ಬದುಕು, ಬದುಕಗೊಡು ಕೌಶಲ್ಯ

Update: 2017-07-01 17:15 GMT

ಏನು ಮಾಡಬೇಕೋ ತೋಚುತ್ತಿಲ್ಲ

‘‘ನನಗೇನು ಮಾಡಬೇಕೋ ತೋಚುತ್ತಿಲ್ಲ’’ ಎನ್ನುವವರನ್ನು ನೋಡಿರುತ್ತೀರಿ. ನೀವೂ ಯಾವಾಗಲಾದರೂ ಅಂದಿರಬಹುದು. ಆದರೆ ಅದೊಂದು ಸಕಾರಾತ್ಮಕ ವಾದ ಮತ್ತು ಕೌಶಲ್ಯದ ಭಾವಪ್ರಕಟಣೆ ಅಲ್ಲ. ಭಾವುಕತೆಯ ಕೌಶಲ್ಯವನ್ನು ಹೊಂದಿರುವವರು ತಮಗೆ ಒದಗಿರುವ ಇಂತಹ ಪರಿಸ್ಥಿತಿಯನ್ನು ವ್ಯಕ್ತಪಡಿ ಸುವುದಿಲ್ಲ. ಆದರೆ ಏನು ಮಾಡಬೇಕೋ ತೋಚದೇ ಇರುವಂತಹ ಪರಿಸ್ಥಿತಿ ಒದಗಿರುವುದು ನಿಜವೇ ಆಗಿರುತ್ತದೆ. ಆದರೆ, ನಮ್ಮ ತಾಳ್ಮೆ, ವಿವೇಚನೆ ಮತ್ತು ಏಕಾಗ್ರತೆಯಿಂದ ಸರಿಪಡಿಸಿಕೊಳ್ಳಬಹುದಾದಂತಹ ವಿಷಯವನ್ನು ಇತರರ ಅಧೀನಕ್ಕೆ ಕೊಟ್ಟು, ಪರಿಸ್ಥಿತಿಯನ್ನು ಇನ್ನಷ್ಟು ಬಗ್ಗಡ ಎಬ್ಬಿಸಿಕೊಳ್ಳುವಂತಹ ಹೇಳಿಕೆ ‘‘ನನಗೇನು ಮಾಡಬೇಕೋ ತೋಚುತ್ತಿಲ್ಲ.’’ ಯಾರಿಗೆ ತಮ್ಮ ಭಾವುಕತೆಯ ಕೌಶಲ್ಯವನ್ನು ಉಪಯೋಗಿಸಿಕೊಳ್ಳಲು ಬರು ವುದಿಲ್ಲವೋ ಅವರು ತಮ್ಮ ಮನಸ್ಥಿತಿಯನ್ನು ಮತ್ತು ಪರಿಸ್ಥಿತಿಯಿಂದ ಒದಗಿರುವ ನಕಾರಾತ್ಮಕವಾದ ಭಾವನೆಯನ್ನು ತಟ್ಟನೆ ವ್ಯಕ್ತಪಡಿಸಿಬಿಡುತ್ತಾರೆ. ಎಮೋ ಶನಲ್ ಇಂಟಲಿಜೆನ್ಸ್ ಇಲ್ಲದಿರುವವರ ಮೊದಲನೆಯ ಲಕ್ಷಣವೇ ಇದು.

ಅಸಹಾಯಕತೆಯ ಪ್ರದರ್ಶನ ಅಧೀರತೆಗೆ ಕಾರಣ

ಇನ್ನು ಮಕ್ಕಳ ಎದುರಿನಲ್ಲಿ ಇಂತಹ ಅಸಹಾಯಕತೆಯ ಪ್ರದರ್ಶನ ಮಾಡುವು ದರಿಂದ ಅವರೂ ಅಸಹಾಯಕತೆಯನ್ನು ಹೊಂದುತ್ತಾರೆ. ಅಲ್ಲದೇ ಅಂತಹ ಪರಿಸ್ಥಿತಿ ಅಥವಾ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂಬ ಒಂದು ಮಾದರಿ ಅಥವಾ ಉದಾಹರಣೆ ಸಿಗದೇ ಹೋಗುವುದು. ಆದ್ದರಿಂದ ಮಕ್ಕಳ ಎದುರಿಗೆ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಕೈ ಚೆಲ್ಲುವಂತೆ ವರ್ತಿಸಬಾರದು. ಇದರಿಂದ ಅವರು ಮತ್ತಷ್ಟು ಅಧೀರರಾಗುತ್ತಾರೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಂದರ್ಭವನ್ನು ಎದುರಿಸುವಾಗ ಬೇರೆಯವರ ಸಹಾಯವನ್ನು ಕೋರುವುದು ಕೂಡ ಪರಿಸ್ಥಿತಿಯನ್ನು ನಿಭಾಯಿಸುವಂತಹ ಕೆಲಸವೇ ಆಗಿರುತ್ತದೆ. ಆದರೆ, ಕೈ ಚೆಲ್ಲುವುದು ಅಧೀರತೆಯ ಲಕ್ಷಣ. ಭಾವುಕತೆ ಯ ಕೌಶಲ್ಯವನ್ನು ನಿಭಾಯಿಸಲಾಗದೇ ಅಧೀರರಾದಾಗ ಅನರ್ಹರ ಉಪದೇಶಗಳನ್ನು, ವ್ಯರ್ಥ ಕೆಲಸಗಳಿಗೆ ತೊಡಗುವಂತಹ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಸಲಹೆ ಮತ್ತು ಸೂಚನೆಗಳನ್ನು ನೀಡುವವರ ಸಂಖ್ಯೆ ಬಹಳ ದೊಡ್ಡದಾಗಿ ಯಾವುದನ್ನು ಸ್ವೀಕರಿಸುವುದು ಮತ್ತು ಬಿಡುವುದು ಎಂಬುದೇ ತಿಳಿಯದೇ ಪರಿಸ್ಥಿತಿಯು ಮತ್ತಷ್ಟು ಗೊಂದಲಕ್ಕೀಡಾಗುತ್ತದೆ.

ಹಾಗಾದರೆ ನಾವು ಅಸಹಾಯಕರಾಗಿ ಏನು ಮಾಡಬೇಕೆಂದು ತೋಚದೇ ಹೋಗುವುದನ್ನು ವ್ಯಕ್ತಪಡಿಸುವುದು ಬೇಡವೇ? ಖಂಡಿತ ವ್ಯಕ್ತಪಡಿಸಬೇಕು. ಆದರೆ ಅದನ್ನು ಸಂಯಮವಾಗಿ ಮತ್ತು ಅರ್ಹ ವ್ಯಕ್ತಿಗಳೊಂದಿಗೆ ಯೋಜನೆಗ ಳನ್ನು ರೂಪಿಸುವ ತೆರದಲ್ಲಿ ವ್ಯಕ್ತಪಡಿಸಬೇಕು. ಅದಕ್ಕೆ ಬೇಕಾದ ಮೊದಲ ಸಾಮರ್ಥ್ಯವೆಂದರೆ, ಸದ್ಯಕ್ಕೆ ಒದಗಿರುವವರಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸುವುದು.

ಎಷ್ಟೋ ಸಲ, ನಮ್ಮ ನಡೆ ಪ್ರಜಾಪ್ರಭುತ್ವದಿಂದ ಕೂಡಿರಬೇಕು ಎಂದು ಸಭೆಯಲ್ಲಿ ಸಲಹೆಗಳಿಗೆ ಮತ್ತು ಮಾರ್ಗದರ್ಶನಗಳಿಗೆ ಮುಕ್ತವಾಗಿ ತೆರೆದು

ಕೊಂಡಾಗ ಅನಗತ್ಯ ಚರ್ಚೆಗಳು ನಡೆದು ಬೇಕಾದ ಸರಿಯಾದ ಮಾರ್ಗದರ್ಶ ನವೇ ಸಿಗುವುದಿಲ್ಲ. ಇದೇ ರೀತಿಯಲ್ಲಿಯೇ ಸಮಯ, ಶ್ರಮ ಮತ್ತು ಸಂಪನ್ಮೂ ಲಗಳು ವ್ಯರ್ಥವಾಗುತ್ತವೆ. ಜೊತೆಗೆ ಆ ಹೊತ್ತಿನ ಅಮೂಲ್ಯವಾದ ಮತ್ತು ಕೆಲಸಕ್ಕೆ ಅಗತ್ಯವಾಗಿರುವಂತಹ ಸಮಯದ ನಿರ್ವಹಣೆಗೆ ಬಹಳ ದೊಡ್ಡ ತೊಡಕಾಗುತ್ತದೆ.

ಮಕ್ಕಳಿಗೆ ಎಮೋಶನಲ್ ಇಂಟಲಿಜೆನ್ಸ್ ಅನ್ನು ಅಭ್ಯಾಸ ಮಾಡಿಸುವುದ ರಿಂದ ಅವರು ಮುಖ್ಯವಾಗಿ ಕಲಿಯುವುದು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸಂಯಮ. ನಂತರ ತಮ್ಮ ಪರಿಸ್ಥಿತಿಗೆ ಯಾರಿಂದ ಮತ್ತು ಯಾವುದರಿಂದ ಸಹಾಯ ಪಡೆಯಬಹುದು ಎಂಬ ಗಮನಿಸುವಿಕೆ. ಎಲ್ಲರಲ್ಲಿಯೂ ಒಂದೇ ತೆರನಾದ ಬೌದ್ಧಿಕ ಸಾಮರ್ಥ್ಯ ಮತ್ತು ಭಾವುಕ ನಿಲುವುಗಳು ಇರುವುದಿಲ್ಲ ಎಂಬ ಅರಿವು. ನಂತರ ಬಹು ಮುಖ್ಯವಾಗಿ ತಮಗೆ ಒದಗಿರುವ ಸಮಸ್ಯೆ ಅಥವಾ ಪರಿಸ್ಥಿತಿಯನ್ನು ಹೆಚ್ಚು ಜಟಿಲಗೊಳಿಸಿಕೊಳ್ಳದೇ ಸಂಯಮದಿಂದ ಪರಿಹಾರವನ್ನು ಕಂಡುಕೊಳ್ಳುವ ದಾರಿ.

ಭಾವುಕತೆಯ ನಿಯಂತ್ರಣ ಮತ್ತು ಮಾನಸಿಕ ಸಂಯಮ

ಎಮೋಶನಲ್ ಇಂಟಲಿಜೆನ್ಸ್‌ನಲ್ಲಿ ತಮ್ಮಲ್ಲಿ ಉಂಟಾಗುವ ಭಾವುಕತೆಯನ್ನು ತಾವೇ ಗಮನಿಸಿಕೊಂಡು ಮಾನಸಿಕವಾಗಿ ಸಂಯಮದಿಂದ ಪರಿಸ್ಥಿತಿಯನ್ನು ಅವಲೋಕಿಸುವುದು ಅದರ ತರಬೇತಿ ಹೊಂದಿರುವವರ ಮುಖ್ಯ ಲಕ್ಷಣ. ಮೊದಲು ಮಾಡುವುದು ಅವಲೋಕನ. ನಂತರ ವಿಶ್ಲೇಷಣೆ, ತತ್ ತಕ್ಷಣದ ಯೋಜನೆ ಮತ್ತು ಕಾರ್ಯ ನಿರ್ವಹಣೆ. ಇದು ಪರಸ್ಪರ ಸಹಕಾರ ಮತ್ತು ಸಾಮರಸ್ಯದಲ್ಲಿ ಮಾತ್ರವೇ ಸಾಧ್ಯವಾಗುವುದು. ಯಾವುದೇ ರೀತಿಯ ಅಹಂ ಪ್ರೇರಿತ ವೈಪರೀತ್ಯಗಳಿದ್ದರೂ ಕೆಲಸ ಕೆಡುವುದು.

ಭಾವುಕ ಕೌಶಲ್ಯದ ತರಬೇತಿ ಹೊಂದದವರ ಮೊದಲನೆಯ ಲಕ್ಷಣ ಅಧೀರರಾಗುವುದಾದರೆ, ಇನ್ನು ಎರಡನೆಯ ಲಕ್ಷಣ ಭಾವೋದ್ವೇಗ ಹೊಂದು ವುದು. ಇವರ ವರ್ತನೆಗಳು ಹೇಗಿರುತ್ತವೆ ಎಂದರೆ ಮೊದಲನೆಯದಾಗಿ ಯಾವು ದೇ ನಕಾರಾತ್ಮಕವಾದ ಪರಿಸ್ಥಿತಿಗೆ ವಿಷಯವನ್ನು ಗಮನಿಸುವ ಬದಲು ಭಾವೋ ದ್ವೇಗಕ್ಕೆ ಒಳಗಾಗಿ ಬಹಳ ಗಟ್ಟಿಯಾಗಿ ಮತ್ತು ಮುಕ್ತವಾಗಿ ತಮ್ಮ ಭಾವುಕತೆಯನ್ನು ಅಭಿವ್ಯಕ್ತಗೊಳಿಸುವುದು. ಇದರಿಂದ ಅವರು ಇಡೀ ಪರಿಸರವನ್ನು ಭೀತಗೊಳಿ ಸುತ್ತಾರೆ. ತಾವು ಅಧೀರರಾಗುವ ಜೊತೆಗೆ ಇತರರನ್ನು ಅಧೀರರನ್ನಾಗಿ ಮಾಡು ತ್ತಾರೆ. ಯಾವಾಗ ವ್ಯಕ್ತಿ ಭಾವೋದ್ವೇಗಕ್ಕೆ ಒಳಗಾಗುವನೋ ಆಗ ಅವನ ಕೌಶಲ್ಯ ಮತ್ತು ಬುದ್ಧಿಮತ್ತೆಯು ಮಂಕಾಗುತ್ತದೆ. ದಾರಿಯನ್ನು ಹುಡುಕುವ ಬದಲು ತನ್ನ ಅಧೀರತೆಯನ್ನು ವ್ಯಕ್ತಪಡಿಸುವುದರಲ್ಲಿಯೇ ನಿರತನಾಗಿ ಬಿಡುತ್ತಾರೆ. ಇದು ಕುಶಲರ ಲಕ್ಷಣ ಅಲ್ಲ. ಇದರಿಂದಾಗಿ ಇವರು ಪರಿಸ್ಥಿತಿಯನ್ನು ಅವಲೋಕಿಸಲು ಹೋಗುವುದಿಲ್ಲ. ಆ ಪರಿಸ್ಥಿತಿಯಿಂದ ಹೊರಗೆ ಬರಲು ಮಾರ್ಗವನ್ನು ಕಂಡುಕೊಳ್ಳುವುದಿಲ್ಲ. ಅನರ್ಹರು ಮತ್ತು ಅರ್ಹರು ಎಲ್ಲರೂ ಅವರ ಭಾವೋದ್ವೇಗಕ್ಕೆ ಸ್ಪಂದಿಸಲು ಬರುವಾಗ ಅವರಿಗೆ ಅರ್ಹ ಮತ್ತು ವ್ಯರ್ಥ ಸಲಹೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅನರ್ಹರು ಹುಂಬರೂ ಆಗಿದ್ದ ಪಕ್ಷದಲ್ಲಿ ಅರ್ಹರ ಸಲಹೆ ಮತ್ತು ಮಾರ್ಗದರ್ಶನವು ಅಗತ್ಯವಾಗಿದ್ದರೂ ಅದು ಅಲ್ಲಿ ನಡೆಯದಂತಾಗಿ ಬಿಡುತ್ತದೆ.

ಅವಘಡಗಳ ಎದುರಿಸುವ ತರಬೇತಿ

ಅಮೆರಿಕ ಸೇರಿದಂತೆ ಎಷ್ಟೋ ಪಾಶ್ಚಾತ್ಯರಾಷ್ಟ್ರಗಳಲ್ಲಿ ಮತ್ತು ಜಪಾನ್‌ನಂತಹ ಏಶ್ಯಾದ ರಾಷ್ಟ್ರಗಳಲ್ಲಿಯೂ ಕೂಡ ಶಾಲೆಯ ಸಣ್ಣ ಮಕ್ಕಳಿಗೇ ಈ ಭಾವುಕತೆಯ ಕೌಶಲ್ಯದಿಂದ ಪರಿಸ್ಥಿತಿಯನ್ನು ನಿಭಾಯಿಸುವಂತಹ ತರಬೇತಿಗಳನ್ನು ನೀಡು ತ್ತಾರೆ. ಅಂತಹ ದೇಶಗಳಲ್ಲಿ ನೂಕುನುಗ್ಗುಲುಗಳು ಉಂಟಾಗಿ ಕಾಲ್ತುಳಿತ ಗಳಿಂದ ಸಾವುಗಳು ಉಂಟಾಗುವುದಿಲ್ಲ. ಜೊತೆಗಿರುವವರು ಯಾರೇ ಆಗಿರಲಿ ಪರಸ್ಪರ ಸಹಕಾರದಿಂದ ಎದುರಾಗುವ ಪರಿಸ್ಥಿತಿಯನ್ನು ಎದುರಿಸುವ ಅಥವಾ ನಿಭಾಯಿಸುವಂತಹ ಸಾಹಸಗಳನ್ನು ಮಾಡುತ್ತಾರೆ.

ಅಮೆರಿಕದ ಅವಳಿ ಗೋಪುರಗಳು ವಿಮಾನದಾಳಿಯಿಂದ ಆಘಾತಗೊಂಡಾ ಗಲೂ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ನಾಗರಿಕರು ಅತ್ಯಂತ ಸಂಯಮದಿಂದ ಹೊರಗೆ ಹೋಗಲು ಪರಸ್ಪರ ಸಹಕರಿಸಿಕೊಳ್ಳುತ್ತಿದ್ದರು. ನೂಕುನುಗ್ಗುಲು ಉಂಟಾಗಲಿಲ್ಲ. ಇವರನ್ನು ಎಳೆದು ಹಾಕಿ ತಾನು ಹೊರಗೆ ಹೋಗು ವಂತಹ ಮನಸ್ಥಿತಿಯವರಾಗಿರಲಿಲ್ಲ. ಆದರೂ ಕೆಲವರು ಮೇಲಿನಿಂದ ಧುಮು ಕುವಂತಹ ಮನಸ್ಥಿತಿ ಇದ್ದವರಿದ್ದರು, ಆ ಘಟನೆಗಳೂ ನಡೆದವು. ಅಂತವರು ಪರಿಸ್ಥಿತಿಯನ್ನು ಎದುರಿಸುವಂತಹ ಭಾವುಕತೆಯ ಕೌಶಲ್ಯದ ತರಬೇತಿ ಹೊಂದಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜಪಾನಿನಲ್ಲಿಯೂ ಕೂಡ ಆಗ್ಗಿಂದಾಗ್ಗೆ ಸಂಭವಿಸುವ ಪ್ರಾಕೃತಿಕ ವಿಕೋಪ ಗಳನ್ನು ಎದುರಿಸಲು ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ಭಾವುಕತೆಯ ಕೌಶಲ್ಯದ ತರಬೇತಿಯನ್ನು ನೀಡುತ್ತಾರೆ. ಎಂತಹುದೇ ಪರಿಸ್ಥಿತಿಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ, ಅಧೀರರಾಗದೇ ತಮಗೆ ಒದಗಿರುವಂತಹ ಪರಿಸ್ಥಿತಿಯನ್ನು ಅವ ಲೋಕಿಸಿ, ಸುತ್ತಲೂ ಇರುವ ಪರಿಕರಗಳನ್ನು, ವ್ಯಕ್ತಿಗಳನ್ನು ಮತ್ತು ಇನ್ನೇನಾ ದರೂ ಸಾಧನಗಳನ್ನು ಉಪಯೋಗಿಸಿಕೊಂಡು ಹೇಗೆ ಅದನ್ನು ಎದುರಿಸಬೇಕು ಎಂಬ ಪ್ರಾಯೋಗಿಕ ತರಬೇತಿಗಳನ್ನು ನೀಡುತ್ತಾರೆ.

ಈ ಬಗೆಯ ತರಬೇತಿಗಳನ್ನು ಒಂದು ಹಂತಕ್ಕೆ ಎನ್‌ಸಿಸಿ, ಸ್ಕೌಟ್ ಮತ್ತು ಎನ್‌ಎಸ್‌ಎಸ್‌ಗಳಲ್ಲಿ ಕೊಡುವುದಾದರೂ ಸಾಮಾನ್ಯವಾಗಿ ಎಲ್ಲರಿಗೂ ಸಿಗುವಂತಹ ಕೌಶಲ್ಯದ ತರಬೇತಿ ಇದಾಗಿರುವುದಿಲ್ಲ. ಅಲ್ಲದೇ ಸ್ಕೌಟ್ ಮತ್ತು ಎನ್‌ಸಿಸಿಗಳು ಇದಕ್ಕಾಗಿಯೇ ತರಬೇತಾಗುವ ಒಂದು ಸ್ವಯಂ ಸೇವಕರ ತಂಡವಾಗಿ ಹೊರಹೊಮ್ಮುತ್ತದೆಯೇ ಹೊರತು ಎಲ್ಲರಲ್ಲೂ ಇರಬೇ ಕಾಗಿರುವಂತಹ ಒಂದು ಸಾಮಾನ್ಯ ಕೌಶಲ್ಯದ ಮತ್ತು ತರಬೇತಿ ಹೊಂದಿರುವ ಗುಣವಾಗಿ ಇರುವುದಿಲ್ಲ. ಸ್ಕೌಟ್ ಮತ್ತು ಎಸಿಸಿಗಳಲ್ಲಿ ನೀಡುವಂತಹ ಸ್ವಯಂ ಸೇವಕ ತರಬೇತಿಗಳು ಶಾಲೆಯ ಎಲ್ಲಾ ಮಕ್ಕಳಿಗೂ ಸಾಮಾನ್ಯವಾಗಿ ಸಿಗುವಂತಾಗಬೇಕು ಮತ್ತು ಇನ್ನೂ ನೈಪುಣ್ಯ ಹೊಂದಲು ವಿಶೇಷವಾಗಿ ತರಬೇತಿಯನ್ನು ಪಡೆಯುವಂತಹ ತಂಡಗಳು ಸಿದ್ಧವಾಗಬಹುದು.

ಕಟ್ಟಡ ಬಿದ್ದು ಹೋಗುತ್ತಿದೆ

ಬೆಂಗಳೂರಿನ ಒಂದು ಶಾಲೆಯಲ್ಲಿ ಭಾವುಕತೆಯ ಬುದ್ಧಿಮತ್ತೆಯ ಪರೀಕ್ಷೆಗಾಗಿ ಒಂದು ಸಣ್ಣ ಪ್ರಯೋಗ ಮಾಡಲು ಶಾಲೆಯ ಆಡಳಿತಗಾರರಾಗಿರುವ ನನ್ನ ಸ್ನೇಹಿತರೊಬ್ಬರಿಗೆ ಹೇಳಿದೆ. ಅದರಂತೆ ಶಾಲೆಯಲ್ಲಿ ಮಕ್ಕಳು ವಿವಿಧ ಕಾರ್ಯಕ್ರಮಗಳಿಗೆ ಹೊರಗೆ ಹೋಗಿರುವಾಗ ಮತ್ತು ಕಡಿಮೆ ಮಕ್ಕಳಿರುವ ಸಮಯದಲ್ಲಿ ಈ ಪ್ರಯೋಗ ನಡೆಸಲಾಯಿತು.

ಇದ್ದಕ್ಕಿದ್ದಂತೆ ಲಾಂಗ್ ಬೆಲ್ ಹೊಡೆದು, ಕಚೇರಿ ಸಹಾಯಕ ಬಿಲ್ಡಿಂಗ್ ಬಿದ್ದು ಹೋಗುತ್ತಿದೆ ಎಂದು ಜೋರಾಗಿ ಕೂಗುತ್ತಾ ಓಡೋಡಿ ಹೋದ.

ಮಕ್ಕಳು ಮತ್ತು ಉಪಾಧ್ಯಾಯರು ಎಲ್ಲರೂ ಕೂಗಾಡುತ್ತಾ ತರಗತಿಗಳಿಂದ ಓಡೋಡಿ ಬಂದರು. ಹಾಗೆ ಬರುವಾಗ ಯಾರಲ್ಲೂ ಯಾವ ಶಿಸ್ತು ಮತ್ತು ಯಾರ ಬಗ್ಗೆ ಕಾಳಜಿಯೂ ಇರಲಿಲ್ಲ. ಒಬ್ಬರನ್ನೊಬ್ಬರು ತಳ್ಳುತ್ತಾ, ಬೀಳುತ್ತಾ ಕೂಗಾಡಿಕೊಂಡು ಹೊರಗೆ ಓಡೋಡಿ ಬಂದರು. ಕೆಲವು ಮಕ್ಕಳು ಜೋರಾಗಿ ಅಳುತ್ತಾ ಒಬ್ಬರನ್ನೊಬ್ಬರು ತಳ್ಳಿಕೊಂಡು ಬರುತ್ತಿದ್ದರು. ಕೆಲವರು ಬಿದ್ದರು. ಇನ್ನೂ ಕೆಟ್ಟದಾಗಿ ಕಂಡದ್ದು ಎಂದರೆ ಶಿಕ್ಷಕರೂ ಕೂಡ ಯಾವ ಮಕ್ಕಳನ್ನೂ ಕರೆದುಕೊಳ್ಳದೇ, ಯಾರಿಗೂ ಯಾವ ಮಾರ್ಗದರ್ಶನವನ್ನೂ ಮಾಡದೇ ಶಾಲಾ ಕಟ್ಟಡದಿಂದ ಹೊರಗೆ ದೂರಕ್ಕೆ ಓಡೋಡಿ ಹೋಗಿ ಕಟ್ಟಡದ ಯಾವ ಭಾಗ ಬೀಳುತ್ತಿದೆ ಎಂದು ನೋಡುತ್ತಿದ್ದರು. ಮತ್ತೆ ಕೆಲವು ಉಪಾಧ್ಯಾಯರು ತಮ್ಮ ಮೊಬೈಲ್‌ಗಳನ್ನು ತೆಗೆದು ಚಿತ್ರೀಕರಣ ಮಾಡುತ್ತಿದ್ದರು.

ನನ್ನ ಸ್ನೇಹಿತ ಬೆವತುಹೋದ. ಇಡೀ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಮತ್ತು ಆರು ಮಂದಿ ಮಕ್ಕಳು, ಒಟ್ಟು ಎಂಟು ಮಂದಿಯ ಹೊರತು ಮಿಕ್ಕವರೆಲ್ಲಾ ಬಯಲಿಗೆ ಓಡಿ ಹೋಗಿದ್ದರು. ಅರ್ಧ ಗಂಟೆಯ ಈ ನಾಟಕದ ನಂತರ ಎಲ್ಲ ರನ್ನೂ ಸಭಾಂಗಣದಲ್ಲಿ ಸೇರಿಸಿ ನಾನು ಮತ್ತು ನನ್ನ ಸ್ನೇಹಿತ ಮಾತಾಡಿದೆವು.

ಮೊದಲು ಆ ಎಂಟು ಮಂದಿಯಿಂದ ಉತ್ತರ ಪಡೆದುಕೊಂಡೆವು. (ದೊರಕಿದ ಉತ್ತರಗಳನ್ನು ಸಮಗ್ರವಾಗಿ ಇಲ್ಲಿ ಹೇಳಲಾಗಿದೆ.)

ಪ್ರಶ್ನೆ: ನೀವು ಏಕೆ ಓಡಿ ಹೋಗಲಿಲ್ಲ?

ಉತ್ತರ: ಎಲ್ಲಿಗೆ ಓಡುವುದು? ಕಟ್ಟಡದ ಯಾವ ಭಾಗ ಬೀಳುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಿಚಾರ ತಿಳಿಯದೇ ನಾವು ಇರುವ ಸ್ಥಳವೇ ಸುರಕ್ಷಿತವಾಗಿದ್ದು ಅಸುರಕ್ಷಿತವಾಗಿರುವ ಕಡೆ ಓಡಿದರೆ ಇನ್ನೂ ಅಪಾಯವೇ ಹೆಚ್ಚು. ಹಾಗೂ ಅಟೆಂಡರ್ ಬಿಲ್ಡಿಂಗ್ ಬೀಳುತ್ತಿದೆ ಎಂದು ಕೂಗಿ ಹೇಳಿದ ಮಾತಷ್ಟೇ ಕೇಳಿದ್ದು, ಇನ್ನು ಯಾವುದೇ ಸ್ಫೋಟದ ಅಥವಾ ಬೀಳುತ್ತಿರುವ ಯಾವ ಶಬ್ದವೂ ಕೇಳಿಬರಲಿಲ್ಲ. ಒಂದು ವೇಳೆ ಕಟ್ಟಡವು ಬೀಳುತ್ತಿರುವುದೇ ಆದಲ್ಲಿ, ಯಾವ ಕಡೆ ಕುಸಿತ ಉಂಟಾಗುತ್ತಿದೆ ಮತ್ತು ಯಾವ ಕಡೆ ಸುರಕ್ಷಿತವಾಗಿರುತ್ತೇವೆ ಎಂಬುದನ್ನು ನೋಡಬೇಕಿತ್ತು. ನಾವಿರುವ ಕಡೆ ಗಮನಿಸಿದಾಗಲಂತೂ ಬೀಳುತ್ತಿರುವ ಯಾವ ಸೂಚನೆಯೂ, ಲಕ್ಷಣಗಳೂ ಕಾಣಲಿಲ್ಲ.

ಪ್ರಶ್ನೆ: ನೀವು ಇಲ್ಲೇ ಉಳಿದಿರಿ, ಆದರೆ ಉಳಿದವರಿಗೆ ನೀವು ಏಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲ್ಲಿಲ್ಲ?

ಉತ್ತರ: ಅವರು ಯಾರ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಭಯಗೊಂಡಿದ್ದರು. ತಾನು ತಪ್ಪಿಸಿಕೊಳ್ಳಬೇಕು ಎಂಬ ಆತುರದಲ್ಲಿ ಒಬ್ಬರನ್ನೊಬ್ಬರು ತಳ್ಳುತ್ತಿದ್ದರು. ಸಣ್ಣವರು ಮತ್ತು ದುರ್ಬಲರು ಎಂಬುದನ್ನೂ ಕೂಡಾ ನೋಡುತ್ತಿರಲಿಲ್ಲ. ಕಿರುಚಾಡುತ್ತಿದ್ದರು. ಕೆಲವರಂತೂ ಬೇಕೆಂದೇ ತಮ್ಮನ್ನು ಉಳಿಸಲು ಗಮನ ಸೆಳೆಯುವಂತೆ ಕಿರುಚುತ್ತಿದ್ದರು. ನುಗ್ಗಾಟ ಉಂಟಾ ಗಿತ್ತು. ನಾವು ಕೆಲವರನ್ನು ತಡೆಯುವ ಪ್ರಯತ್ನ ಮಾಡಿದೆವು. ಅಂತಹ ಸೂಚನೆ ಗಳೇನೂ ಇಲ್ಲ ಬಹುಶಃ ಈ ಕೂಗೇ ಒಂದು ಸುಳ್ಳಿನ ಕೂಗು ಅಥವಾ ಚೇಷ್ಟೆಯ ಅಥವಾ ನಮ್ಮನ್ನು ಪರೀಕ್ಷಿಸುವ ಕೂಗಾಗಿರಬೇಕು, ತಾಳಿ ನೋಡೋಣ ಎಂದು ಹೇಳಿದೆವು. ಆದರೆ ಯಾರೂ ಕೇಳಲಿಲ್ಲ.

ಪ್ರಶ್ನೆ: ಒಂದು ವೇಳೆ ನಿಜವಾಗಿಯೇ ಕಟ್ಟಡ ಬಿದ್ದು ಹೋಗುತ್ತಿದ್ದರೆ ನೀವು ಏನು ಮಾಡುತ್ತಿದ್ದಿರಿ?

ಶಿಕ್ಷಕರ ಉತ್ತರ: ಮೊದಲು ಮಕ್ಕಳಿಗೆ ಕೂಗಾಡದಂತೆ ಮತ್ತು ತಮ್ಮ ಬೆಂಚು ಗಳಿಂದ ಹೊರಗೆ ಬರುವಂತೆ ಮಾಡುತ್ತಿದ್ದೆವು. ನಂತರ ಮೂರ್ಮೂರು ಜನರ ಸಾಲಿನಲ್ಲಿ ಅವರನ್ನು ತಂಡಗಳನ್ನಾಗಿ ಮಾಡಿ ಬಯಲಿಗೆ ಕಳುಹಿಸು ತ್ತಿದ್ದೆವು. ಹಾಗೆ ಹೋಗುವಾಗ ತಳ್ಳದಿರುವಂತೆ ಆದರೆ ಕೊಂಚ ಕ್ಷಿಪ್ರಗತಿಯಲ್ಲಿ ನಡೆಯುವಂತೆ ತಿಳಿಸುತ್ತಿದ್ದೆವು. ನಾವು ತರಗತಿಯ ಹೊರಬಾಗಿಲಲ್ಲಿ ನಿಂತು ಅವಲೋಕಿಸುತ್ತಿದ್ದೆವು. ನಮ್ಮ ಪಕ್ಕದ ತರಗತಿಯ ಉಪಾಧ್ಯಾಯರೊಂದಿಗೆ ಕ್ಷಿಪ್ರ ಗತಿಯ ಯೋಜನೆ ಮಾಡುತ್ತಿದ್ದೆವು. ಒಬ್ಬರು ಉಪಾಧ್ಯಾಯರು ತಮ್ಮ ತರಗತಿ ಯ ಮತ್ತು ನನ್ನ ತರಗತಿಯ ಮಕ್ಕಳನ್ನು ಕರೆದುಕೊಂಡು ಮುಂಚೂಣಿಯಲ್ಲಿ ನಡೆದರೆ ಮತ್ತೊಬ್ಬ ಉಪಾಧ್ಯಾಯರು ಈ ಎರಡೂ ತರಗತಿಗಳಿಂದ ಮಕ್ಕಳನ್ನು ಹೊರಗೆ ಕಳುಹಿಸುವಂತಹ ಕೆಲಸ ಮಾಡಬೇಕಾಗಿತ್ತು.

ನಿಜ, ಭಾವುಕತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತಹ ಕೌಶಲ್ಯವನ್ನು ಹೊಂದಿರುವವರು ಮಾಡುವಂತಹ ಕೆಲಸವೇ ಇದಾಗಿರುತ್ತದೆ. ಆದರೆ, ಯಾರೋ ಒಂದಿಬ್ಬರಿಗೆ ಮಾತ್ರವೇ ಈ ಕೌಶಲ್ಯವಿದ್ದರೆ ಇಡೀ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶಾಲಾ ಹಂತದಲ್ಲಿಯೇ ಇಂತಹ ತರಬೇತಿಯನ್ನು ಎಲ್ಲರಿಗೂ ಹಂತಹಂತವಾಗಿ ನೀಡುವಂತಹ ಅಗತ್ಯವಿರುವುದು.

ಇಂತಹ ತರಬೇತಿಯನ್ನು ಹೊಂದಿದ್ದರೂ ಕೂಡ ನೋವು ಸಾವು ಉಂಟಾ ಗಬಹುದು. ಏಕೆಂದರೆ ಅಪಘಾತ ಎನ್ನುವುದು ಅಥವಾ ಅವಘಡ ಎನ್ನುವುದು ವ್ಯವಸ್ಥಿತವಾಗಿ ಅಥವಾ ಪೂರ್ವಯೋಜಿತವಾಗೇನೂ ಆಗುವುದಿಲ್ಲ. ಆದರೆ, ಆಗುವಂತಹ ಸಾವು ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಗೊಂದಲಗಳು ಉಂಟಾಗಿ ಪರಿಹಾರ ಕಾರ್ಯಗಳಿಗೆ ತೊಡಕಾಗುವುದಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News