ಸ್ಪೀಕರ್ ಎದುರು ಹಾಜರಾದ ರವಿಬೆಳಗೆರೆ, ಅನಿಲ್‌ರಾಜ್‌

Update: 2017-07-03 13:20 GMT

ಬೆಂಗಳೂರು, ಜು.3: ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್‌ರಾಜ್‌ಗೆ ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸ್ಸು ಹಿನ್ನೆಲೆಯಲ್ಲಿ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೊರಡಿಸಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಕೆಯಾಗಿದೆ.

ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಎದುರು ಹಾಜರಾದ ರವಿಬೆಳಗೆರೆ ಹಾಗೂ ಅನಿಲ್‌ರಾಜ್ ಪರವಾಗಿ ವಕೀಲ ಶಂಕರಪ್ಪ ಮನವಿ ಸಲ್ಲಿಸಿ, ಸದನದಲ್ಲಿ ಕೈಗೊಂಡಿರುವ ನಿರ್ಣಯವನ್ನು ಹಿಂಪಡೆಯುವಂತೆ ಕೋರಿದರು.

ಸ್ಪೀಕರ್ ಹೊರಡಿಸಿದ್ದ ಜೈಲು ಶಿಕ್ಷೆ ಆದೇಶವನ್ನು ಪ್ರಶ್ನಿಸಿ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ಸಲಹೆಯಂತೆ ಇಂದು ವಕೀಲರೊಂದಿಗೆ ಸ್ಪೀಕರ್ ಎದುರು ಹಾಜರಾಗಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿದರು. ಹಕ್ಕುಬಾಧ್ಯತಾ ಸಮಿತಿಯ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್‌ರಾಜ್ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ.ದಂಡವನ್ನು ಸದನದಲ್ಲಿ ಜೂ.21ರಂದು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು ಎಂದು ಪತ್ರಕರ್ತರ ಪರ ವಕೀಲ ಶಂಕರಪ್ಪ ತಿಳಿಸಿದರು.

ಈ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಲು ಹೈಕೋರ್ಟ್ ನೀಡಿದ ಸಲಹೆಯಂತೆ ನಾವು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಸ್ಪೀಕರ್ ಎದುರು ಹಾಜರಾಗಿ ಸದನದ ತೀರ್ಪು ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಕಾನೂನಾತ್ಮಕವಾದ ವಿಚಾರಗಳು, ಲೋಪಗಳು, ಸುಪ್ರೀಂಕೋರ್ಟ್‌ನಲ್ಲಿ ನಡೆದಿರುವ ವಾದ-ವಿವಾದಗಳು, ಅಮೆರಿಕಾ, ಲಂಡನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿ ಇಂತಹ ಸಂದರ್ಭಗಳು ಎದುರಾದಾಗ ನಡೆದಿರುವ ಬೆಳವಣಿಗೆಗಳನ್ನು ಸ್ಪೀಕರ್‌ಗೆ ಮನದಟ್ಟು ಮಾಡಿದ್ದೇವೆ ಎಂದು ಅವರು ಹೇಳಿದರು.

ಸದನದ ಒಳಗೆ ಸದಸ್ಯರ ಹಕ್ಕುಚ್ಯುತಿಯಾದರೆ ಮಾತ್ರ ಸಂಬಂಧಪಟ್ಟವರಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಸದನ ಹೊರಗೆ ನಡೆದಿರುವ ಘಟನೆಗಳು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುವುದಿಲ್ಲ. ತಮಿಳುನಾಡಿನ ಎಸ್.ಬಾಲಕೃಷ್ಣ ಪ್ರಕರಣದಲ್ಲಿ, ನ್ಯಾಯಾಲಯವು ಸರಕಾರಕ್ಕೆ ದಂಡ ವಿಧಿಸಿರುವುದನ್ನು ಸ್ಪೀಕರ್ ಗಮನಕ್ಕೆ ತಂದಿದ್ದೇವೆ ಎಂದು ಶಂಕರಪ್ಪ ತಿಳಿಸಿದರು. ನಮ್ಮ ಮನವಿ ಹಾಗೂ ವಾದವನ್ನು ಆಲಿಸಿರುವ ಸ್ಪೀಕರ್, ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ನಿರ್ಣಯ ಪುನರ್ ಪರಿಶೀಲನೆಗೊಳ್ಳುವ ಸಾಧ್ಯತೆಯಿದೆ ಎಂದು ಶಂಕರಪ್ಪ ಹೇಳಿದರು.

ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿ, ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ತಮ್ಮ ವಕೀಲರ ಮೂಲಕ ಸಲ್ಲಿಸಿರುವ ಮನವಿಯನ್ನು ಸ್ವೀಕರಿಸಿದ್ದೇನೆ. ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಪತ್ರಕರ್ತರನ್ನು ಬಂಧಿಸುವಂತೆ ನಾನು ಯಾವುದೇ ಆದೇಶ ನೀಡಿಲ್ಲ. ಹಕ್ಕು ಬಾಧ್ಯತಾ ಸಮಿತಿಯು ಸದನಕ್ಕೆ ಸಲ್ಲಿಸಿದ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಈ ಬಗ್ಗೆ ಚರ್ಚೆ ನಡೆದು, ಸದನ ಒಮ್ಮತದ ನಿರ್ಣಯ ಕೈಗೊಂಡಿತ್ತು. ನಾನು ಸ್ಪೀಕರ್ ಆಗಿದ್ದೇನೆ. ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷನಲ್ಲ ಎಂದು ಅವರು ಹೇಳಿದರು.

ಸದನದಲ್ಲಿ ಕೈಗೊಂಡಿರುವ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದಷ್ಟೇ ನನ್ನ ಕೆಲಸ. ಅದನ್ನು ಜಾರಿಗೊಳಿಸುವಂತೆ ವಿಧಾನಸಭೆ ಕಾರ್ಯದರ್ಶಿಗೆ ಆದೇಶ ನೀಡಿದ್ದೇನೆ. ಯಾವ ಕಾರಣಕ್ಕಾಗಿ ಆದೇಶ ಜಾರಿಯಲ್ಲಿ ವಿಳಂಬವಾಗಿದೆ ಎಂಬುದರ ಕುರಿತು ನನಗೆ ಈವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರು.

ಕಾನೂನು, ನಿಯಮಾವಳಿಗಳು, ಸಂವಿಧಾನ ಬದ್ಧವಾಗಿ ನನ್ನ ಕರ್ತವ್ಯವನ್ನು ಪಾಲನೆ ಮಾಡಿದ್ದೇನೆ. ನಾನು ಸದನ ರಕ್ಷಕನಾಗಿರುವುದರ ಜೊತೆಗೆ, ಸದನದ ಸೇವಕನು ಹೌದು. ಸದನ ಹೇಳುವುದನ್ನಷ್ಟೇ ನಾನು ಮಾಡಬೇಕಿದೆ. ಸದನದ ಆದೇಶವನ್ನು ಅನುಷ್ಠಾನ ಮಾಡಬೇಕಾದ್ದು ಸರಕಾರ ಕರ್ತವ್ಯ. ಆರೋಪಿಗಳನ್ನು ಬಂಧಿಸುವುದು ನನ್ನ ಕೆಲಸವಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News