ನಿಮ್ಮ ಕೈಬೆರಳನ್ನೇ ಪೆನ್‌ನಂತೆ ಬಳಸಿ ಮೊಬೈಲ್‌ನಲ್ಲಿ ಕನ್ನಡವನ್ನು ಬರೆಯಿರಿ

Update: 2017-07-01 14:57 GMT

ಈಗ ಕೈಬೆರಳನ್ನು ಪೆನ್‌ನಂತೆ ಬಳಸಿ ಸ್ಮಾರ್ಟ್ ಫೋನ್‌ನ ಟಚ್‌ಸ್ಕ್ರೀನ್‌ನ ಮೇಲೆ ಕನ್ನಡ ಬರೆಯಬಹುದು. ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವ ಕಿರಿಕಿರಿಯಿಂದ ಬೇಸತ್ತಿರುವವರಿಗೆ ವರದಾನವಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ಗೂಗಲ್‌ನ ‘ಹ್ಯಾಂಡ್‌ರೈಟಿಂಗ್ ಇನ್‌ಪುಟ್’ ಸೌಲಭ್ಯ ಲೋಕಾರ್ಪಣೆಗೊಂಡಿದೆ.

ಕನ್ನಡ ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳಿಗಾಗಿ ಗೂಗಲ್ ಕೈಬರಹದ ಮೂಲಕ ಭಾಷಾಲಿಪಿಗಳನ್ನು ಮೂಡಿಸುವ ಸವಲತ್ತು ನೀಡಿದೆ. ನೀವು ಆ್ಯಂಡ್ರಾಯ್ಡಾ ಓ.ಎಸ್. ಇರುವ ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ‘ಪ್ಲೇ ಸ್ಟೋರ್’ಗೆ ಹೋಗಿ ‘ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್ ಆ್ಯಪ್’ನ್ನು ಇನ್‌ಸ್ಟಾಲ್ ಮಾಡಿ. ನಂತರ ಇನ್‌ಸ್ಟಾಲ್ ಆದ ಆ್ಯಪ್‌ಗೆ ಹೋಗಿ ಮೊದಲಿಗೆ ಈ ಸವಲತ್ತನ್ನು ‘ಎನೇಬಲ್’ ಮಾಡಿ. ಆವಶ್ಯಕತೆಗೆ ಅನುಗುಣವಾಗಿ ಭಾಷಾಸವಲತ್ತುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕನ್ನಡ ಭಾಷೆಯ ಸೌಲಭ್ಯ ಬೇಕಾದರೆ ಮೊಬೈಲಿನ ಭಾಷಾಪಟ್ಟಿಯಲ್ಲಿ ಮೊದಲಿಗೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ನಂತರ ‘ಡೌನ್‌ಲೋಡ್’.... ಒತ್ತಿ. ಕೆಲಸ ಮುಗಿದ ಸಂದೇಶ ಬಂದ ನಂತರ, ಎಲ್ಲವೂ ಸರಿಯಿದೆಯೇ ಎಂಬುದನ್ನು ತಿಳಿದುಕೊಳ್ಳಲು ಮತ್ತು ಕೈಬರಹ ಪ್ರಯತ್ನಿಸಲು ಅವಕಾಶ ಸಿಗುತ್ತದೆ. ‘ರೈಟ್ ಹಿಯರ್’ ಎಂಬ ಸಂದೇಶದ ಕೆಳಗೆ ಪೆನ್‌ನಲ್ಲಿ ಬರೆಯುವಂತೆ ಕೈಬೆರಳನ್ನು ಬಳಸಿ ಕನ್ನಡ ಬರೆಯಿರಿ. ನೀವು ಬರೆಯುತ್ತಿದ್ದಂತೆ, ಮೇಲಿನ ಸಾಲಿನಲ್ಲಿ ನಿಮ್ಮ ಬರಹವು ಪಠ್ಯವಾಗಿ (ಟೆಕ್ಸ್ಟ್) ಆಗಿ ಬದಲಾಗುತ್ತದೆ.

ಸರಿಯಿದ್ದರೆ ಮುಂದುವರಿಯಿರಿ. ತಪ್ಪಾಗಿದ್ದರೆ, ಅದರ ಕೆಳಗಿನ ಸಾಲಿನಲ್ಲಿ ಸರಿಯಿರಬಹುದಾದ ಮೂರು ಆಯ್ಕೆಗಳು ಕಂಡಬರುತ್ತವೆ. ಸರಿ ಎನಿಸಿದ್ದನ್ನು ಆಯ್ಕೆಮಾಡಿಕೊಂಡು ಮುಂದುವರಿಯಿರಿ. ಆರಂಭದಲ್ಲಿ ಸ್ವಲ್ಪ ಅಭ್ಯಾಸದ ಕಸರತ್ತು ಮಾಡುವುದು ಅಗತ್ಯ. ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಲೆಲ್ಲಿ ಪಠ್ಯ (ಟೆಕ್ಸ್ಟ್) ಬಳಸಲು ಅವಕಾಶವಿದೆಯೋ ಅಲ್ಲೆಲ್ಲಾ ಕನ್ನಡವನ್ನು ಕೈಬರಹದ ಮೂಲಕ ಮೂಡಿಸಬಹುದು!. ವಾಟ್ಸ್‌ಆ್ಯಪ್ ಮೆಸೇಜ್ ಬರೆಯಲು, ಇ-ಮೇಯ್ಲ್ ಉತ್ತರಿಸಲು, ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡಲು ಕನ್ನಡದಲ್ಲಿಯೇ ಸುಲಭವಾಗಿ ಬರೆಯಬಹುದು. ನಿಮ್ಮ ಬರವಣಿಗೆಯ ವೇಗಕ್ಕೆ ತಕ್ಕಂತೆ ಪಠ್ಯವು ಸಿದ್ಧಗೊಳ್ಳುತ್ತಾ ಹೋಗುತ್ತದೆ. ಟೈಪಿಂಗ್ ಕಿರಿಕಿರಿಯಿಂದ ನೀವು ಹೊರಬರುತ್ತೀರಿ. ಒತ್ತಕ್ಷರಗಳನ್ನು ಪ್ರತ್ಯೇಕವಾಗಿ ಬರೆದು ಮೂಡಿಸಲು ಪ್ರಯತ್ನಿಸಬೇಡಿ. ಪೂರ್ಣಾಕ್ಷರವನ್ನು ಬರೆದು ಕೈಬೆರಳನ್ನು ಎತ್ತುತ್ತಿದ್ದಂತೆ ಅದು ಪಠ್ಯವಾಗಿ ಮೂಡಿರುತ್ತದೆ. ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳ ಪೂಣಾಕ್ಷರಗಳನ್ನು ಮೂಡಿಸುವಲ್ಲಿ ಸ್ವಲ್ಪ ಕಸರತ್ತು ಮಾಡಬೇಕಿದೆ. ಕೆಲವು ಗೊಂದಲಗಳು ಇವೆ. ಮುಂದೆ ಗೂಗಲ್‌ನವರು ಅದನ್ನು ಸರಿಪಡಿಸಬಹುದು.

ಕನ್ನಡದೊಂದಿಗೆ ಮಧ್ಯೆಮಧ್ಯೆ ಇಂಗ್ಲಿಷ್ ಸಹ ಬಳಸಬಹುದು. ಭಾಷೆಯನ್ನು ಇಂಗ್ಲಿಷ್‌ಗೆ ಬದಲಿಸಲೇಬೇಕೆಂದೇನಿಲ್ಲ. ಕ್ಯಾಪಿಟಲ್ ಅಕ್ಷರಗಳನ್ನು ಬರೆದರೆ ಹಾಗೆಯೇ ಮೂಡುತ್ತವೆ. ಇಂಗ್ಲಿಷ್ ಮೆಸೇಜ್‌ಗಳನ್ನೇ ಬರೆಯಬೇಕಾದಾಗ ಮಾತ್ರವೇ ಭಾಷಾನಿಗದಿಗಳನ್ನು ಬದಲಿಸಿಕೊಳ್ಳಬಹುದು. ಸ್ಪೇಸ್‌ಬಾರ್‌ನಂತೆ ಬಳಸುವ ಬಟನ್‌ನ್ನು ದೀರ್ಘವಾಗಿ ಒತ್ತಿಹಿಡಿದರೆ ಅಗತ್ಯವಿರುವ ಭಾಷೆಯನ್ನು ಆಯ್ಕೆಮಾಡುವ ಅವಕಾಶವಿದೆ. ಹೀಗೆ ಬಳಕೆಯ ಭಾಷೆಗಳನ್ನು ಆಯ್ಕೆ (ಟಾಗಲ್) ಮಾಡುತ್ತಾ ಬೇರೆ ಬೇರೆ ಭಾಷೆಗಳನ್ನೂ ಸಹ ಬಳಸಿ ಕೈಬರಹದ ಮೂಲಕ ಮೆಸೇಜ್‌ಗಳನ್ನು ಮೂಡಿಸಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಎಷ್ಟು ಭಾಷೆಗಳಿಗೆ ಬೆಂಬಲ ನೀಡುತ್ತದೆಯೋ ಅಷ್ಟೂ ಭಾಷೆಗಳನ್ನು ನೀವು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ‘ಆಪ್ಷನಲ್’... ಎಂಬುದನ್ನು ಒತ್ತಿ. ಪ್ರತಿಬಾರಿ ಡೌನ್‌ಲೋಡ್ ಮಾಡಿದಾಗ ಮಾತ್ರವೇ ಆಯಾಯ ಭಾಷಾ ಸವಲತ್ತುಗಳು ಡೌನ್‌ಲೋಡ್ ಆಗುತ್ತವೆ. ನಿಮ್ಮ ಸ್ಮಾರ್ಟ್ ಫೋನ್ ಡಿವೈಸ್‌ನ ‘ಲಾಂಗ್ವೇಜ್ ಅಂಡ್ ಇನ್‌ಪುಟ್’ ಎಂಬಂತಹ ಸೆಟ್ಟಿಂಗ್‌ಗಳನ್ನು ನಿಗದಿಬೇಕಾದುದು ಅಗತ್ಯ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಂಗ್ಲಿಷ್ ಬಳಕೆಯನ್ನು ನಿಲ್ಲಿಸಿ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಟೈಪಿಸುವುದಕ್ಕೆ ತಿಲಾಂಜಲಿ ನೀಡಿ. ಮುದ್ದಾದ ಕನ್ನಡ ಲಿಪಿಯಲ್ಲಿಯೇ ಕನ್ನಡ ಭಾಷೆಯನ್ನು ಬಳಸೋಣ. ಭಾಷಾಭಿಮಾನದಿಂದ ಕನ್ನಡದಲ್ಲಿಯೇ ಮೆಸೇಜ್ ಮಾಡಬೇಕೆಂದು ಕಷ್ಟಪಟ್ಟು ಟೈಪಿಂಗ್ ಮಾಡುವ ಕಸರತ್ತು ಇನ್ನು ಅಗತ್ಯವಿಲ್ಲ. ತಾಳ್ಮೆವಹಿಸಿ ಮಾಡಬೇಕಾದ ಟೈಪಿಂಗ್ ಅಥವಾ ಬೆರಳೊತ್ತುಗಳನ್ನು ಬಿಟ್ಟುಬಿಡಿ. ಸುಲಭವಾದ ಕೈಬರಹವನ್ನು ಆರಂಭಿಸಿ. ಒಪೆರಾ ಮೊಬೈಲ್ ಬ್ರೌಸರ್‌ನಲ್ಲಿ ಇಮೇಜ್ ಫೈಲ್‌ಗಳನ್ನು ಓದುವ ತಾಪತ್ರಯ ಇನ್ನಿಲ್ಲ. ನಿಮಗೆ ಬಂದ ಕನ್ನಡದ ಮೆಸೇಜ್‌ಗಳು ಚೌಕಾಕಾರದ ಡಬ್ಬಿಗಳಾಗಿ ಕಾಣುವ ಸಮಸ್ಯೆಗಳು ಇನ್ನಿಲ್ಲ. ಒತ್ತಕ್ಷರಗಳೇ ಮೂಡದೆ, ಕನ್ನಡವನ್ನು ಓದಲಾಗದ ಬಿಡಿಬಿಡಿ ಅರ್ಧಾಕ್ಷರಗಳಲ್ಲಿ ಮೂಡುವ ಸಮಸ್ಯೆ ಇನ್ನಿಲ್ಲ.

Writer - ಸತ್ಯನಾರಾಯಣ .ಕೆ.

contributor

Editor - ಸತ್ಯನಾರಾಯಣ .ಕೆ.

contributor

Similar News