ವಂಚನೆ ಪ್ರಕರಣ: ವಿದೇಶಿ ಪ್ರಜೆ ಸೇರಿ ಇಬ್ಬರ ಬಂಧನ
ಬೆಂಗಳೂರು, ಜು.5: ಕಾರು ಮಾರಾಟಕ್ಕಿದೆ ಎಂದು ನಂಬಿಸಿ ಒಎಲ್‌ಎಕ್ಸ್ ವೆಬ್‌ಸೈಟ್‌ನಿಂದ ವಂಚನೆ ಮಾಡುತ್ತಿದ್ದ ಪ್ರಕರಣ ಸಂಬಂಧ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ನಗರದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಆಗಸ್ಟೀನ್ ಪೀಟರ್ (42) ಹಾಗೂ ಕೆಆರ್‌ಪುರಂ ಗಂಗಮ್ಮ ದೇವಸ್ಥಾನ ಬಳಿಯ ನಿವಾಸಿ ಜಗದೀಶ್‌ಕುಮಾರ್(35) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟೀನ್ ಪೀಟರ್ ಕಾರಿನ ಫೋಟೋವನ್ನು ಒಎಲ್‌ಎಕ್ಸ್ ವೆಬ್‌ಸೈಟ್‌ಗೆ ಹಾಕಿ ಕಾರು ಮಾರಾಟಕ್ಕಿದೆ ಎಂದು ಸಾರ್ವಜನಿಕರನ್ನು ಸೆಳೆದು ಹಂತ ಹಂತವಾಗಿ ನಂಬಿಸಿ, ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ವಂಚಿಸಿದ್ದ ಎಂದು ಆರೋಪಿಸಿ ಸೈಬರ್ ಕ್ರೈಂಗೆ ದೂರು ಬಂದಿತ್ತು. ಅದೇ ರೀತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಜಗದೀಶ್ ಕುಮಾರ್, ಆರೋಪಿ ಅಗಸ್ಟೀನ್ ಪೀಟರ್‌ಗೆ ಯಾವುದೇ ದಾಖಲಾತಿಗಳನ್ನು ಪಡೆಯದೆ ಹೆಚ್ಚಿನ ಹಣಕ್ಕಾಗಿ ಅನ್ಯ ವ್ಯಕ್ತಿಯ ದಾಖಲಾತಿಗಳನ್ನು ಬಳಸಿ, ಸಿಮ್‌ಕಾರ್ಡ್ ನೀಡಿದ್ದ ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಐದು ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದು ತನಿಖೆ ಮುಂದುವರೆಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.