ಕಪ್ಪುಹಣದ ವಿರುದ್ಧ ಮೋದಿ ಮತ್ತೆ ಗುಡುಗು

Update: 2017-07-02 04:08 GMT

ಹೊಸದಿಲ್ಲಿ, ಜು.2: ದೇಶದಲ್ಲಿ ಸುಮಾರು ಮೂರು ಲಕ್ಷ ಕಂಪೆನಿಗಳು ಅನುಮಾನಾಸ್ಪದ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವುದು ಕಳೆದ ವರ್ಷದ ನೋಟು ರದ್ದತಿ ನಿರ್ಧಾರದ ಬಳಿಕ ಬೆಳಕಿಗೆ ಬಂದಿದೆ. ಇದಲ್ಲದೆ 37 ಸಾವಿರ ಶೆಲ್ ಕಂಪೆನಿಗಳು ಕಪ್ಪು ಹಣವನ್ನು ಪರಿವರ್ತಿಸುವ ದಂಧೆಯಲ್ಲಿ ತೊಡಗಿರುವುದು ಕೂಡಾ ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ನೋಟು ರದ್ದತಿ ನಿರ್ಧಾರ ಕಪ್ಪುಹಣ ಹಾಗೂ ಭ್ರಷ್ಟಾಚಾರ ವಿರುದ್ದದ ಸಮರ ಎಂದು ಪುನರುಚ್ಚರಿಸಿದ ಅವರು, ನೋಟು ರದ್ದತಿ ಬಳಿಕ ಠೇವಣಿಯಾದ ಹಣದ ಬಗ್ಗೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಜಾರಿಯಲ್ಲಿದೆ. ರಾಜಕೀಯ ಪರಿಣಾಮವನ್ನು ಲೆಕ್ಕಿಸದೇ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆರಂಭಿಕ ತನಿಖೆಯ ಬಳಿಕ ಮೂರು ಲಕ್ಷ ಕಂಪೆನಿಗಳನ್ನು ಗುರುತಿಸಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಸಮಾರಂಭದಲ್ಲಿ ನುಡಿದರು. ಇನ್ನೂ ಹೆಚ್ಚಿನ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಲೆಕ್ಕ ಪರಿಶೋಧಕರಿಗಾಗಿ ಜಿಎಸ್‌ಟಿ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ತಿಳಿಸಿದರು.

ಪ್ರತಿಯೊಬ್ಬರೂ ಜಿಎಸ್‌ಟಿ ಭವಿಷ್ಯದ ಬಗ್ಗೆ ಯೋಚಿಸುತ್ತಿರುವಾಗಲೇ, ಸರ್ಕಾರ ಒಂದೇ ಏಟಿನಲ್ಲಿ ಒಂದು ಲಕ್ಷ ಕಂಪೆನಿಗಳ ನೋಂದಣಿ ರದ್ದುಪಡಿಸಿದೆ. ಬಡವರನ್ನು ಲೂಟಿ ಮಾಡಿದವರು ಅದನ್ನು ಅವರಿಗೇ ಮರಳಿಸಬೇಕಾಗುತ್ತದೆ ಎಂದು ಗುಡುಗಿದರು.

ನೋಟು ರದ್ದತಿ ಬಳಿಕ ಕೆಲ ಲೆಕ್ಕ ಪರಿಶೋಧಕರು ತಮ್ಮ ಕಕ್ಷಿದಾರರಿಗೆ ವಾಮಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಅಂಥ ಲೆಕ್ಕಪರಿಶೋಧಕರ ವಿರುದ್ಧ ಐಸಿಎಐ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News