ಶೀಘ್ರ ಸಂಪುಟ ವಿಸ್ತರಣೆ: ಸಿಎಂ

Update: 2017-07-06 13:34 GMT

ಬೆಂಗಳೂರು, ಜು.6: ಆಷಾಢ, ಶ್ರಾವಣ, ರಾಹುಕಾಲ-ಗುಳಿಕಕಾಲದ ವಿಚಾರಗಳ ಬಗ್ಗೆ ತನಗೆ ಯಾವುದೇ ರೀತಿಯ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಶೀಘ್ರದಲ್ಲೇ ದಿಲ್ಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ರಾಷ್ಟ್ರಪತಿ ಬಾಬು ಜಗಜೀವನ್ ರಾಂ ಅವರ 31ನೆ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಪುತ್ಥಳಿ ಬಳಿ ಇರಿಸಿದ್ದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಇತ್ತೀಚೆಗೆ ದಿಲ್ಲಿಗೆ ತೆರಳಿದ್ದರೂ ಆ ವೇಳೆ ಸಂಪುಟ ವಿಸ್ತರಣೆ ಸಂಬಂಧ ವರಿಷ್ಟರೊಂದಿಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೊಂಚ ವಿಳಂಬವಾಗಿದೆ. ‘ಆಷಾಢ’ದ ಕಾರಣಕ್ಕೆ ವಿಳಂಬವಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಆಷಾಢ, ಶ್ರಾವಣ ವಿಚಾರಗಳಲ್ಲಿ ತನಗೆ ನಂಬಿಕೆ ಇಲ್ಲ ಎಂದರು.

ಗೃಹ, ಸಹಕಾರ, ಅಬಕಾರಿ ಸೇರಿದಂತೆ ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇದ್ದು, ಆ ಮೂರು ಸ್ಥಾನಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲಿ ಅನುಮಾನ ಮತ್ತು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದರು.

ಸಂಪುಟ ವಿಸ್ತರಣೆ ಯಾವಾಗ ಎಂದು ಪದೇ ಪದೇ ಕೇಳುತ್ತೀರಿ. ನಿಮ್ಮನ್ನು ಯಾರಾದರೂ ಸಂಪುಟ ವಿಸ್ತರಣೆ ಮಾಡಿ ಎಂದು ಕೇಳಿದ್ದರಾ. ನನ್ನನ್ನಂತೂ ಯಾರು ಕೇಳಿಲ್ಲ ಎಂದು ಚಟಾಕಿ ಹಾರಿಸಿದ ಸಿದ್ದರಾಮಯ್ಯ, ಈ ಹಿಂದೆ ದಿಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಅವರ ಭೇಟಿ ಸಾಧ್ಯವಾಗಿರಲಿಲ್ಲ ಎಂದರು.

ನಾನೂ ನೋಡ್ತೀನಿ: ಯಡಿಯೂರಪ್ಪ ವಿರುದ್ಧ ತಾನು ಮಾಡಿದ್ದ ಟೀಕೆಗೆ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ಅವರು ಕೋರ್ಟಿಗೆ ಹೋಗಲಿ ತಾನು ನೋಡುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಯುಪಿಎ ಮಿತ್ರಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಎನ್‌ಡಿಎ ಮಿತ್ರಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರ ಭೇಟಿಗೆ ಕೋಲಿ ಸಮಾಜದ ಮುಖಂಡರಿಗೆ ಅರವಿಂದ ಲಿಂಬಾವಳಿ ಅಡ್ಡಿಪಡಿಸಿದ್ದು ಸರಿಯಲ್ಲ. ಬಿಜೆಪಿಯವರು ಸಾಮಾಜಿಕ ನ್ಯಾಯ, ಸಮ ಸಮಾಜದ ವಿರೋಧಿಗಳು. ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

 ಕಾವೇರಿ ನೀರು ಬಿಡುವಂತೆ ತಮಿಳುನಾಡು ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ, ರಾಜ್ಯದಲ್ಲಿ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯೇ ಇಲ್ಲ. ಹೀಗಿರುವಾಗ ನೀರು ಕೊಡಿ ಎಂದರೆ ಎಲ್ಲಿಂದ ಕೊಡಬೇಕು. ಎಲ್ಲಾ ವಿಚಾರಗಳನ್ನು ಕೋರ್ಟ್ ಗಮನಕ್ಕೆ ತಂದು ರೈತರ ಹಿತರಕ್ಷಣೆ ಮಾಡಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News