ರೋಗಿಗಳ ಶೋಷಣೆ ತಪ್ಪಿಸಲು ಕ್ರಮ: ಕೆ.ಎನ್.ರಾಜಣ್ಣ

Update: 2017-07-06 14:03 GMT

ಬೆಂಗಳೂರು, ಜು. 6: ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಕುರಿತಂತೆ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯ ಮೊದಲ ಸಭೆಯು ಶಾಸಕ ಹಾಗೂ ಸಮಿತಿಯ ಅಧ್ಯಕ್ಷ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಜರುಗಿತು.

ಗುರುವಾರ ವಿಧಾನಸೌಧದ ಸಮಿತಿಯ ಕೊಠಡಿಯಲ್ಲಿ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಅನಾನುಕೂಲ ಮಾಡುವ ಉದ್ದೇಶ ಸಮಿತಿಗೆ ಇಲ್ಲ. ಈ ಬಗ್ಗೆ ಯಾರೊಬ್ಬರಿಗೂ ಆತಂಕಬೇಡ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಚರ್ಚಿಸಿದ ನಂತರ ಸದಸ್ಯರು ಸ್ವಾಗತಿಸಿದ್ದಾರೆ. ಆದರೆ, ಕೆಲ ಸಣ್ಣ-ಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿ ರೋಗಿಗಳಿಗೆ ತೊಂದರೆಯಾಗುವುದನ್ನು ನಿವಾರಿಸಲು ಸಮಿತಿಯು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಅವರು ತಿಳಿಸಿದರು.

2007ರಲ್ಲಿ ಅಂಗೀಕಾರವಾದ ತಿದ್ದುಪಡಿ ಮಸೂದೆ ನಂತರ ಖಾಸಗಿ ಆಸ್ಪತ್ರೆಗಳ ಮೇಲೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರಕಾರಕ್ಕೆ ತಿಳಿಸಿದ್ದು, ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಮಂಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಜಂಟಿ ಸದನ ಸಮಿತಿ ಮುಂದಿನ ಸಭೆಯ ಜು.13ರ ಗುರುವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿದ್ದು, ಆ ಸಭೆಗೆ ರಾಜ್ಯದ ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಇಲಾಖೆ ಕಾರ್ಯದರ್ಶಿಯನ್ನು ಸಭೆಗೆ ಆಹ್ವಾನಿಸಲಾಗಿದ್ದು, ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಅಶ್ವಥ್ ನಾರಾಯಣ್, ನರೇಂದ್ರಸ್ವಾಮಿ, ಶಿವಮೂರ್ತಿ, ಪಿ.ರಾಜೀವ್, ಪಿ.ಆರ್.ರಮೇಶ್, ಗಣೇಶ್ ಕಾರ್ಣಿಕ್, ಐವಾನ್ ಡಿಸೋಜಾ ಸೇರಿದಂತೆ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News