×
Ad

ಸಮಾಜ ಸಹಕರಿಸಿದರೆ ಮಾತ್ರ ಭ್ರಷ್ಟಮುಕ್ತ ರಾಜ್ಯ ನಿರ್ಮಾಣ: ಪಿ.ವಿಶ್ವನಾಥಶೆಟ್ಟಿ

Update: 2017-07-01 21:19 IST

ಬೆಂಗಳೂರು, ಜು.1: ಆಡಳಿತದಲ್ಲಿ ಪಾರದರ್ಶಕತೆ ಇದೆಯೇ ಎಂಬುದನ್ನು ನೋಡುವುದು ಲೋಕಾಯುಕ್ತರ ಕೆಲಸ. ಅದಕ್ಕೆ ಸಮಾಜ ಉತ್ತಮ ರೀತಿಯಲ್ಲಿ ಸಹಕಾರ ನೀಡಿದರೆ ಭ್ರಷ್ಟಮುಕ್ತ ರಾಜ್ಯ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಶನಿವಾರ ನಗರದ ಹಂಪಿ ನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಕನ್ನಡ ಕರಾವಳಿ ವೇದಿಕೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಮತ್ತು ಹರಿದಾಸ ಕೀರ್ತನಕಾರ ಡಾ. ವಿದ್ಯಾಭೂಷಣ ಅವರಿಗೆ ‘ಕರಾವಳಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಒಳ್ಳೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಲೋಕಾಯುಕ್ತ ಸಂಸ್ಥೆಗೆ ಸಹಕರಿಸಬೇಕು. ಜನರು ತಮ್ಮ ಕೆಲಸ ಕಾರ್ಯಗಳು ಸುಗಮವಾಗಲಿ ಎಂದು ಎಲ್ಲಿಯವರೆಗೆ ಜನರಿಗೆ ಆಮಿಷ ಒಡ್ಡುತ್ತಾರೋ, ಅಲ್ಲಿಯವರೆಗೂ ಅಧಿಕಾರಿಗಳೂ ಅದನ್ನು ಸ್ವೀಕರಿಸುತ್ತಾರೆ. ಆದ್ದರಿಂದ ಜನರು ಆಮಿಷ ಒಡ್ಡುವುದನ್ನು ಬಿಡಬೇಕು ಎಂದ ಅವರು, ಕರಾವಳಿಯ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಪಾರದರ್ಶಕತೆಗೆ ಹೆಸರಾದವರು ಹಾಗೂ ಇತರರಿಂದ ಗೌರವ ಪಡೆದವರು. ಆ ಮೂಲಕ ಮೌಲ್ಯಯುತ ಜೀವನ ನಡೆಸುವ ಕರಾವಳಿ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಕೊಡುಗೆ ನೀಡಿದೆ ಎಂದು ಹೇಳಿದರು.

ಸರಕಾರ ಅಥವಾ ಖಾಸಗಿ ಸಂಘಸಂಸ್ಥೆಗಳು ಯಾವುದೇ ಆಗಲಿ ಪ್ರಶಸ್ತಿ ನೀಡುವಾಗ ಬೇಸರ ಆಗುತ್ತದೆ. ಯಾವುದೇ ಪ್ರಶಸ್ತಿ ನೀಡುವ ಮೊದಲು ಯಾರಿಗೆ ನೀಡುತ್ತಿದ್ದೇವೆ ಎಂಬುದನ್ನು ಅರಿಯಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ನೀಡುವ ಪ್ರಶಸ್ತಿ ಅವರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಅಂತಹವರು ಮುಂದಿನ ಪೀಳಿಗೆಗೆ ಆದರ್ಶ ವ್ಯಕ್ತಿಗಳಾಗಬೇಕು ಎಂದರು.

ಸಚಿವ ಯು.ಟಿ. ಖಾದಾರ್ ಮಾತನಾಡಿ, ಒಗ್ಗಟ್ಟು, ಏಕತೆ ಯಶಸ್ಸಿಗೆ ಕಾರಣ ಎಂಬುದನ್ನು ಕನ್ನಡ ಕರಾವಳಿ ವೇದಿಕೆ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಸಾಬೀತುಪಡಿಸಿದೆ. ಇಂದು ಪ್ರಶಸ್ತಿ ಸ್ವೀಕರಿಸಿರುವವರಲ್ಲಿ ಒಬ್ಬರು ವೈದ್ಯ ಕ್ಷೇತ್ರಕ್ಕೆ, ಮತ್ತೊಬ್ಬರು ಅಧ್ಯಾತ್ಮದ ಮೂಲಕ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ಗೌರವಿಸುವ ಮೂಲಕ ವೇದಿಕೆ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಕರಾವಳಿ ಪ್ರದೇಶದ ಗಾಳಿ ಮತ್ತು ಮಣ್ಣಿನಲ್ಲಿ ಏನೋ ಒಂದು ವಿಶೇಷತೆ ಇದೆ. ವೈದ್ಯಕೀಯ, ಬ್ಯಾಂಕಿಂಗ್, ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕರಾವಳಿ ಜನರು ಮುಂದಿದ್ದಾರೆ. ಉತ್ತಮ ಆರೋಗ್ಯದಲ್ಲೂ ಕರಾವಳಿ ಭಾಗ ಮುಂದಿದೆ. ನವಜಾತ ಶಿಶುಗಳ ಸಾವಿನ ಹಾಗೂ ಗರ್ಭಿಣಿಯ ಸಾವಿನ ಪ್ರಮಾಣ ಗಮನಿಸಿದರೆ ಕರಾವಳಿ ಪ್ರದೇಶ ಅಮೆರಿಕಾ ಮತ್ತು ಇಂಗ್ಲೆಂಡ್‌ಗಿಂತ ಉತ್ತಮವಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಯೂ ಆರೋಗ್ಯ ವಲಯದಲ್ಲಿ ಕರಾವಳಿಯಂತಾಗಬೇಕು ಎಂದು ಹೇಳಿದರು.

ಹರಿದಾಸ ಕೀರ್ತನಕಾರ ಡಾ. ವಿದ್ಯಾಭೂಷಣ ಮಾತನಾಡಿ, ಯಾವುದೇ ಪ್ರಶಸ್ತಿ, ಗೌರವ, ಸನ್ಮಾನಗಳು ನಮಗಲ್ಲ, ಅದು ಮತ್ತಾವುದೋ ಒಳ್ಳೆಯ ಕೆಲಸಕ್ಕೆ ನಾಂದಿ ಎಂದು ತಿಳಿಯಬೇಕು. ವ್ಯಕ್ತಿಯಲ್ಲಿರುವ ಸದ್ಗುಣ, ಸ್ವಭಾವಗಳು ಚೀಲದಲ್ಲಿನ ಸಕ್ಕರೆ ಹಾಗು ಧಾನ್ಯಗಳಂತೆ. ಅದನ್ನು ಕಳೆದುಕೊಂಡಲ್ಲಿ ಧಾನ್ಯಗಳು ಮುಗಿದನಂತರ ಚೀಲ ಕಾಲು ಒರೆಸಲು ಬಳಕೆ ಮಾಡಿದಂತೆ ಮನ್ಯಷ್ಯನ ಸ್ಥಿತಿಯೂ ಆಗುತ್ತದೆ. ಆದ್ದರಿಂದ ಒಳಿತನ್ನು ರೂಢಿಸಿಕೊಳ್ಳಬೇಕು ಎಂದ ಅವರು, ಕರಾವಳಿ ಪ್ರದೇಶ ಹಾಗೂ ಅಲ್ಲಿನ ಜನರ ಮೇಲೆ ಸ್ವಾಭಿಮಾನಿ ಹಾಗೂ ಸದಭಿಮಾನಿಯಾದ ಪರಶುರಾಮನ ವಿಶೇಷ ಅನುಗ್ರಹವಿದೆ. ಆದ್ದರಿಂದ ಕರಾವಳಿಗರು ಸ್ವಾಭಿಮಾನದಿಂದ ಬದುಕಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ಡಿ. ಚಂದ್ರಹಾಸ್ ರೈ, ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ, ಕನ್ನಡ ಕರಾವಳಿ ವೇದಿಕೆ ಅಧ್ಯಕ್ಷ ರವಿರಾಜ್ ಎಸ್. ಶೆಟ್ಟಿ, ಗೌರವ ಕಾರ್ಯದರ್ಶಿ ಎಚ್. ಅರುಣ್‌ಕುಮಾರ್ ಶೆಟ್ಟಿ, ಸಂಚಾಲಕ ಕೆ. ಅಜಿತ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News