾಗೂ ಅವಮಾನ ಉಂಟುಮಾಡಿತ್ತು. 200 ಜನರಿರುವ ಒಂದು ಸಣ್ಣ ಉಗ್ರ ಸಂಘಟನೆ ಇಷ್ಟೊಂದು ಸೈನಿಕರನ್ನು ಕೊಂದಿದ್ದು ನಮ್ಮ ಸೇನೆಗೆ ಅವಮಾನವಾಗಿತ್ತು.  ಇದರ ನಂತರ ಜೂನ್ 8ರ ಬೆಳಗ್ಗೆ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 70ರಿಂದ 80 ಉಗ್ರರು ಹತರಾಗಿದ್ದರು. ಇದೊಂದು ಯಶಸ್ವೀ ಕಾರ್ಯಾಚರಣೆಯಾಗಿತ್ತು.

ಒಮ್ಮೆ ಕೇಂದ್ರ ಸಚಿವ ರಾಥೋರ್ ಅವರು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನಿರೂಪಕಿಯೊಬ್ಬರು "ಇಂತಹದೇ ಕಾರ್ಯಾಚರಣೆಯನ್ನು ಪಶ್ಚಿಮದ ಗಡಿಯಲ್ಲಿ ನಡೆಸುವ ಧೈರ್ಯ ಹಾಗೂ ಸಾಮರ್ಥ್ಯ ಇದೆಯೇ" ಎಂದು ಪ್ರಶ್ನಿಸಿದ್ದರು. ಇದನ್ನು ಆಲಿಸಿದ ನಾನು ಸಮಯ ಬಂದಾಗ ಉತ್ತರಿಸಬೇಕೆಂದಿದ್ದೆ. ಹೀಗೆ ಸೆಪ್ಟೆಂಬರ್ 29, 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಗೆ ತಯಾರಿ ಜೂನ್ 9, 2015ರಂದೇ ಆರಂಭಗೊಂಡಿತ್ತು,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News