×
Ad

ಮೇಕೆದಾಟು ಯೋಜನೆ ಜಾರಿಗೆ ವಿರೋಧ ಖಂಡಿಸಿ ಜು.6 ರಂದು ಪ್ರತಿಭಟನೆ

Update: 2017-07-04 19:41 IST

ಬೆಂಗಳೂರು, ಜು.4: ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡಿನ ಕ್ರಮವನ್ನು ಖಂಡಿಸಿ ಜು.6 ರಂದು ನಗರದ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಉದ್ದೇಶಪೂರ್ವಕವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಮೇಕೆದಾಟಿಗೂ, ತಮಿಳುನಾಡಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಇದನ್ನು ಜಾರಿ ಮಾಡುವುದರಿಂದ ಯಾವುದೇ ತೊಂದರೆಯಾಗಲ್ಲ. ಹೀಗಿದ್ದರೂ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

 ಕಾವೇರಿ ವಿಚಾರವಾಗಿ ತಮಿಳುನಾಡಿನ ಎಲ್ಲ ಪಕ್ಷದ ಸದಸ್ಯರು ಒಗ್ಗಟ್ಟಾಗಿದ್ದಾರೆ. ಈಗ ಮೇಕೆದಾಟು ಯೋಜನೆ ವಿರೋಧ ಮಾಡುವಲ್ಲಿಯೂ ಒಟ್ಟಿಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಮೇಕೆದಾಟು, ಕಾವೇರಿ ಯಾವುದೇ ವಿಷಯದಲ್ಲಿಯೂ ಎಲ್ಲರೂ ಒಗ್ಗಟ್ಟಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅಧಿವೇಶನ ಕರೆದು, ಮೇಕೆದಾಟು ಯೋಜನೆ ಜಾರಿ ಮಾಡುವ ತೀರ್ಮಾನ ಕೈಗೊಳ್ಳಬೇಕು. ಆ ಮೂಲಕ ತಮಿಳುನಾಡಿನ ಮೃದು ಧೋರಣೆ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ರಾಜ್ಯದ ಸಂಸದರು, ಕೇಂದ್ರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ಮಾಧ್ಯಮದವರ ವಿರುದ್ಧದ ಹಕ್ಕುಚ್ಯುತಿ ವಿಷಯದಲ್ಲಿ ಏಕಪಕ್ಷೀಯವಾಗಿ ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ. ಶಾಸನಸಭೆಯ ತೀರ್ಮಾನ ಸರ್ವಾಧಿಕಾರಿ ನಿರ್ಣಯವಾಗಿದ್ದು, ಸ್ಪೀಕರ್ ಕೋಳಿವಾಡ ಸವಾರ್ಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಶಿಕ್ಷೆ ವಿಧಿಸಿರುವ ಪತ್ರಕರ್ತರು ಮಾಡಬಾರದ ಕೆಲಸ ಏನಾದರೂ ಮಾಡಿದ್ದಾರ ಎಂದು ಪ್ರಶ್ನಿಸಿದರು.

ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಎಂದರೆ ಹುಡುಗಾಟವೇ? ಸದನಕ್ಕೆ ಕರೆಯಿಸಿ ಮಾತುಕತೆ ಮಾಡಿಕೊಳ್ಳುವ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳಬೇಕಿತ್ತು. ಅದನ್ನು ಹೊರತು ಪಡಿಸಿ ಈ ರೀತಿ ಶಿಕ್ಷೆ ನೀಡುವುದು ಸರಿಯಲ್ಲ ಎಂದ ಅವರು ದೂರಿದರು.

ನೀರು ಹರಿಸಿದ್ದು ಸರಿಯಲ್ಲ: ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಆದರೂ, ರಾಜ್ಯ ಸರಕಾರ ರಾತ್ರೋ ರಾತ್ರಿ ತಮಿಳುನಾಡಿಗೆ ಪೊಲೀಸರ ನೆರವಿನಿಂದ ನೀರು ಹರಿಸಿದ್ದು ಸರಿಯಾದ ಕ್ರಮವಲ್ಲ. ಕೆಆರ್‌ಎಸ್, ಕಬಿನಿ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಈಗ ಅಲ್ಪ ಮಳೆಯಾಗಿದ್ದು, ಆ ನೀರನ್ನು ಬಿಟ್ಟರೆ, ಇಲ್ಲಿನವರ ಪರಿಸ್ಥಿತಿ ಏನಾಗಬೇಕು. ಹೀಗಾಗಿ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News