ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಭರ್ತಿಗೆ ‘ಹರಾಜು’: ಕೆ.ಆರ್.ರಮೇಶ್ ಕುಮಾರ್

Update: 2017-07-03 14:18 GMT

ಬೆಂಗಳೂರು, ಜು.3: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ನೇಮಕಕ್ಕೆ ‘ಇ-ಹರಾಜು’ ಪ್ರಕ್ರಿಯೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ತಜ್ಞ ವೈದ್ಯರ ನೇಮಕಾತಿಗೆ ಇ-ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಆಸಕ್ತ ತಜ್ಞ ವೈದ್ಯರು ಸರಕಾರಿ ಆಸ್ಪತ್ರೆಗಳ ಸೇವೆಗೆ ಬರಬಹುದು ಎಂದು ಕೋರಿದರು.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 1 ಸಾವಿರ ಮಂದಿ ತಜ್ಞ ವೈದ್ಯರ ಕೊರತೆ ಇದೆ. ಈ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ 1.25 ಲಕ್ಷ ರೂ.ವೇತನ ನೀಡಿದರೂ, ವೈದ್ಯರು ಬರಲಿಲ್ಲ. ಪ್ರಕರಣದ ಆಧಾರದ ಮೇಲೆಯೂ ಬರಲಿಲ್ಲ. ಹೀಗಾಗಿ ಇ-ಹರಾಜು (ಬಿಡ್) ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಜ್ಞ ವೈದ್ಯರ ಬೇಡಿಕೆಯನ್ನು ಆಧರಿಸಿ ಅವರು ಎಷ್ಟು ಮೊತ್ತ ಕೇಳುತ್ತಾರೋ ನೋಡಿ ಸರಕಾರಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜು.6ಕ್ಕೆ ಸಭೆ: ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕದ ಸಮಗ್ರ ಅಧ್ಯಯನಕ್ಕೆ ನಿಯೋಜಿಸಿರುವ ಶಾಸಕ ಕೆ.ಎನ್.ರಾಜಣ್ಣ ನೇತೃತ್ವದ ಜಂಟಿ ಸಲಹಾ ಸಮಿತಿ ಸಭೆ ಜುಲೈ 6ರಂದು ವಿಧಾನಸೌಧದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಸಂಬಂಧ 2007ರಲ್ಲಿ ರೂಪಿಸಿದ್ದ ಕಾನೂನಿನಲ್ಲಿದ್ದ ಕೆಲ ಲೋಪದೋಷಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತಿದ್ದುಪಡಿ ತರಲಾಗಿದೆ ಎಂದ ಅವರು, ಯಾವುದೇ ತರಾತುರಿಯಿಂದ ವಿಧೇಯಕವನ್ನು ತಂದಿಲ್ಲ. ಅಪವಾದಗಳಿಗೆ ಗುರಿಯಾಗಬಾರದು ಎಂದು ಸಲಹಾ ಸಮಿತಿಗೆ ವಹಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸ್ಪಷ್ಟಣೆ ನೀಡಿದರು.

‘ಮುಂಗಾರು ಮಳೆ ಆರಂಭದಿಂದ ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ವಿವಿಧೆಡೆಯಲ್ಲಿ ಸೊಳ್ಳೆಗಳ ಉತ್ಪಾದನೆಯಿಂದ ಡೆಂಗ್ಯು ಪ್ರಕರಣಗಳ ಹೆಚ್ಚಾಗಿವೆ. ನೈರ್ಮಲ್ಯ ಕಾಪಾಡಲು ಸ್ಥಳೀಯ ಸಂಸ್ಥೆಗಳ ಆಸ್ಥೆ ವಹಿಸಬೇಕು. ಡೆಂಗ್ಯು ಪೀಡಿತರಿಗೆ ಅಗತ್ಯ ‘ಪ್ಲೆಟ್‌ಲೆಟ್ಸ್’ ಒದಗಿಸಲು ಸರಕಾರ ಕ್ರಮ ವಹಿಸಲಿದೆ’

-ಕೆ.ಆರ್.ರಮೇಶ್‌ಕುಮಾರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News