ಹಕ್ಕುಚ್ಯುತಿ ಪ್ರಕರಣ: ಸ್ಪೀಕರ್ ಎದುರು ಇಂದು ಪತ್ರಕರ್ತರ ಹಾಜರು ಸಾಧ್ಯತೆ

Update: 2017-07-02 14:47 GMT

ಬೆಂಗಳೂರು, ಜು.2: ಶಾಸಕರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಹಕ್ಕುಬಾಧ್ಯತಾ ಸಮಿತಿಯಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್‌ರಾಜ್ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಕೆ.ಬಿ.ಕೋಳಿವಾಡ ಎದುರು ಹಾಜರಾಗಲಿದ್ದಾರೆ.

ಜೈಲು ಶಿಕ್ಷೆ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ರವಿಬೆಳಗೆರೆ ಹಾಗೂ ಅನಿಲ್‌ರಾಜ್ ಸೋಮವಾರ ಸ್ಪೀಕರ್ ಎದುರು ಹಾಜರಾಗಲಿದ್ದಾರೆ.

ಬಂಧನದ ಭೀತಿ ಎದುರಿಸುತ್ತಿರುವ ಇವರಿಬ್ಬರನ್ನು ಪೊಲೀಸರು ಬಂಧಿಸುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ , ನ್ಯಾಯಾಲಯಕ್ಕೆ ವೌಖಿಕ ಭರವಸೆಯನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಬೆಳಗೆರೆಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆನಂತರ, ಗೃಹ ಇಲಾಖೆ ಸೂಚನೆಯಂತೆ ಬಂಧಿಸದಂತೆ ವಾಪಸ್ ಬಂದಿದ್ದರು.

ಸ್ಪೀಕರ್ ಕೆ.ಬಿ.ಕೋಳಿವಾಡ ವಿರುದ್ದ ‘ಹಾಯ್ ಬೆಂಗಳೂರು’ ಸಂಪಾದಕ ರವಿಬೆಳಗೆರೆ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ‘ಯಲಹಂಕ ವಾಯ್ಸ’ ಪತ್ರಿಕೆಯ ಸಂಪಾದಕ ಅನಿಲ್‌ರಾಜ್ ಅವಹೇಳನಕಾರಿ ಲೇಖನವನ್ನು ಪ್ರಕಟಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ನ್ಯಾಯಾಲಯದ ನೀತಿ ಪಾಠ: ಪತ್ರಿಕೋದ್ಯಮವು ರಚನಾತ್ಮಕವಾಗಿರಬೇಕು. ಪತ್ರಕರ್ತರು ಮತ್ತೊಬ್ಬರ ಚಾರಿತ್ರವನ್ನು ಹರಣ ಮಾಡುವ ವಿನಾಶಕಾರಿ ಗುಣಗಳನ್ನು ಮೈಗೂಡಿಸಿಕೊಳ್ಳಬಾರದು. ಪತ್ರಿಕೋದ್ಯಮದ ಘನತೆಯನ್ನು ಕಾಪಾಡಿ, ಅವಿಧೇಯತೆ ಯನ್ನು ಪ್ರದರ್ಶಿಸಬೇಡಿ.

ಸೊಂಟದ ಕೆಳಗಿನ ಭಾಷೆ ಬಳಸಬೇಡಿ. ಒಂದು ವೇಳೆ ಇದೇ ಪ್ರವೃತ್ತಿಯನ್ನು ಮುಂದುವರೆಸಿದರೆ ಭವಿಷ್ಯದಲ್ಲಿ ಸದನ ನಿಮ್ಮ ವಿರುದ್ಧ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯವು ರವಿ ಬೆಳಗೆರೆ ಹಾಗೂ ಅನಿಲ್‌ರಾಜ್‌ಗೆ ನ್ಯಾಯಾಲಯವು ನೀತಿ ಪಾಠ ಬೋಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News