ಬಾಕಿ ಹಣದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದಕ್ಕೆ ಜೀವ ಬೆದರಿಕೆ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ದೂರು

Update: 2017-07-03 16:54 GMT

ಬೆಂಗಳೂರು, ಜು.3: ಹಣ ನೀಡಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದಕ್ಕೆ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೋವಿ ಸಮಾಜದ ಮುಖಂಡ ಡಾ.ವೆಂಕಟೇಶ್ ಮೌರ್ಯ ಎಂಬುವರು ಇಲ್ಲಿನ ಯಶವಂತಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?:

2009ನೆ ಸಾಲಿನ ಲೋಕಸಭಾ ಚುನಾವಣೆಗಾಗಿ ಚಿತ್ರದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬೋವಿ ಸಮಾಜದ ನಿವೃತ್ತ ಡಿಸಿಪಿ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಲು 2 ಕೋಟಿ ರೂ. ಹಣವನ್ನು ಅಂದಿನ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಪಡೆದಿದ್ದರು. ಬಳಿಕ 2 ಕೋಟಿ ರೂ. ಮೊತ್ತದಲ್ಲಿ 30 ಲಕ್ಷ ರೂ. ಹಾಗೇ ಉಳಿಸಿಕೊಂಡಿದ್ದರು ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಜೂ.24ರಂದು ಬರೆದುಕೊಂಡಿದ್ದೆ ಎಂದು ವೆಂಕಟೇಶ್ ವೌರ್ಯ ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಆತನ ಆಪ್ತರು ಎನ್ನಲಾದ ರವಿ ಮಾಕಳಿ, ವೈ.ಸುರೇಂದ್ರ ಗೌಡ, ಎಂ.ಪಿ.ಅನಿಲ್ ಕುಮಾರ್, ನಟೇಶ್, ರಾಮೂ ಪಿ ರಾವ್, ಎಂ.ರಘು, ಶ್ರೀದರ್ಶಿ, ಕೆ.ವಿ.ವೆಂಕಟೇಶ್ ಮತ್ತು ವೀರೇಂದ್ರ ಸೇರಿದಂತೆ ಪ್ರಮುಖರು ಮೊಬೈಲ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದಲ್ಲದೆ, ಮನೆಗೆ ಬಂದು ಗಲಾಟೆ ಮಾಡಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಪ್ರಕರಣ ಸಂಬಂಧ ನನಗೆ ರಕ್ಷಣೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಾ.ವೆಂಕಟೇಶ್ ವೌರ್ಯ ಯಶವಂತಪುರ ಠಾಣಾ ಪೊಲೀಸರು ದೂರು ನೀಡಿದ್ದಾರೆ.

ವೆಂಕಟೇಶ್ ಮೌರ್ಯ ಫೇಸ್‌ಬುಕ್‌ನಲ್ಲಿ ಬರೆದಿರುವುದು? ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು ಸಚಿವರು ಇದ್ದ ಸಂದರ್ಭದಲ್ಲಿ 2009ರ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಲೋಕಸಭಾದಿಂದ ಬಿಜೆಪಿ ಟಿಕೆಟ್ ಕೊಡಿಸುವದಾಗಿ ಹೇಳಿ ಡಿಸಿಪಿ ತಿಮ್ಮಪ್ಪ ಅವರಿಗೆ 6-7ವರ್ಷಗಳ ಸೇವೆ ಇದ್ದರೂ ಸಹ ಅವರಿಗೆ ರಾಜಿನಾಮೆ ಕೊಡಿಸಿ 2 ಕೋಟಿ ರೂ. ಹಣವನ್ನು ಪಡೆದು, ಚುನಾವಣೆಯಲ್ಲಿ ಟಿಕೆಟ್ ಕೊಡಿಸದೆ 2014 ವರೆಗೂ ಸಂಪೂರ್ಣ ಹಣ ಹಿಂದುರಿಗಿಸದೆ ಕೇವಲ 5,10,20 ಲಕ್ಷಗಳನ್ನು ಕೊಡುತ್ತಾ ಸುಮಾರು 30 ಲಕ್ಷ ರೂಪಾಯಿಗಳನ್ನು ತಿಮ್ಮಪ್ಪ ಅವರಿಗೆ ಪಂಗನಾಮ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News