‘ಕೈ ಕೊಟ್ಟ ಮುಂಗಾರು’ಮೋಡ ಬಿತ್ತನೆಗೆ ಸಂಪುಟ ನಿರ್ಧಾರ

Update: 2017-07-05 16:04 GMT

ಬೆಂಗಳೂರು, ಜು.5: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಾವೇರಿ, ತುಂಗಭದ್ರ ಹಾಗೂ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಹೊಯ್ಸಳ ಸಂಸ್ಥೆಗೆ ಮೋಡ ಬಿತ್ತನೆಯ ಹೊಣೆಗಾರಿಕೆಯನ್ನು ವಹಿಸಿದ್ದು, 60 ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದ್ದು, 30 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರ ಮುಂದಿನ ಪ್ರಕ್ರಿಯೆಯನ್ನು ಅಭಿವೃದ್ಧಿ ಆಯುಕ್ತರಿಗೆ ನಿಗಾವಹಿಸಲಿದ್ದಾರೆ ಎಂದು ಅವರು ಹೇಳಿದರು.ರಾಜ್ಯದ 2500 ಗ್ರಾಮ ಪಂಚಾಯಿತಿಗಳಿಗೆ ಬಿಎಸ್ಸೆನ್ನೆಲ್ ಮುಖಾಂತರ ವೈಫೈ ಸೇವೆಗಳನ್ನು 2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ 79.50 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕಲ್ಪಿಸಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.

5 ದಿನ ಮಕ್ಕಳಿಗೆ ಹಾಲು : ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಕಾರ್ಯಕ್ರಮದಡಿ ಜುಲೈ ತಿಂಗಳಿನಿಂದಲೇ ವಾರದಲ್ಲಿ 5 ದಿನ ಹಾಲು ವಿತರಿಸಲು ಹಾಗೂ ವಿಸ್ತರಣೆಗಾಗಿ ವಾರ್ಷಿಕ 285 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ. ಅಲ್ಲದೆ, ಮೈಸೂರು ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ಫ್ಲೆವರ್ಡ್‌(ಸುವಾಸಿತ) ಹಾಲು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಡುಗೆಯವರು ಹಾಗೂ ಸಹಾಯಕರಿಗೆ ತಲಾ 200 ರೂ.ಗೌರವಧನವನ್ನು ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸಕ್ತ ತಿಂಗಳಿನಿಂದಲೆ ಜಾರಿಗೆ ಬರಲಿದೆ ಎಂದು ಜಯಚಂದ್ರ ತಿಳಿಸಿದರು.

ಮಾತೃಪೂರ್ಣ ಯೋಜನೆ ಜಾರಿ: 2017-18ನೆ ಸಾಲಿನಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದನ್ವಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟವನ್ನು ಮಾತೃಪೂರ್ಣ ಯೋಜನೆಯನ್ವಯ ಎಲ್ಲ 30 ಜಿಲ್ಲೆಗಳಿಗೆ ವಿಸ್ತರಿಸಲು ಹೆಚ್ಚುವರಿಯಾಗಿ 202 ಕೋಟಿ ರೂ.ಗಳನ್ನು ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

2017-18ನೆ ಸಾಲಿನಲ್ಲಿ 206 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 2353 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇ-ಆಸ್ಪತ್ರೆ ಯೋಜನೆಯನ್ನು 13.78 ಕೋಟಿ ರೂ.ಅಂದಾಜಿನಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ 150-200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತಲಾ 25 ಕೋಟಿ ರೂ.ಗಳಂತೆ ಒಟ್ಟು 125 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.


ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಓ.ಟಿ.ಸಂಕೀರ್ಣವನ್ನು 25 ಕೋಟಿ ರೂ.ಮೊತ್ತದಲ್ಲಿ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್) ಆವರಣದಲ್ಲಿ ಹಾಗೂ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್) ಆವರಣದಲ್ಲಿ ತಲಾ 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ರೀಲರುಗಳಿಗೆ ಬೆಳೆ ಸಾಲದ ಮಾದರಿಯಲ್ಲಿ, 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ದುಡಿಮೆ ಬಂಡವಾಳ ಒದಗಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ಸರಕಾರಕ್ಕೆ 160 ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ಅವರು ತಿಳಿಸಿದರು.
ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್‌ನ ತುಮಕೂರು ವಸಂತನರಸಾಪುರದ 4ನೆ ಹಂತದಲ್ಲಿ ಭೂ ಸ್ವಾಧೀನಕ್ಕಾಗಿ 2017-18ನೆ ಸಾಲಿನಲ್ಲಿ ಕೆಐಎಡಿಬಿ ಸಂಸ್ಥೆಗೆ ಒಂದು ಬಾರಿ ಅನುದಾನವಾಗಿ 400 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News