ಕ್ರಿಕೆಟ್: ವಿಂಡೀಸ್ ವಿರುದ್ಧ ಭಾರತಕ್ಕೆ ಸರಣಿ

Update: 2017-07-07 03:57 GMT

ಕಿಂಗ್‌ಸ್ಟನ್, ಜು.7: ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ ಮತ್ತು ಮುಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ವೆಸ್ಟ್‌ ಇಂಡೀಸ್ ತಂಡ, ಭಾರತಕ್ಕೆ ಸುಲಭದ ತುತ್ತಾಗುವುದರೊಂದಿಗೆ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿತು.

48 ರನ್ನುಗಳಿಗೆ ನಾಲ್ಕು ವಿಕೆಟ್ ಪಡೆದ ಮುಹಮ್ಮದ್ ಶಮಿ, ಅತಿಥೇಯರನ್ನು 205 ರನ್ನುಗಳಿಗೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್‌ ಇಂಡೀಸ್ ಪರವಾಗಿ ಶಾಯ್ ಹೋಪ್ (98 ಎಸೆತಗಳಲ್ಲಿ 51), ಕೈಲ್ ಹೋಪ್ (46) ಮತ್ತು ಜೇಸನ್ ಹೋಲ್ಡರ್ (34 ಎಸೆತಗಳಲ್ಲಿ 36) ಮಾತ್ರ ಪ್ರತಿರೋಧ ತೋರಿದರು. ಉಮೇಶ್ ಯಾದವ್ 53 ರನ್‌ಗಳಿಗೆ 3 ವಿಕೆಟ್ ಕಿತ್ತರು. ಮೊದಲ 15 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 70 ರನ್ ಗಳಿಸಿದ್ದ ವೆಸ್ಟ್‌ ಇಂಡೀಸ್‌ಗೆ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಉಮೇಶ್ ಯಾದವ್ ಆಘಾತ ನೀಡಿದರು.

ಸುಲಭದ ಗುರಿ ಪಡೆದ ಭಾರತ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಅಜಿಂಕ್ಯ ರಹಾನೆ ಜತೆ ಸೇರಿದ ನಾಯಕ ಕೊಹ್ಲಿ 2ನೇ ವಿಕೆಟ್‌ಗೆ 79 ರನ್ ಕಲೆ ಹಾಕುವ ಮೂಲಕ ಇನಿಂಗ್ಸ್ ಕಟ್ಟಿದರು. ರಹಾನೆ 6 ರನ್ ಮಾಡಿದ್ದಾಗ ಪಾಯಿಂಟ್‌ನಲ್ಲಿ ಜೀವದಾನ ಪಡೆದಿದ್ದರು. ಆದರೆ ಸತತ ಐದು ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ನಾಲ್ಕನೇ ಆಟಗಾರ ಎಂಬ ದಾಖಲೆ ನಿರ್ಮಿಸಲು 11 ರನ್‌ಗಳು ಬೇಕಿದ್ದಾಗ ಅವರು ನಿರ್ಗಮಿಸಿದರು. ರಹಾನೆ ಪತನದ ಬಳಿಕ ಕ್ರೀಸ್‌ಗೆ ಆಗಮಿಸಿದ ದಿನೇಶ್ ಕಾರ್ತಿಕ್, ನಾಲ್ಕು ವರ್ಷದಲ್ಲಿ ಮೊದಲ ಅರ್ಧಶತಕ ಗಳಿಸಿ, ನಾಯಕನಿಗೆ ಉತ್ತಮ ಸಾಥ್ ನೀಡಿದರು.

ಎಚ್ಚರಿಕೆಯಿಂದ ಆಟ ಆರಂಭಿಸಿದ ಕೊಹ್ಲಿ, ಏಕದಿನ ಕ್ರಿಕೆಟ್‌ನ 28ನೇ ಶತಕ ಪೂರೈಸಿದರು. ಎರಡನೇ ಇನಿಂಗ್ಸ್‌ನಲ್ಲಿ ಕೊಹ್ಲಿ ಗಳಿಸಿದ 18ನೇ ಶತಕ ಇದಾಗಿದ್ದು, 17 ಶತಕ ಗಳಿಸಿದ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದರು. ಕೊಹ್ಲಿ 115 ಎಸೆತಗಳಲ್ಲಿ 111 ರನ್ ಗಳಿಸಿದರೆ, 52 ಎಸೆತಗಳಲ್ಲಿ 50 ರನ್ ಗಳಿಸಿ ನಾಟೌಟ್ ಆಗಿ ಉಳಿದ ದಿನೇಶ್ ಕಾರ್ತಿಕ್ ಭಾರತವನ್ನು ಗೆಲುವಿನ ದಡ ಸೇರಿಸಿದರು.
ವೆಸ್ಟ್‌ಇಂಡೀಸ್: 9 ವಿಕೆಟ್‌ಗೆ 205 ಹಾಗೂ ಭಾರತ 2 ವಿಕೆಟ್‌ಗೆ 206.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News