ವಿದ್ಯುತ್ ಅವಘಡಗಳಲ್ಲಿ ತೀರಿಕೊಂಡರೆ 5ಲಕ್ಷ ರೂ.ಪರಿಹಾರ: ಡಿ.ಕೆ.ಶಿವಕುಮಾರ್‌

Update: 2017-07-04 15:49 GMT

ಬೆಂಗಳೂರು, ಜು.4: ವಿದ್ಯುತ್ ತಂತಿ ಸ್ಪರ್ಶಿಸಿ ಇಲ್ಲವೆ ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಅವಘಡಗಳಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಸುಮಾರು 5ಲಕ್ಷ ರೂ.ಪರಿಹಾರವನ್ನು ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕೆಪಿಟಿಸಿಎಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿದ್ಯುತ್ ಅವಘಡಗಳಲ್ಲಿ ಸಾವನ್ನಪ್ಪಿದರೆ 2 ಲಕ್ಷ ರೂ.ಪರಿಹಾರ ಕೊಡುವುದಿತ್ತು. ಇದನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ. ಈ ಕುರಿತು ಎರಡು ಮೂರು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ವಿದ್ಯುತ್ ಅವಘಡದಿಂದ ಹಸು, ಕುರಿ, ಮೇಕೆ ಸೇರಿದಂತೆ ಸಾಕು ಪ್ರಾಣಿಗಳು ಸತ್ತರೆ ಎರಡು-ಮೂರು ಸಾವಿರ ರೂ. ಕೊಡಲಾಗುತ್ತಿತ್ತು. ಇದನ್ನು 50ಸಾವಿರ ರೂ.ಗೆ ಏರಿಸಲಾಗಿದೆ. ಪ್ರಾಣಿಗಳು ಸತ್ತಿರುವುದರ ಕುರಿತು ಪಶುಸಂಗೋಪನಾ ಇಲಾಖೆಯಲ್ಲಿ ವಿವರಗಳನ್ನು ದಾಖಲಿಸಿ, ಅದರ ಸೂಚನೆಯಂತೆ ಪರಿಹಾರ ಕೊಡಲಾಗುವುದು ಎಂದು ಅವರು ತಿಳಿಸಿದರು.

ಪ್ರೊಬೇಷನರಿ ಲೈನ್‌ಮನ್‌ಗಳು ವಿದ್ಯುತ್ ಕಂಬವನ್ನು ಹತ್ತದಂತೆ ಕಾನೂನು ರೂಪಿತವಾಗಿದೆ. ಇದನ್ನು ತೆಗೆದುಹಾಕಲಾಗಿದ್ದು, ಇನ್ನು ಮುಂದೆ ಕಂಬ ಹತ್ತಿ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ವಿದ್ಯುತ್ ಅವಘಡದಿಂದ ಗಾಯ ಹಾಗೂ ಮರಣ ಹೊಂದಿದರೆ ಖಾಯಂ ಉದ್ಯೋಗಿಗಳಿಗೆ ನೀಡುವ ಎಲ್ಲ ರೀತಿಯ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News