×
Ad

ನೇಮಕಾತಿ ಆದೇಶ ಹೊರಡಿಸುವಂತೆ ಆಗ್ರಹ

Update: 2017-07-06 20:48 IST

ಬೆಂಗಳೂರು, ಜು.6: ಸರಕಾರಿ ಪದವಿ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರ ಸಂಘದಿಂದ ಧರಣಿ ನಡೆಸಿದರು.

ಕರ್ನಾಟಕ ಪದವಿ ಕಾಲೇಜುಗಳ 2160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಆಯ್ಕೆಗೆ 2015 ರಲ್ಲಿ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆದು, ಅಂತಿಮ ಪಟ್ಟಿ ಪ್ರಕಟವಾಗಲು 2017ರ ಜನವರಿವರೆಗೂ ಕಾಯಬೇಕಾಯಿತು. 2016-17ನೆ ಸಾಲಿನಲ್ಲಿ ಕಾಲೇಜು ಶಿಕ್ಷಣದ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, 2017-18ನೆ ಸಾಲಿನ ಶೈಕ್ಷಣಿಕ ವರ್ಷ ಆರಂಭವಾದರೂ ಇದುವರೆಗೂ ನೇಮಕಾತಿ ಆದೇಶ ಸಿಕ್ಕಿಲ್ಲ ಎಂದು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಯೋಗೇಶ್ ಕಿಡಿಕಾರಿದರು.

ಈಗಾಗಲೇ ನೇಮಕಾತಿಗೆ ಆಯ್ಕೆಯಾಗಿ ಎರಡೂವರೆ ವರ್ಷಗಳು ಕಳೆಯುತ್ತಿವೆ. ಇದುವರೆಗೂ ನೇಮಕಾತಿ ಆದೇಶ ನೀಡದೆ ಕಾಲ ಕಳೆಯುತ್ತಿದ್ದಾರೆ. ಇದರಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಅರ್ಹ ಆಕಾಂಕ್ಷಿಗಳಾದ ನಮ್ಮ ಸ್ಥಿತಿ ಶೋಚನೀಯವಾಗಿದೆ. ಇದರಿಂದ ಬಹಳಷ್ಟು ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, ಗೊಂದಲದಲ್ಲಿ ಬೇರೆ ಉದ್ಯೋಗಕ್ಕೆ ಹೋಗಲಾಗದೆ ಜೀವನ ದುಸ್ತರವಾಗಿದೆ ಎಂದು ಹೇಳಿದರು.

ಈಗ ನೇಮಕಾತಿ ಆಯ್ಕೆ ಪ್ರಕಟಗೊಂಡು, ಆದೇಶ ಪ್ರತಿ ಸಿಕ್ಕಿಲ್ಲ. ಆದರೆ, ಪರ್ಯಾಯವಾಗಿ ಖಾಸಗಿ ಕಾಲೇಜುಗಳಲ್ಲಿ ಕೆಲಸ ಹುಡುಕಿಕೊಂಡು ಹೋದರೆ ಮಧ್ಯದಲ್ಲಿ ಬಿಟ್ಟು ಹೋಗುತ್ತಾರೆ ಎಂಬ ಕಾರಣಕ್ಕೆ ನಮಗೆ ಕೆಲಸ ನೀಡುತ್ತಿಲ್ಲ. ಹಲವರು ಅಧಿಸೂಚನೆ ಹೊರಡಿಸಿದ ನಂತರ ಈ ಹುದ್ದೆಗಾಗಿ, ಹಿಂದೆ ಮಾಡುತ್ತಿದ್ದ ಕೆಲಸವನ್ನು ತ್ಯಜಿಸಿ, ಈಗ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ. ಅಲ್ಲದೆ, ಹಲವು ಅಭ್ಯರ್ಥಿಗಳು 40-45 ವರ್ಷ ವಯಸ್ಸು ಮೀರಿದ್ದು, ಸೇವಾ ಅವಧಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಪ್ರಾಧ್ಯಾಪಕರ ಜೀವನದ ಮೇಲೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಕೂಡಲೇ ನೇಮಕಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News