ರಾಮನಾಥ್ ಕೋವಿಂದ್ ನಾಳೆ ಬೆಂಗಳೂರಿಗೆ

Update: 2017-07-04 14:33 GMT

ಬೆಂಗಳೂರು, ಜು.4: ಎನ್‌ಡಿಎ ಮಿತ್ರಪಕ್ಷಗಳ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ರಾಮನಾಥ್ ಕೋವಿಂದ್, ಮತ ಯಾಚನೆಗಾಗಿ ಬುಧವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ವಿಶೇಷ ವಿಮಾನದ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ರಾಮನಾಥ್ ಕೋವಿಂದ್ ಆಗಮಿಸಲಿದ್ದಾರೆ. ಆನಂತರ, ಮಧ್ಯಾಹ್ನ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿಯ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ, ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಕೋರಲಿದ್ದಾರೆ.

ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಮೀರಾ ಕುಮಾರ್‌ಗೆ ಜೆಡಿಎಸ್ ಬೆಂಬಲ ನೀಡಿರುವುದರಿಂದ, ರಾಮನಾಥ್ ಕೋವಿಂದ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಥವಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

 ಆದರೆ, ಇತರ ಪಕ್ಷೇತರ ಶಾಸಕರು, ಪಕ್ಷೇತರ ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರಶೇಖರ್ ಸೇರಿದಂತೆ ಇನ್ನಿತರರನ್ನು ಭೇಟಿ ಮಾಡಿ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ರಾಮನಾಥ್ ಕೋವಿಂದ್ ಮನವಿ ಮಾಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News