ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಕೆಆರ್‌ಎಸ್‌ಗೆ ಮುತ್ತಿಗೆ: ಕೆ.ಎಸ್.ಪುಟ್ಟಣ್ಣಯ್ಯ
ಬೆಂಗಳೂರು, ಜು.6: ತಮಿಳುನಾಡಿಗೆ ನೀರಿ ಹರಿಸುವುದನ್ನು ನಿಲ್ಲಿಸಿ ಮುಂದಿನ ವಾರದೊಳಗೆ ಕಾವೇರಿ ಜಲಾಶಯದ ವ್ಯಾಪ್ತಿಯಲ್ಲಿರುವ ಎಲ್ಲ ಕಾಲುವೆಗಳಿಗೆ ಮುಂಗಾರು ಹಂಗಾಮಿನ ಬೆಳೆಗಾಗಿ ನೀರು ಬಿಡದಿದ್ದರೆ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಅಲ್ಪಪ್ರಮಾಣದ ಕಾಲಾವಕಾಶವಿದೆ. ಹೀಗಾಗಿ ಕೂಡಲೇ ಸರಕಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ರಾಜ್ಯದ ರೈತರ ಬೆಳೆಗಳಿಗೆ ಅಗತ್ಯವಿರುವ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ನಡುವೆ ಕಳೆದ 26 ವರ್ಷಗಳ ಹಿಂದೆ 205 ಟಿಎಂಸಿ ನೀರು ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆಗಸ್ಟ್‌ನಲ್ಲಿ 50, ಸೆಪ್ಟಂಬರ್‌ನಲ್ಲಿ 40, ಅಕ್ಟೋಬರ್‌ನಲ್ಲಿ 22, ನವೆಂಬರ್‌ನಲ್ಲಿ 15, ಡಿಸೆಂಬರ್‌ನಲ್ಲಿ 8 ಮತ್ತು ಜನವರಿಯಲ್ಲಿ 2 ಟಿಎಂಸಿ ನೀರು ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಮಳೆಯೇ ಬೀಳದಿದ್ದರೆ ಈ ಪ್ರಮಾಣದ ನೀರನ್ನು ರಾಜ್ಯ ಸರಕಾರ ಹೇಗೆ ತಮಿಳುನಾಡಿಗೆ ಹರಿಸುತ್ತದೆ ಎಂದು ಪ್ರಶ್ನಿಸಿದರು.
ತಮಿಳುನಾಡಿನಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ 27 ಟಿಎಂಸಿ ಮತ್ತು ಹಿಂಗಾರು ಹಂಗಾಮಿನ 7 ಸಾವಿರ ಎಕರೆ ಬೆಳೆಗೆ ರಾಜ್ಯದಿಂದ ನೀರು ಬಿಡಬೇಕು ಎನ್ನುವ ಸುಪ್ರೀಂನ ಈ ತೀರ್ಮಾನದಿಂದ ರಾಜ್ಯ ಸರಕಾರ ಹಾಗೂ ರಾಜ್ಯದ ರೈತರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ನೀರು ಬಿಡುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡುವ ಮೊದಲು 2 ರಾಜ್ಯಗಳ ಕೃಷಿ ಸ್ಥಿತಿಯನ್ನು ನ್ಯಾಯಯುತವಾಗಿ ಅವಲೋಕಿಸಬೇಕು. ಸುಪ್ರೀಂ ಕೋರ್ಟ್ ಕೃಷಿ ಜ್ಞಾನ ಆಧರಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಪುಟ್ಟಣ್ಣಯ್ಯ ಆಗ್ರಹಿಸಿದರು.
ತಮಿಳುನಾಡಿಗೆ ಈಗ ಕುರುವೈ ಬೆಳೆಗೆ ನೀರು ಬೇಕು. ಈ ಬೆಳೆ ಕೇವಲ 3 ಲಕ್ಷ ಎಕರೆಯಲ್ಲಿದೆ. ಆದರೆ ನಮ್ಮಲ್ಲಿ 18 ಲಕ್ಷ ಎಕರೆ ಪ್ರದೇಶದಲ್ಲಿ ಇದೇ ಸಂದರ್ಭದಲ್ಲಿ ಬೆಳೆ ಬೆಳೆಯಲಾಗುತ್ತದೆ. ವಾಸ್ತವವಾಗಿ ನಮಗೆ ಅಧಿಕ ನೀರು ಬೇಕೆಂದ ಅವರು, ಈಗಾಗಲೇ ಭತ್ತದ ಮಡುಗಳನ್ನು ಹಾಕಿಕೊಳ್ಳಲು ಕಾಲಾವಕಾಶ ಮಿತಿಮೀರಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಭತ್ತದ ನಾಟಿ ಹಾಗೂ ಇನ್ನಿತರ ಬೆಳೆಗಳಿಗೆ ರೈತರು ಸಿದ್ಧತೆ ಮಾಡಿಕೊಳ್ಳದಿದ್ದರೆ ಈ ವರ್ಷವೂ ಬೆಳೆ ನಷ್ಟ ಅನುಭವಿಸುವ ಸಾಧ್ಯತೆಗಳೇ ಹೆಚ್ಚು ಎಂದರು.
ಹೀಗಾಗಿ ಇದನ್ನು ರಾಜ್ಯ ಸರಕಾರ ಸೂಕ್ಷ್ಮವಾಗಿ ಅವಲೋಕಿಸಿ ಬೆಳೆಗಳಿಗಾಗಿ ಅಗತ್ಯವಿರುವ ನೀರನ್ನು ಕಾಲುವೆ ಹಾಗೂ ಇತರೆ ಜಲಸಂಗ್ರಹ ಪ್ರದೇಶಗಳಿಗೆ ಬಿಡುಗಡೆ ಮಾಡಬೇಕು ಎಂದ ಅವರು, ಮೇಕೆದಾಟು ಜಲಾಶಯ ನಿರ್ಮಿಸಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಹರಿಯುವ ನೀರು ಮೇಲಿನ ಭಾಗದಲ್ಲಿದ್ದರೆ ಕೆಳಗೆ ಬಿಡಬಹುದು. ಆದರೆ ಕೆಳಗಿದ್ದರೆ ಮೇಲಕ್ಕೆ ತರಲು ಹೇಗೆ ಸಾಧ್ಯ. ಇದನ್ನು ಯೋಚಿಸಬೇಕು. ನಮ್ಮಲ್ಲಿ ನೀರು ಸಂಗ್ರಹಿಸಿದರೆ ಅದನ್ನು ತಮಿಳುನಾಡಿಗೆ ಬಿಡಬಹುದು. ಕರ್ನಾಟಕ ಗಡಿಯಲ್ಲಿ ಡ್ಯಾಂ ನಿರ್ಮಿಸಿದರೆ ನಮಗೆ ನೀರು ಬರಲ್ಲ ಎನ್ನುವ ಆತಂಕ ಅವರಿಗೆ ಬೇಡ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಇಸ್ರೇಲ್ ದೇಶ ದೇಶಗಳ ನಡುವೆ ಬಾಂಧವ್ಯ ಮೂಡಿಸಲು ಹೋಗುತ್ತಿದ್ದಾರೆ. ಆದರೆ, ಅದೇ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿರುವ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಕಿಡಿಕಾರಿದರು.