ಜಿಯೋದಿಂದ 500 ರೂ.ಗೆ 4ಜಿ ಮೊಬೈಲ್!

Update: 2017-07-07 08:25 GMT

ಮುಂಬೈ, ಜು.7: ಭಾರತೀಯ ಟೆಲಿಕಾಂ ರಂಗವನ್ನೇ ಅಲ್ಲೋಕಲ್ಲೋಲಗೊಳಿಸಬಹುದಾದಂತಹ ಬೆಳವಣಿಗೆಯೊಂದು ಸದ್ಯದಲ್ಲಿಯೇ ನಡೆಯಲಿದೆ. ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ  ತನ್ನ ಎದುರಾಳಿಗಳಿಗೆ ದೊಡ್ಡ ಹೊಡೆತ ನೀಡಲು ಸಜ್ಜಾಗಿದ್ದು, 500 ರೂ. ಬೆಲೆಯ ಫೀಚರ್ ಫೋನೊಂದನ್ನು ಬಿಡುಗಡೆ ಮಾಡಲಿದೆಯೆಂದು ತಿಳಿದು ಬಂದಿದೆ. 2ಜಿ ಬಳಕೆದಾರರನ್ನು ಕಂಪೆನಿಯ 4ಜಿ ವೋಲ್ ಟಿಎಫ್ ಜಾಲಕ್ಕೆ ವರ್ಗಾವಣೆಗೊಳ್ಳಲು ಉತ್ತೇಜಿಸುವ ಉದ್ದೇಶ ಇದರ ಹಿಂದೆ ಇದೆಯೆಂದು ಹೇಳಲಾಗುತ್ತಿದೆ.

"ಇಕನಾಮಿಕ್ ಟೈಮ್ಸ್" ವರದಿಯೊಂದರ ಪ್ರಕಾರ ಮೂಲಗಳಿಂದ ತಿಳಿದು ಬಂದಂತೆ ರಿಲಯನ್ಸ್ ಜಿಯೋ ತನ್ನ 500 ರೂ. ಬೆಲೆಯ 4ಜಿ ವೋಲ್ ಟಿಎಫ್ ಫೋನ್ ಅನ್ನು ಜುಲೈ 21ರಂದು ತನ್ನ ಮಾತೃ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ನ ವಾರ್ಷಿಕ ಮಹಾಸಭೆಯಲ್ಲಿ   ಘೋಷಿಸಲಿದೆ.

ಕೆಲವೊಂದು ವರದಿಗಳ ಪ್ರಕಾರ ಈ ಹೊಸ ಫೋನ್  ಶಾಂಘೈ ಮೂಲದ ಸ್ಪ್ರೆಡ್ ಟ್ರಮ್ ಕಮ್ಯುನಿಕೇಶನ್ಸ್ ಇದರ ಪ್ರೊಸೆಸರ್ ಗಳ ಮುಖಾಂತರ ಕಾರ್ಯಾಚರಿಸಲಿದೆ. ಈ ಕಂಪೆನಿಯು ಬೇಸ್ ಬ್ಯಾಂಡ್ ಚಿಪ್  ಕ್ಷೇತ್ರದಲ್ಲಿ ಸುಸ್ಥಿರ ಪ್ರಗತಿ ದಾಖಲಿಸಿದ್ದು ಖ್ಯಾತ ಕಂಪೆನಿಗಳಾದ ಮೀಡಿಯಾಟೆಕ್ ಹಾಗೂ ಖ್ವಾಲ್‍ಕಾಂ ಗೆ ಪ್ರಬಲ ಸವಾಲನ್ನೊಡ್ದಿದೆ. ಈ ಕಂಪೆನಿ  ರಿಲಯನ್ಸ್ ಇಂಡಸ್ಟೀಸ್ ಜತೆ ಎರಡು ವರ್ಷದ ಪಾಲುದಾರಿಕೆ ಹೊಂದಿದ್ದು, ಅದರ ಎಲ್‍ವೈಎಫ್ ಫ್ಲೇಮ್ 5 ಸ್ಮಾರ್ಟ್ ಫೋನ್ ಗೆ ಇದೇ ಪ್ರೊಸೆಸರ್ ಇದೆ.

ಈ ಹೊಸ ಫೋನ್ ಗೆ ಆರ್ಡರ್ ಮಾಡಿದ ಗ್ರಾಹಕರಿಗೆ ಫೋನ್ ಅನ್ನು ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಪೂರೈಸಲಾಗುವುದು. ಈ ಫೋನ್ ಅನ್ನು ಕಂಪೆನಿ ಸ್ವಾತಂತ್ರ್ಯ ದಿನದಂದು  ಬಿಡುಗಡೆ ಮಾಡುವ ಸಾಧ್ಯತೆಯಿದೆಯೆನ್ನಲಾಗಿದೆ. ಎಪ್ರಿಲ್ 2017ರವರೆಗೆ  ರಿಲಯನ್ಸ್ ಜಿಯೋಗೆ 112.55 ಮಿಲಿಯನ್ ಚಂದಾದಾರರಿದ್ದು, ಹೊಸ ಫೋನ್ ಬಿಡುಗಡೆಯಾದ ನಂತರ ಈ  ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಕಂಪೆನಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News