ಸೋನಿಕಾ ಚೌಹಾಣ್ ಸಾವು ಪ್ರಕರಣ: ನಟ ವಿಕ್ರಮ ಚಟರ್ಜಿ ಬಂಧನ

Update: 2017-07-07 13:50 GMT

ಕೋಲ್ಕತಾ,ಜು.7: ಅಪಘಾತದಲ್ಲಿ ನಟಿ ಹಾಗೂ ರೂಪದರ್ಶಿ ಸೋನಿಕಾ ಸಿಂಗ್ ಚೌಹಾಣ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳಿ ನಟ ವಿಕ್ರಮ ಚಟರ್ಜಿ ಅವರನ್ನು ಪೊಲೀಸರು ಶುಕ್ರವಾರ ಬೆಳಗಿನ ಜಾವ ಡಿಢೀರ್ ದಾಳಿಯಲ್ಲಿ ಬಂಧಿಸಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಚಟರ್ಜಿ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಗುರಿಯಾಗಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸೋನಿಕಾ ಸಾವನ್ನಪ್ಪಿದ್ದರು. ಅತಿವೇಗ ಹಾಗೂ ಅಜಾಗ್ರತೆಯ ಚಾಲನೆಯ ಆರೋಪದಲ್ಲಿ ಚಟರ್ಜಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅಪಘಾತದ ಬಳಿಕ ಚಟರ್ಜಿ ‘ತಲೆ ಮರೆಸಿಕೊಂಡಿದ್ದರು’ ಮತ್ತು ಲಭ್ಯ ಮಾಹಿತಿಯ ಮೇರೆಗೆ ಶುಕ್ರವಾರ ಬೆಳಗಿನ ಜಾವ ಇಲ್ಲಿಯ ರಾಸಬಿಹಾರಿ ಅವೆನ್ಯೂ ಜಂಕ್ಷನ್‌ನಲ್ಲಿ ಅಕ್ರೊಪೊಲಿಸ್ ಮಾಲ್‌ನೆದುರು ಟ್ಯಾಕ್ಸಿಯಲ್ಲಿ ಕುಳಿತಿದ್ದ ಅವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ್ ವಿಶಾಲ ಗರ್ಗ್ ತಿಳಿಸಿದರು. ತನಿಖೆಯ ಭಾಗವಾಗಿ ಅವರನ್ನು ಬಂಧಿಸಲಾಗಿದೆ ಎಂದ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

ಹಠಾತ್ ಬಂಧನದ ಮೂಲಕ ನಿಜವಾದ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಚಟರ್ಜಿಯವರ ಗೆಳೆಯರು ಶಂಕಿಸಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಚಟರ್ಜಿ ಸಲ್ಲಿಸಿದ್ದ ಅರ್ಜಿ ಜು.12 ಅಥವಾ 13ರಂದು ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News