ಪ್ರಶ್ನಿಸುವವರ ದಮನಕ್ಕೆ ಕೇಂದ್ರ ಹುನ್ನಾರ: ಪ್ರಶಾಂತ್‌ಭೂಷಣ್

Update: 2017-07-02 14:17 GMT

ಬೆಂಗಳೂರು, ಜು.2: ಸಮಾಜದಲ್ಲಿರುವ ಅಶಾಂತ ವಾತಾವರಣದ ಬಗ್ಗೆ ಪ್ರಶ್ನಿಸುವವರನ್ನು ದಮನ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್‌ಭೂಷಣ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

 ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೃಷಿ ಸಂಸ್ಥೆಯ ಸಭಾಂಗಣದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ‘ಒಂದು ಭಾರತ, ಹಲವು ಧರ್ಮ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರದ ಸರಕಾರದ ನಡೆಯನ್ನಾಗಲಿ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪ್ರಶ್ನಿಸುವವರನ್ನು ದಮನಗೊಳಿಸಲಾಗುತ್ತಿದೆ. ಅದು ಅಲ್ಲದೆ, ದೇಶದ್ರೋಹಿ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲ ವಿಶ್ವವಿದ್ಯಾನಿಲಯಗಳು ಕೇಂದ್ರ ಸರಕಾರದ ನಡೆಯನ್ನು ಪ್ರಶ್ನೆ ಮಾಡಲು ಮುಂದಾದರು. ಆದರೆ, ಆ ವಿಶ್ವವಿದ್ಯಾನಿಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆಯೇ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದ ಅವರು, ಪ್ರಗತಿಪರ ವಿಚಾರಗಳನ್ನಿಟ್ಟುಕೊಂಡಿರುವ ವಿಶ್ವವಿದ್ಯಾಲಯಗಳನ್ನು ಕೇಂದ್ರ ಸರಕಾರ ಹಾಳು ಮಾಡಲಿದೆ ಎಂದು ಕಿಡಿಕಾರಿದರು.

ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಕಾನೂನು ಬಾಹಿರವಾಗಿಯೇ ಹಲವು ಕೃತ್ಯಗಳು ನಡೆಯುತ್ತಿವೆ.ಆದರೆ, ಇದನ್ನು ವಿರೋಧಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದೇ ರೀತಿ, ಯುವಕರಲ್ಲೂ ಒಂದು ಸಮುದಾಯದ ಮೇಲೆ ತಪ್ಪು ಕಲ್ಪನೆ ಮೂಡಿಸುವಂತ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ.ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.

 ಪ್ರೊ.ಬಾಬು ಮ್ಯಾಥ್ಯೋ ಮಾತನಾಡಿ, ಎಲ್ಲರೂ ಒಗ್ಗೂಡಿ ಇರಬೇಕೆಂದು ಸಂವಿಧಾನ ರಚನೆ ಮಾಡಲಾಗಿದೆ.ಆದರೆ, ಇಂದು ಆಹಾರ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಬೇರ್ಪಡಿಸುವ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್, ಜಮಾಅತೆ ಇಮ್ಲಾಮಿ ಹಿಂದ್ ಅಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಎಸ್‌ಐಒ ರಾಜ್ಯಾಧ್ಯಕ್ಷ ಮುಹಮ್ಮದ್ ರಫಿಕ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News