ಎಂಡೋಸಲ್ಫಾನ್ ಸಂತ್ರಸ್ತರಿಗೆ ‘ಕೇರಳ ಮಾದರಿ’ ಚಿಕಿತ್ಸೆ-ಪರಿಹಾರ: ಆರೋಗ್ಯ ಸಚಿವ ರಮೇಶ್ ಕುಮಾರ್
ಬೆಂಗಳೂರು, ಜು.3: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲೆ ಚಿಕಿತ್ಸೆ ಮತ್ತು ಪರಿಹಾರ ಒದಗಿಸುವ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಂಡೋ ಸಂತ್ರಸ್ತರಿಗೆ ಚಿಕಿತ್ಸೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಸಿಎಂ ಅಧ್ಯಕ್ಷತೆಯ ಸಮಿತಿ ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಮೂರು ಜಿಲ್ಲೆಗಳ ಹದಿನಾಲ್ಕು ತಾಲೂಕುಗಳಲ್ಲಿ ಒಟ್ಟು 6914 ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿದ್ದು, ಮಾಸಿಕ ವೇತನ ನೀಡಲಾಗುತ್ತಿದೆ. ಶೇ.25ರಿಂದ 59ರಷ್ಟು ವಿಕಲಚೇತರಿಗೆ ಮಾಸಿಕ 1500ರೂ., ಶೇ.60ಕ್ಕೂ ಹೆಚ್ಚು ವಿಕಲಚೇತನರಿಗೆ ಮಾಸಿಕ 3 ಸಾವಿರ ರೂ.ಪರಿಹಾರ ನೀಡಲಾಗುತ್ತಿದೆ. ಇದು ಕೇರಳ ರಾಜ್ಯಕ್ಕಿಂತಲೂ ಜಾಸ್ತಿ ಎಂದರು.
ಹಾಸಿಗೆ ಹಿಡಿದಿರುವ ಸಂತ್ರಸ್ತರಿಗೆ ತಲಾ 3ಲಕ್ಷ ರೂ.ಪರಿಹಾರ, ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು, ಎಂಡೋಸಲ್ಫಾನ್‌ನಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಎಂಡೋ ಸಂತ್ರಸ್ತರಿಗೆ ವಿವಿಧ ಸೌಲಭ್ಯ ಕಲ್ಪಿಸಲು 100 ರೂ.ಗಳ ವೆಚ್ಚವಾಗಲಿದ್ದು, ಈ ಸಂಬಂಧ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಶೈಕ್ಷಣಕ್ಕಾಗಿ ವಿಶೇಷ ಶಾಲೆಯನ್ನು ಆರಂಭಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಎಂಡೋ ಸಂತ್ರಸ್ತರಿಗೆ ಆರೈಕೆ ಮತ್ತು ವೃತ್ತಿ ಆಧರಿತ ತರಬೇತಿಗೂ ವಿಶೇಷ ಶಿಕ್ಷಣಕ್ಕೆ ಶಾಶ್ವತ ಪರಿಹಾರ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.
ಎಂಡೋ ಸಂತ್ರಸ್ತರು-6,914
ದಕ್ಷಿಣ ಕನ್ನಡ-3,067
ಉಡುಪಿ-1,514
ಉತ್ತರ ಕನ್ನಡ-1,793