ದಲಿತರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳನ್ನು ಹೊರ ತಳ್ಳುತ್ತಿರುವ ಆರ್ಥಿಕತೆ

Update: 2017-07-01 15:13 GMT

2016ರ ಭಾರತೀಯ ಕಡೆಗಣಿತರ ವರದಿಯು ಎಲ್ಲರ ಮೂಲ ಭೂತ ಸೌಕರ್ಯದ ಹಕ್ಕನ್ನು ಈಡೇರಿಸುವ ಸಲುವಾಗಿ ಜಾರಿಗೆ ಬಂದಂತಹ ಸರಕಾರಿ ಕಾರ್ಯಕ್ರಮಗಳ ಸಾಧಕ-ಬಾಧಕಗಳನ್ನು ತೆರೆದಿಡುತ್ತದೆ.

ಮಾನ್ಯ ಪ್ರಧಾನ ಮಂತ್ರಿಗಳ ಸರಕಾರದ ಕುರಿತಂತೆ ಬಿಂಬಿಸಲಾಗಿರುವ ಆಶಯಗಳು ಅತಿರೇಕದ ಸರಮಾಲೆಯೆಂದು ಇದರಿಂದ ಸಾಬೀತಾಗಿದೆ. ಇದಕ್ಕೆ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯೂ ಸಹ ಹೊರತಲ್ಲ. ನ್ಯಾಯ ಅಧ್ಯಯನ ಕೇಂದ್ರವು ಮೇ 12 ರಂದು ಬಿಡುಗಡೆಗೊಳಿಸಿದ ಭಾರತೀಯ ಕಡೆಗಣಿತರ ವರದಿಯ ಸಾರಾಂಶವು ಕೇಂದ್ರ ಸರಕಾರವು 2014 ರಲ್ಲಿ ಏನೆಲ್ಲಾ ಭರವಸೆಗಳನ್ನು ನೀಡಿತ್ತು ಮತ್ತು ಮುಂದೆ ಅದರ ಪರಿಸ್ಥಿತಿ ಏನಾಯಿತು ಎಂಬುದರ ಬಗ್ಗೆ ಈ ವರದಿಯು ವಿವರವಾಗಿ ಅಂಕಿ ಅಂಶಗಳ ಸಮೇತವಾಗಿ ನಮಗೆ ಹೇಳುತ್ತದೆ.

2005ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಇ-ಆಡಳಿತ ಯೋಜನೆಯು ಡಿಜಿಟಲ್ ಇಂಡಿಯಾದ ಮೂಲಕ ಭಾರತದಾದ್ಯಂತ ಎಲ್ಲರಿಗೂ ತಂತ್ರ ಜ್ಞಾನದೊಳಗೆ ಪ್ರವೇಶ ಪಡೆಯುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಇಲ್ಲಿ ಸರಕಾರದ ಯೋಜನೆಯು 2,50,000 ಗ್ರಾಮ ಪಂಚಾಯತ್ ಗಳಿಗೆ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಮೂಲಕ ಅಂತರ್ಜಾಲ ಸಂಪರ್ಕ ವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಉದ್ದೇಶಿತ ಯೋಜನೆ ಯಂತೆ ಮೊದಲ ಹಂತದಲ್ಲಿನ ಒಟ್ಟು ಪ್ರತಿ ಶತದಲ್ಲಿ ಕೇವಲ ಶೇ.6ರಷ್ಟನ್ನು ಮಾತ್ರವೇ ಈಡೇರಿಸಲಾಗಿದೆ. ಬಾಕಿ ಉಳಿದದ್ದು ಎಲ್ಲಿ ಹೋಯಿತೆಂಬ ಪ್ರಶ್ನೆ ಕಾಡುತ್ತಿದೆ.

ಮುಂದುವರಿದಂತೆ, ನಮ್ಮ ದೇಶದಲ್ಲಿ ಶೇ.25.7ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದು ಅವರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಶೇ.13.7ರಷ್ಟು ಬಡ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅಂತರ್ಜಾಲಕ್ಕೆ ಪ್ರವೇಶ ಪಡೆಯುವ ವೆಚ್ಚವು ಜನಗಳಿಗೆ ದುಬಾರಿ ಯಾಗುತ್ತದೆ.

ಕಡೆಗಣಿತರ ವರದಿ ಎಂದರೇನು ?

ಇದೊಂದು ವಾರ್ಷಿಕ ವರದಿಯಾಗಿದ್ದು, ಬಹಳಷ್ಟು ವಿದ್ವಾಂಸರು ಮತ್ತು ಸಾಮಾಜಿಕ ತಜ್ಞರಾದ ಜನರಿಂದ ರೂಪಿಸಲ್ಪಟ್ಟಿದೆ. ಇದು ಜನರಿಗೆ ಸಂಬಂಧಿಸಿದ ಸರಕಾರಿ ಸೇವೆಗಳನ್ನು ಕುರಿತಂತೆ ಇರುವ ವರದಿಯಾಗಿದ್ದು ಶೋಷಿತ ಜನಗಳನ್ನು ಒಳಗೊಳ್ಳುವುದು ಸಾಧ್ಯವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಸಾರ್ವಜನಿಕ ಸರಕುಗಳು, ನಾಲ್ಕು ಮೂಲ ಆವಶ್ಯಕತೆಗಳಾದ ಪಿಂಚಣಿ, ನ್ಯಾಯ, ಕೃಷಿ ಭೂಮಿ ಹೊಂದುವಿಕೆ ಮತ್ತು ಡಿಜಿಟಲ್ ಮಾಧ್ಯಮದೊಳಗೆ ಪ್ರವೇಶಿಸುವುದು ಎಂಬ ಮಾನದಂಡಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯೊಳಗೆ ಈಗಾಗಲೇ ಪ್ರಸ್ತಾಪದಲ್ಲಿದ್ದೂ ಸಹ ಕಡೆಗಣಿಸಲ್ಪಟ್ಟವರ ಕುರಿತಾಗಿ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಡಿಜಿಟಲ್ ಕ್ಷೇತ್ರದಲ್ಲಿ ಕಡೆಗಣಿಸಲ್ಪಟ್ಟ ಶೋಷಿತರ ಸ್ಥಿತಿಯನ್ನು ಮಾತ್ರ ವಲ್ಲದೇ ಇತರ ಸರಕಾರಿ ಯೋಜನೆಗಳಾದ ರಾಷ್ಟ್ರೀಯ ವಯಸ್ಕ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳಲ್ಲಿ ಹೇಗೆ ಶೋಷಿತ ಸಮುದಾಯಗಳು ಕಡೆಗಣಿಸಲ್ಪಟ್ಟಿವೆ ಎಂಬುದರ ಕುರಿತಂತೆ ವರದಿಯು ನಮಗೆ ತಿಳಿಸುತ್ತದೆ.

ದುರ್ಬಲ ಸಮುದಾಯಗಳು ಮತ್ತು ಸ್ವಚ್ಛ ಭಾರತ

ಈ ವರದಿಯು ಐತಿಹಾಸಿಕವಾಗಿ ತುಳಿತಕ್ಕೆ ಒಳಗಾದಂತಹ ಜನರು ಅಂದರೆ ಮಲ ಹೊರುವವರು, ಗ್ರಾಮೀಣ ಬಡಜನರು, ನಗರ ಪ್ರದೇಶದ ಬೀದಿ ಮಕ್ಕಳು ಮತ್ತು ದಿಲ್ಲಿಯಲ್ಲಿ ಮನೆಯಿಲ್ಲದೇ ಬದುಕುತ್ತಿರುವ ಸಮುದಾಯ ಗಳ ಕುರಿತು ಹೆಚ್ಚಿನ ಒತ್ತನ್ನು ನೀಡಿದೆ. ಈ ವರದಿಯು ಕೇವಲ ಶೋಷಿತ ಸಮುದಾಯಗಳನ್ನು ಮಾತ್ರವಲ್ಲದೇ ಇತರ ಸಮುದಾಯಗಳು ಮತ್ತು ಅದರೊಳಗಿನ ಜನರ ವೈಯಕ್ತಿಕ ಬದುಕಿನ ಬವಣೆಗಳನ್ನೂ ಸಹ ಗಣನೆಗೆ ತೆಗೆದುಕೊಂಡಿದೆ.

ಮಲ ಹೊರುವವರಿಗೆ ಬೇರೆ ಉದ್ಯೋಗ ನೀಡುವ ಸಂಬಂಧಪಟ್ಟಂತೆ ಉದ್ಯೋಗ ನೀಡುವಿಕೆ ಮತ್ತು ಒಣ ಶೌಚಾಲಯಗಳ ನಿರ್ಮಾಣ ಕಾಯ್ದೆ (ನಿಷೇಧ) 1993 ರಲ್ಲಿ ಜಾರಿಗೆ ಬಂದಿದ್ದರೂ ಸಹ ನಾಮಕಾವಸ್ಥೆಗೆ ಮಾತ್ರ ಒಂದಿಷ್ಟು ಕೆಲಸವನ್ನು ಮಾಡಿ ಉಳಿದ ಜನರನ್ನು ಹಾಗೆ ಅದೇ ಅಮಾನವೀಯ ಸ್ಥಿತಿಯಲ್ಲೇ ಬಿಡಲಾಗಿದೆ.

 ಈಗಾಗಲೇ ಅನೇಕ ಸರಕಾರಗಳು ಬಡವರ ಅಭಿವೃದ್ಧಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಸಹ ಅವೆಲ್ಲಾ ಕಾಗದದ ಹುಲಿಗಳಾಗಿ ಮಾತ್ರವೇ ಅಬ್ಬರಿಸುತ್ತಿವೆ. ಮಲ ಹೊರುವ ಸಮುದಾಯಗಳಿಗೆ ಸಂಬಂಧಿಸಿದಂತೆ ಯಾವ ಸರಕಾರವೂ ಸಹ ತೃಪ್ತಿಕರವಾಗಿ ಅವರ ಏಳಿಗೆಗಾಗಿ ಶ್ರಮಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಈ ಮಾಹಿತಿಯು ಈಗಿನ ಕೇಂದ್ರ ಸರಕಾರದ ಸ್ವಚ್ಛ ಭಾರತದ ಅಭಿಯಾನಕ್ಕೂ ಸಹ ಸಂಬಂಧಿಸಿದೆ. ಬೀದಿಗಳಲ್ಲಿ ಬಂದು ಸ್ವತಃ ಮೋದಿ ಯವರೇ ಕಸ ಗುಡಿಸಿ ಆರಂಭಿಸಿದಂತಹ ಅವರ ಈ ಜನಪ್ರಿಯ ಯೋಜನೆ ಯು ಬೃಹತ್ ಸಂಖ್ಯೆಯ ಶೌಚಾಲಯಗಳ ನಿರ್ಮಾಣದ ಗುರಿಯನ್ನು ಹೊಂದಿತ್ತು. ಆದರೆ ಅತ್ಯಂತ ಕಳಪೆ ಮಟ್ಟದ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಸೂಕ್ತವಾಗಿ ಸ್ವಚ್ಛತೆಯನ್ನು ನಿರ್ವಹಣೆ ಮಾಡುವಂತಹ ಶೌಚಾಲಯಗಳನ್ನು ನಿರ್ಮಿಸುವುದರಲ್ಲಿ ಸರಕಾರ ವಿಫಲಗೊಂಡಿದೆ.

ಕಾನೂನಾತ್ಮಕ ಹಕ್ಕುಗಳು

ಈ ವರದಿಯು ಮುಖ್ಯವಾಗಿ ಹೇಳುವಂತೆ ನ್ಯಾಯಾಂಗ ವ್ಯವಸ್ಥೆ ಯೊಳಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಮರು ಹಾಗೂ ಬಡಜನರ ಕುರಿತಂತೆ ಪೂರ್ವಾಗ್ರಹವು ಮತ್ತಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧಿ ದಾಖಲೆಗಳ ಪ್ರಕಾರ ಇಂದು ಸೆರೆಮನೆಗಳಲ್ಲಿರುವ ಜನರಲ್ಲಿ ಶೇ.65.56ರಷ್ಟು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜನರು ಕೈದಿಗಳಾಗಿದ್ದು ಶೇ.20.94ರಷ್ಟು ಜನರು ಮುಸ್ಲಿಮರಿದ್ದಾರೆ. ನ್ಯಾಯಾಂಗ ಅಧ್ಯಯನ ಕೇಂದ್ರದ ವರದಿಯ ಪ್ರಕಾರ ಉತ್ತರ ಪ್ರದೇಶ ರಾಜ್ಯದಲ್ಲಿ ಬಡತನ ಮತ್ತು ಅನಕ್ಷರತೆಯೇ ಈ ರೀತಿಯ ಅಪರಾಧಗಳಿಗೆ ಕಾರಣವಾಗುತ್ತಿದೆ. ಬಹುಶಃ ಭಾರತದ ಇನ್ನಿತರ ರಾಜ್ಯಗಳಲ್ಲೂ ಇದಕ್ಕಿಂತಾ ಭಿನ್ನ ಸ್ಥಿತಿ ಇರಲಾರದು.

ದಲಿತ ಹಾಗೂ ಮುಸ್ಲಿಂ ಸಮುದಾಯದಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿದ್ದು ಸೆರೆಮನೆಗಳಲ್ಲಿರುವ ಬಂಧಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಇವರೇ ಆಗಿದ್ದಾರೆ.

ಎಂದಿನಂತೆಯೇ ದಲಿತರು, ಆದಿವಾಸಿಗಳು ಮತ್ತು ಅಲ್ಪ ಸಂಖ್ಯಾತರಿಗೆ ಈ ಹಿಂದೆ ಇದ್ದ ಪರಿಸ್ಥಿತಿಯೇ ಇದೆ. ಇವರನ್ನು ಏತಕ್ಕಾಗಿ ಬಂಧಿಸಲಾಗುತ್ತಿದೆ ಎಂಬುದರ ಕುರಿತು ಅವರಿಗೆ ಸರಿಯಾದ ಮಾಹಿತಿ ಇಲ್ಲದ ಸ್ಥಿತಿ ಇದೆ. ಅದರಲ್ಲೂ ಇತ್ತೀಚೆಗೆ ಗೋಮಾಂಸದ ಆಧಾರದ ಮೇಲೆ ವಿನಾಕಾರಣವಾಗಿ ಬಹಳಷ್ಟು ಜನರನ್ನು ಬಂಧನಕ್ಕೆ ಒಳಪಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಸರಕಾರಿ ಆದೇಶಗಳು ಕ್ರೂರವಾಗಿ, ಪೊಲೀಸರ ದೌರ್ಜನ್ಯಕ್ಕೆ ಪೂರಕವಾಗಿ ನಿಂತಿವೆ.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ಘೋಷಣೆಯಾಗಿ ಮಾತ್ರವೇ ಉಳಿದಿದ್ದು, ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಜನರ ಪರಿಸ್ಥಿತಿ ಇನ್ನೂ ಎಂದಿನಂತೆಯೇ ಇದೆ ಮತ್ತು ಅವರನ್ನು ಈ ಘೋಷಣೆಯಿಂದ ಹೊರಗಿಡಲಾಗಿದೆ ಎಂದು ವರದಿ ಹೇಳುತ್ತದೆ. ಮುಖ್ಯವಾಗಿ ನ್ಯಾಯಾಂಗ ವ್ಯವಸ್ಥೆಯು ಅವರ ಪರವಾಗಿ ಇಲ್ಲದೇ ಇರುವುದು ಅವರಿಗೆ ಇರುವ ಅಪಾಯಕಾರಿ ಸವಾಲಾಗಿದೆ.

ಪೆನ್ಷನ್ ಯೋಜನೆ- ಪರಿಗಣನೆಗಿಂತ ಕಡೆಗಣನೆ

ಜಾಸ್ತಿ ವಯೋವೃದ್ಧರು, ಅಸಹಾಯಕರಾಗಿರುವವರಿಗೆ ಪೆನ್ಷನ್ ನೀಡುವ ಯೋಜನೆಯ ವಸ್ತುಸ್ಥಿತಿಯ ಬಗ್ಗೆಯೂ ಕಡೆಗಣಿತರ ವರದಿ ಬೆಳಕು ಚೆಲ್ಲಿದೆ.

ದೇಶದ ಒಟ್ಟಾರೆ 10 ಕೋಟಿ 30 ಲಕ್ಷ ಹಿರಿಯ, ವಯೋವೃದ್ಧ ನಾಗರಿಕರ ಪೈಕಿ ಅರ್ಧದಷ್ಟು ಮಂದಿಗೆ ಈಗಲೂ ಯಾವುದೇ ರೀತಿಯ ಸಾಮಾಜಿಕ ರಕ್ಷಣೆ ಇಲ್ಲದಿರುವುದನ್ನು ಪ್ರಸ್ತಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಾಂಗಚೇತನರ ಪೈಕಿ ಶೇ.40 ರಷ್ಟು ಮಹಿಳೆಯರಿಗೆ ಉದ್ಯೋಗ ಮಾಡಲು ಆಗುತ್ತಿಲ್ಲವೆಂಬುದು ಒಂದೆಡೆಯಾದರೆ ಸರಕಾರದಿಂದ ಅವರಿಗೆ ಯಾವ ರೀತಿಯ ನೆರವೂ ಸಿಗುತ್ತಿಲ್ಲವೆಂಬುದು ದಾರುಣ ಸತ್ಯವಾಗಿದೆ.

ಇದಲ್ಲದೆ ಅಟಲ್ ಪಿಂಚಣಿ ಯೋಜನೆ ಮತ್ತು ಇನ್ನಿತರ ಯೋಜನೆಗಳನ್ನು ಬಳಸಿಕೊಳ್ಳು ವಾಗಲೂ ಸಹ ಅದು ಶೋಷಿತ ದಲಿತ ವರ್ಗಗಳನ್ನು ದೂರಕ್ಕಿಟ್ಟು ಮುಂದುವರಿಯುತ್ತಿದೆ.

ಗುಜರಾತ್‌ನಲ್ಲಿ ಅರ್ಹರಲ್ಲಿ ಕೇವಲ ಶೇ.25ರಷ್ಟು ಮಾತ್ರವೇ ಪಿಂಚಣಿ ವಿತರಣೆ ಯಾಗಿದ್ದು, ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇನ್ನೂ ಕಳಪೆಯೆಂಬಂತೆ ಏಳು ಲಕ್ಷ ಪಿಂಚಣಿಯನ್ನು ರದ್ದುಗೊಳಿಸಿದ್ದು ಇದರಲ್ಲಿ ಮೂರು ಲಕ್ಷದಷ್ಟು ಪಿಂಚಣಿಗಳನ್ನು ನಕಲಿ ದಾಖಲೆ, ಮರಣ ಎಂಬಿತ್ಯಾದಿ ಸುಳ್ಳು ಆರೋಪಗಳ ಮೂಲಕ ರದ್ದುಪಡಿಸಿರುವುದು ಬಯಲುಗೊಂಡಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 2008ರ ನಂತರ ಕೊಂಚ ಉತ್ತಮ ಗೊಂಡಿದೆಯಾದರೂ ಸಹ ರುವಾಂಡ, ಕಾಂಬೋಡಿಯಾ ಮತ್ತು ಮ್ಯಾನ್ಮಾರ್ ದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿರುವುದು ಗಮನಾರ್ಹ.

ಆದಾಯ ಹಂಚಿಕೆಯಲ್ಲಿನ ತಾರತಮ್ಯಗಳು ನಿಚ್ಚಳವಾಗಿ ಕಾಣುವಂತಿದ್ದು ಇಸವಿ 2000ದಿಂದೀಚೆಗೆ ಒಟ್ಟು ಜನಸಂಖ್ಯೆಯಲ್ಲಿನ ಶೇ.10ರಷ್ಟು ಶ್ರೀಮಂತ ವರ್ಗದವರ ಆದಾಯವು ಹನ್ನೆರಡು ಪಟ್ಟು ಜಾಸ್ತಿಯಾಗಿದೆ.

ಅದೇ ರೀತಿ ಕಡು ಬಡವರು ಎಂದು ಗುರುತಿಸಬಹುದಾದ ಜನರ ಗಳಿಕೆಯಲ್ಲಿ ಹೆಚ್ಚಳವಾ ಗಿರುವುದು ಕೇವಲ ಮೂರು ಪಟ್ಟು ಮಾತ್ರ. ಆದರೆ ಈ ಹೆಚ್ಚಳವೂ ಬೆಲೆ ಏರಿಕೆಯ ಸೂಚ್ಯಂಕದಡಿ ಸಿಲುಕಿ ಜನರ ಕೈಗೆ ವಾಸ್ತವದಲ್ಲಿ ತಲುಪಿಯೇ ಇರದಂತಾಗಿರುತ್ತದೆ.

ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕೆ ಹೋಲಿಸಿದಲ್ಲಿ ಈಗಿನ ಕೇಂದ್ರ ಸರಕಾರವು ಶೋಷಿತರನ್ನು ಹೆಚ್ಚು ಹೆಚ್ಚಾಗಿ ಹೊರಗಿಡುತ್ತಲೇ ಇರುವಂತೆ ಕಾಣುತ್ತಿದೆ. ಶೇ.70ರಷ್ಟು ಶೋಷಿತ ಜನರು ಸರಕಾರದ ಯಾವ ನೆರವೂ ಇಲ್ಲದೆ, ಇನ್ನೂ ತಮ್ಮ ಸ್ವಂತ ಶ್ರಮದ ಆಧಾರದ ಮೇಲೆ ತಮ್ಮ ಸೂರುಗಳನ್ನು ನಿರ್ಮಿಸಿಕೊಳ್ಳುತ್ತಿದ್ದು ಭಾರತದಾದ್ಯಂತ ವಿವಿಧ ಮಟ್ಟದಲ್ಲಿ ಶೇ.66ರಷ್ಟು ಜನರು ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬಡತನರೇಖೆ ಎಂಬುದು ಬಡತನದ ಅನುಭವವನ್ನು ವಿವರಿಸುವ ಸುಸಜ್ಜಿತವಾದ ಮಾನದಂಡವಾಗಿದೆ. ಆದರೆ ತಮ್ಮ ಮಾನ-ಪ್ರಾಣ ಉಳಿಸಿಕೊಳ್ಳಬೇಕಾದ ಹೊಣೆ ಕಡೆಗಣಿತರದ್ದೇ ಆಗಿದ್ದು ಸರಕಾರವು ಕೇವಲ ‘ದಂಡ’ವನ್ನು ಹಿಡಿದಿರುವಂತಿದೆ.

ಕೃಷಿ ಮತ್ತು ಉದ್ಯೋಗ

ನರೇಂದ್ರ ಮೋದಿಯವರು 2015 ರಲ್ಲಿ 1.35 ಲಕ್ಷದಷ್ಟು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ನೀಡಿದ್ದರು. ಆದರೆ ವಿಪರ್ಯಾಸವೆಂಬಂತೆ ಇದೀಗ ಎಲ್ಲೂ ಸರಿಯಾದ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಯುಪಿಎ ಸರಕಾರದ ಅವಧಿಯ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳು ಮತ್ತು ಆಗ ಉದ್ಯೋಗ ಸೃಷ್ಟಿಗೊಂಡ ಮಟ್ಟಕ್ಕೆ ಹೋಲಿಸಿದರೆ ಈಗ ಏನೇನೂ ಇಲ್ಲ ಎಂದೇ ಹೇಳಬೇಕಾಗುತ್ತದೆ ಎಂದು ವರದಿಯು ಹೇಳುತ್ತದೆ.

ಕೋಯೆನ್ ಕೊಂಪೀರ್ ಅವರ 2013-14 ನೆ ವರದಿಯು ಹೇಳುವಂತೆ ಅತಿಕಡಿಮೆ ಉದ್ಯೋಗಗಳನ್ನು ಸೇರ್ಪಡೆಗೊಳಿಸಲಾಗಿದೆ ಮತ್ತು ಸೇರ್ಪಡೆಗೊಳಿಸಿದ ಉದ್ಯೋಗಗಳು ತೀರಾ ಕಳಪೆ ಗುಣ ಮಟ್ಟದವು. ಅಲ್ಲದೇ ಕೃಷಿ ಕ್ಷೇತ್ರ, ಉದ್ಯಮ, ಖಾಸಗಿ ವಲಯದಲ್ಲಿ ಇದರ ಪ್ರಭಾವ ಅತ್ಯಂತ ಕಡಿಮೆ ಎಂದು ಹೇಳಬಹುದು.

ಕೃಷಿ ಕ್ಷೇತ್ರದಲ್ಲಿನ ವಿದ್ಯಮಾನಗಳನ್ನು ವಿಶ್ಲೇಷಿಸಿರುವ ಕಡೆಗಣಿತರ ವರದಿಯು ಕೆಲ ಗಮನಾರ್ಹ ಅಂಕಿ ಅಂಶಗಳನ್ನು ನೀಡುತ್ತದೆ.

ಭೂ ಒಡೆತನದ ಹಂಚಿಕೆಯು ಭಾರತದ ಸಮಾಜೋ ಆರ್ಥಿಕ ಸಂರಚನೆಯನ್ನು ಪ್ರತಿಬಿಂಬಿಸುವಂತಿದೆ ಅತಿ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಹೊಂದಿರುವವರು ಮೇಲ್ಜಾತಿಯವರಾಗಿದ್ದಾರೆ. ಮಧ್ಯಮ ಹಂತದ ಜಾತಿಗಳವರು ವ್ಯವಸಾಯ ಮಾಡುತ್ತಿದ್ದರೆ ದಲಿತರು ಹಾಗೂ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿಗಳಾಗಿಯೇ ಮುಂದುವರಿದಿರುವುದನ್ನು ವರದಿಯು ಗುರುತಿಸಿದೆ.

ದಲಿತ ಸಮುದಾಯದ ಶೇ.52.6ರಷ್ಟು ಹಾಗೂ ಮುಸ್ಲಿಮರಲ್ಲಿ ಶೇ.52ರಷ್ಟು ಭೂರಹಿತರಿದ್ದರೆ ಮಹಿಳೆಯರೇ ಕುಟುಂಬ ನಿರ್ವಹಣೆ ಮಾಡುತ್ತಿರುವವರ ಪೈಕಿ ಶೇ.56ರಷ್ಟು ಮಂದಿ ಭೂರಹಿತರಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ನಿರಾಶ್ರಿತರಾದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.40ಕ್ಕೂ ಹೆಚ್ಚು ಮಂದಿ ಆದಿವಾಸಿಗಳೇ ಆಗಿರುವುದನ್ನು ವರದಿಯು ಹೇಳುತ್ತದೆ.

ದಲಿತರು, ಮುಸ್ಲಿಮರು ಹಾಗೂ ಮಹಿಳೆಯರು ಹೊಂದಿರುವ ಭೂಮಿಯ ವಿಸ್ತೀರ್ಣವು ಅತೀ ಕಡಿಮೆಯದಾಗಿದ್ದು ಎರಡು ಎಕರೆಗಳಿಗಿಂತ ಹೆಚ್ಚಿನ ಭೂಮಿ ಹೊಂದಿರು ವವರ ಸಂಖ್ಯೆ ಕೇವಲ ಶೇ.2.08ರಷ್ಟಿದೆ. ಇದಲ್ಲದೆ ಈ ಸಮುದಾಯಗಳು ಹೊಂದಿರುವ ಭೂಮಿಯ ಗುಣಮಟ್ಟ ಸಹ ಕಳಪೆಯಾಗಿದ್ದು ಶೇ.58ರಷ್ಟು ಭಾಗ ನೀರಾವರಿಯ ಅನುಕೂಲ ಇರದ ಕೃಷಿ ಭೂಮಿಯಾಗಿದೆ.

ಇನ್ನು ಕೃಷಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಟ್ಟು ಶೇ.55ರಷ್ಟು ಜನರು ನೇರವಾಗಿ ಈ ವಲಯದಲ್ಲಿದ್ದು ಇವರಿಗಾಗಿ ಸರಕಾರವು ಹೂಡಿಕೆ ಮಾಡಿರುವ ಪ್ರಮಾಣ ಶೇ.4ರಷ್ಟು ಮಾತ್ರವೇ ಆಗಿದೆ. ಇದರಿಂದಾಗಿ ಕೃಷಿ ಉತ್ಪಾದನೆಯು ಗಂಭೀರ ಪ್ರಮಾಣದಲ್ಲಿ ಕಡಿಮೆಗೊಂಡಿದ್ದು ಹಸಿವು ಮತ್ತು ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ. ಇದೇ ಕಾರಣಕ್ಕೆ ಈ ಹಿಂದೆ ಶೇ.16.5ರಷ್ಟಿದ್ದ ಕೃಷಿಕರ ನಗರ ವಸೆ ಪ್ರಮಾಣವು ಇದೀಗ ಶೇ.21.1ರಷ್ಟು ಆಗಿದೆ.

ರಾಷ್ಟ್ರೀಯ ದಾಖಲೆಗಳ ಬ್ಯೂರೋನ ಪ್ರಕಾರ ಕಳೆದ 20 ವರ್ಷಗಳಿಂದ 2014 ರ ತನಕ ಒಟ್ಟು 3 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳಷ್ಟು ಜನರು ಕೃಷಿಯನ್ನು ತೊರೆದು ಸಾಮಾನ್ಯ ಕೂಲಿ ಕಾರ್ಮಿಕರಾಗಿ ಮಾರ್ಪಟ್ಟಿದ್ದು ಅವರೆಲ್ಲಾ ದೀರ್ಘಕಾಲದ ಬಡತನಕ್ಕೆ ತುತ್ತಾಗಿದ್ದಾರೆ ಎಂದು ವರದಿಯು ಸ್ಪಷ್ಟ ಪಡಿಸಿದೆ.

ಉತ್ತಮವಾದ ಸರಕಾರ ಬಂತು ಎಂದು ಬಹುತೇಕರು ಸಂಭ್ರಮ ಪಡುವ ಸ್ಥಿತಿಯಲ್ಲಿ ಇಷ್ಟೆಲ್ಲಾ ಜನಪರವಲ್ಲದ ಸಂಗತಿಗಳೇ ಹೆಚ್ಚಾಗಿ ನಡೆಯುತ್ತಿವೆ ಇಂತಹ ಅತಂಕಗಳ ಬಗ್ಗೆ ಸರಕಾರವು ನಿರ್ಲಕ್ಷ್ಯ ಹೊಂದಿರುವುದು ಮತ್ತು ಬೇಡದ ಯೋಜನೆಗಳಿಗೆ ಹೆಚ್ಚು ಶ್ರಮ ಮತ್ತು ಆಸಕ್ತಿಯನ್ನು ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ಕಳವಳದ ಸಂಗತಿ. ಇವೆಲ್ಲಾ ವಿದ್ಯ ಮಾನಗಳನ್ನು ಗಮನಿಸುತ್ತಿದ್ದರೆ, ಜನಪರ ಯೋಜನೆಗಳು ತಮ್ಮ ಅರ್ಥವನ್ನು ಕಳೆದುಕೊಂಡು, ಪ್ರಬಲ ವರ್ಗಗಳ ಕಾಲಡಿಯಲ್ಲಿ ನರಳುತ್ತಿದೆ ಎಂದೇ ನಾವು ಅರ್ಥ ಮಾಡಿಕೊಳ್ಳಬೇಕು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷಣೆಯು ಇಂಡಿಯಾದ ಕಡೆಗಣಿತರ ಪಾಲಿಗೆ ಮರೀಚಿಕೆಯೇ ಆಗಿರುವಂತಿದೆ.

ವಿಶ್ವ ಹಸಿದವರ ಸೂಚ್ಯಂಕ

ಭಾರತದ ಕಡೆಗಣಿತರ ವರದಿಯೊಂದಿಗೆ ಪರಿಶೀಲಿಸಬೇಕಾದ ಇನ್ನೊಂದು ವರದಿ ಎಂದರೆ ವಿಶ್ವ ಹಸಿವಿನ ಅಥವಾ ಹಸಿದವರ ಸೂಚ್ಯಂಕ. ಜರ್ಮನಿಯ ಇಂಟರ್‌ನ್ಯಾಶನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯು 2006 ರಿಂದ ಪ್ರತೀ ವರ್ಷ ಈ ವರದಿ ಪ್ರಕಟಿಸುತ್ತಿದೆ. 2016 ರ ವರದಿಯು ಭಾರತ ಹಾಗೂ ನೆರೆಯ ದೇಶಗಳ ಜನರ ಸ್ಥಿತಿಯ ಬಗ್ಗೆ ಹೀಗೆ ಹೇಳಿದೆ.

ಈ ಸಮೀಕ್ಷೆಯನ್ನು ವಿಶ್ವದ ಒಟ್ಟು 118 ದೇಶಗಳ ಅಂಕಿಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದ್ದು ಅದರಲ್ಲಿ ಭಾರತದ ಸ್ಥಾನ 97 ಆಗಿದೆ. ಚೀನಾ, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿರುವುದು ಗಮನಾರ್ಹ.

ಹಾಗೆ ನೋಡಿದರೆ ಭಾರತದಲ್ಲಿ ಶಾಲಾ ಮಕ್ಕಳಿಗಾಗಿ ಬಿಸಿಯೂಟ ಯೋಜನೆ ಹಾಗೂ ಅಂಗನವಾಡಿ ಶಿಶುಗಳಿಗೆ ಪೌಷ್ಟಿಕ ಆಹಾರವೆಂಬ ಎರಡು ಯೋಜನೆಗಳು ಇರುವಾಗಲೂ ಈ ಸ್ಥಿತಿ ಇದೆಯೆಂದರೆ ಭಾರತದ ಬಡವರ ಬದುಕು ಅದಿನ್ನೆಷ್ಟು ಘೋರವಾಗಿರಬಹುದು.

ಶಾಂತಿಯುತ ದೇಶಗಳ ಪಟ್ಟಿಯಲ್ಲಿ

ಭಾರತದ ಸ್ಥಾನ ಕೆಳಗೆ!

ವಿಶ್ವದ ಸಾಕ್ಷರತೆ, ಆರೋಗ್ಯ ಸೇರಿದಂತೆ ಜೀವನ ಮಟ್ಟವನ್ನು ಅಳೆಯುವ ವಿಧಾನವಿರುವಂತೆಯೇ ವಿಶ್ವದ ಶಾಂತಿಯುತ ದೇಶಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.

ಆಸ್ಟ್ರೇಲಿಯಾದ ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್ ಎಂಬ ಸಂಶೋಧನಾ ಸಂಸ್ಥೆಯು 2007ರಿಂದ ಪ್ರತೀ ವರ್ಷ ಈ ಪಟ್ಟಿಯನ್ನು ಪ್ರಕಟಿಸುತ್ತಿದೆ. ಇತ್ತೀಚೆಗೆ ಪ್ರಕಟಿಸಲಾಗಿರುವ ಒಟ್ಟು 162 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 137ರಲ್ಲಿದೆ!

ಆಸ್ಟ್ರೇಲಿಯಾದ ತಂತ್ರಜ್ಞ ಸ್ಟೀವ್ ಕಿಲ್ಲೇಲಾ ಎಂಬಾತನ ಮುಂತೊಡ ಗುವಿಕೆಯಿಂದ ಆರಂಭಗೊಂಡ ಈ ಅಧ್ಯಯನವನ್ನು ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ ಕೋಫಿ ಅನ್ನಾನ್, ದಲಾಯಿ ಲಾಮ, ದಕ್ಷಿಣ ಆಫ್ರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಡೆಸ್ಟಂಡ್ ಟುಟು, ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನುಸ್, ಐರ್‌ಲ್ಯಾಂಡಿನ ಮಾಜಿ ಅಧ್ಯಕ್ಷೆ ಮೇರಿ ರಾಬಿನ್‌ಸನ್ ಮುಂತಾದವರು ಅನುಮೋದಿಸಿದ್ದಾರೆ.

ಸಾಮಾಜಿಕ ಭದ್ರತೆ ಹಾಗೂ ಶಾಂತಿ, ಆಂತರಿಕ ಹಾಗೂ ಬಾಹ್ಯ ಸಂಘರ್ಷಗಳು, ಮಿಲಿಟರೀಕರಣ, ದೇಶದೊಳಗಿನ ಹಿಂಸಾಚಾರ, ಯುದ್ಧ, ಮಿಲಿಟರಿ ವೆಚ್ಚ, ಮುಂತಾದ ಮಾನದಂಡಗಳ ಆಧಾರದಲ್ಲಿ, ವ್ಯಾಪಕ ಅಧ್ಯಯನ, ಅಂಕಿಅಂಶಗಳ ಸಂಗ್ರಹದೊಂದಿಗೆ ವಿಶ್ಲೇಷಿಸಿ ಈ ‘ಶಾಂತಿಯುತ ದೇಶಗಳ ಪಟ್ಟಿ’ ಸಿದ್ಧ್ದಗೊಳಿಸಲಾಗುತ್ತದೆ.

ಒಂದು ದೇಶದೊಳಗಿನ ಸಂಘರ್ಷಮಯ ಸ್ಥಿತಿಗತಿಗಳು, ಸಂಘಟಿತ ಹಿಂಸಾಚಾರ, ಸಂಭವಿಸುವ ಸಾವುಗಳು, ಕ್ರಿಮಿನಲ್ ಚಟು ವಟಿಕೆಗಳು, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ರಾಜಕೀಯ ಭಯೋ ತ್ಪಾದನೆ, ಸೆರೆವಾಸಿಗಳ ಸಂಖ್ಯೆ... ಮುಂತಾದ ವಿಚಾರಗಳ ಬಗ್ಗೆ ಆಯಾ ದೇಶಗಳಲ್ಲಿನ ಮಾಹಿತಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಅಂಕಿಅಂಶಗಳ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ.

ಈಗ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸ್ಲೋಗನ್‌ನ ಭಾರತದ ಸ್ಥಾನ 2017ರಲ್ಲಿ ಎಲ್ಲಿದೆ ನಮ್ಮ ನೆರೆ ದೇಶಗಳು ಎಲ್ಲಿವೆ ಎಂಬುದನ್ನು ನೋಡೋಣ.

                    ಕ್ರ.ಸಂ.ದೇಶಸ್ಥಾನ

                    1.ಭೂತಾನ್ 13

                    2.ಶ್ರೀಲಂಕಾ 80

                    3.ಬಾಂಗ್ಲಾದೇಶ 84

                    4.ನೇಪಾಳ 93

                    5.ಮ್ಯಾನ್ಮಾರ್ 104

                    6.ಚೀನಾ 116

                    7.ಥ್ಯಾಯ್ಲೆಂಡ್ 120

                    8.ಭಾರತ 137

                    9.ಪಾಕಿಸ್ತಾನ 152

                    10.ಅಫ್ಘಾನಿಸ್ತಾನ 162

ಆಂತರ್ಯುದ್ಧದಿಂದ ನಲುಗಿದ ಶ್ರೀಲಂಕಾಗಿಂತ, ಬಡವರ ದೇಶ ಬಾಂಗ್ಲಾಗಿಂತ, ರಾಜಕೀಯ ಅಸ್ಥಿರತೆ ಇರುವ ನೇಪಾಳಕ್ಕಿಂತ, ಮಿಲಿಟರಿ ಆಡಳಿತ, ಆಂತರಿಕ ಸಂಘರ್ಷದ ಮ್ಯಾನ್ಮಾರ್‌ಗಿಂತ ಭಾರತದ ಸ್ಥಾನ ಕೆಳಗಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.

ಅಷ್ಟೇ ಅಲ್ಲ. ಒಂದು ಪ್ರಜಾಸತ್ತಾತ್ಮಕ, ಸೆಕ್ಯುಲರ್ ಮೌಲ್ಯಗಳೊಂದಿಗೆ ಶಾಂತಿಯುತ ಹಾದಿಯಲ್ಲಿ ಅಭಿವೃದ್ಧಿ ಹೊಂದಲು ಭಾರತವು ಕ್ರಮಿಸ ಬೇಕಾದ ಹಾದಿ ಇನ್ನೂ ಬಹಳ ದೂರವಿದೆ ಎಂಬುದನ್ನು ಈ ಅಧ್ಯಯನವು ಹೇಳುತ್ತಿದೆ.

Writer - ರಮೇಶ್. ಹೆಚ್.ಕೆ. ಶಿವಮೊಗ್ಗ

contributor

Editor - ರಮೇಶ್. ಹೆಚ್.ಕೆ. ಶಿವಮೊಗ್ಗ

contributor

Similar News