ನಾನು ಕಂಡ ಗೌರಮ್ಮ

Update: 2017-07-08 15:13 GMT

ಭಾಗ 3

ಗೌರಮ್ಮನವರ ಪತಿಭಕ್ತಿ ಅಪಾರವಾಗಿತ್ತು. ದುಡಿದು ಬಂದ ಗಂಡನ ಸ್ವಾಗತಕ್ಕಾಗಿ ಬಾಗಿಲಲ್ಲಿ ನಿಂತ ಗೌರಮ್ಮ, ಗಂಡ ಬರುತ್ತಲೇ ‘ಹಲೋ’ ಎಂದು ಕೈಹಿಡಿದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿ, ಬೂಟು-ಕಾಲು ಚೀಲ ಬಿಚ್ಚುತ್ತಿದ್ದರು. ಒಳಗಿನಿಂದ ತಾವೇ ಕಾಫಿ ತಂದುಕೊಡುತ್ತಿದ್ದರು. ಎಂತಹ ಆಯಾಸವಾಗಿದ್ದರೂ ಗೋಪಾಲಯ್ಯನವರಿಗೆ ಆಗ ಹಗುರೆನಿಸುತ್ತಿರಬಹುದು. ‘ಇವರಿಗೆ ತುಂಬ ಕೆಲಸ, ನಾನವರಿಗೇನೂ ಸಹಾಯ ಮಾಡಲಾರೆನಲ್ಲಾ!’ ಎನ್ನುತ್ತಿದ್ದರು.

ಗೌರಮ್ಮನವರಿಗೆ ಪ್ರಕೃತಿ ಸೌಂದರ್ಯ ನಿರೀಕ್ಷಣೆ ಯ ದೃಷ್ಟಿ ಚೆನ್ನಾಗಿತ್ತು. ನಾನಲ್ಲಿದ್ದಾಗ ದಿನಾಲು ತಿರುಗಾಡಲು ಹೋಗುತ್ತಿದ್ದೆವು -ಒಬ್ಬೊಬ್ಬರ ಇಷ್ಟದ ಸ್ಥಳಗಳಿಗೆ. ಮೊದಲದಿನ ಶ್ರೀ. ಗೋಪಾಲಕೃಷ್ಣರ ಸರತಿ. ಅವರು ಕಾಫಿಯ ಕಾಡು ತೋಟದಲ್ಲಿ, ಕಡಿದಾದ ದಾರಿಯಲ್ಲಿ ಕರೆದೊಯ್ದರು. ಗಿಡಗಳಿಗೆ ಸುತ್ತಿಕೊಂಡ ಬಳ್ಳಿಗಳ ಕುಡಿಗಳು ನಮಗೂ ಸುತ್ತಿಕೊಳ್ಳುತ್ತಿದ್ದವು. ನಾನು, ಗೌರಮ್ಮಶ್ರೀ.ಗೋವಿಂದಯ್ಯ (ಗೌರಮ್ಮನವರ ನೆಚ್ಚಿನ ಮೈದುನ) ಗೋಪಾಲಕೃಷ್ಣರ ಹಿಂದೆ-ಹಿಂದೆ ಮುಗ್ಗರಿಸುತ್ತ ಸಾಗಿದ್ದೆವು.

 ಫೊಟೋ ಕೃಪೆ: ಮನೋಹರ ಗ್ರಂಥಮಾಲೆ ಧಾರವಾಡ

ಗೌರಮ್ಮನವರ ಸೀರೆಯ ಸೆರಗನ್ನು ಒಂದು ಮುಳ್ಳು ಕಂಟಿ ಹಿಡಿ ಯಿತು. ಹುಸಿ ಮುನಿಸು ತೋರಿ

‘‘ಎಂತ ದಾರಿ ನಿಮ್ಮದು? ಇನ್ನು ನೀವು ಕರೆದೊಯ್ಯುವುದಾದರೂ ಎಲ್ಲಿಗೆ? ನಮ್ಮನ್ನೂ ನಿಮ್ಮ ಕೂಲಿಗಳೆಂದು ತಿಳಿದಿರಾ?’’- ಎನ್ನುತ್ತ ನಿಲ್ಲಲಾರದೆ ನಡೆದು ಬರು ತ್ತಿದ್ದರು.

ಅದೇ ಕಾಡಿನಲ್ಲಿ ದಿನಾಲು ತಿರುಗುತ್ತಿದ್ದ ಮ್ಯಾನೇಜರ್ ಗೋಪಾಲಕೃಷ್ಣರಿಗೇನು ತೊಂದರೆ? ಹಿಂದಿರುಗಿ, ತಮ್ಮ ‘ಕೈ ಹಿಡಿದಾಕೆ’ಯ ಅವಸ್ಥೆ ನೋಡಿ,ಕೈ ಕೊಟ್ಟು ಕರೆದುಕೊಂಡು ನಡೆದರು. ನಾವು ಒಂದು ಕಾಡು ಹೊಳೆಗೆ ಬಂದೆವು. ದಾರಿಗೆ ಅಡ್ಡವಾಗಿ ಚಾಚಿಬಂದ ಗಿಡದ ಬೇರು ಹಿಡಿದು ನೇತಾಡಿದರುಗೋವಿಂದಯ್ಯನವರು. ಅಂಥದೇ ಎರಡೂ ಬದಿಗೆ ಹಿಡಿದುಕೊಂಡ ಇನ್ನೊಂದು ಬೇರಿಗೆ ಜೀಕವಾಡಿ ದರು ಗೌರಮ್ಮನವರು. ನಡು ನೀರಿನವರೆಗೆ ಚಾಚಿಕೊಂಡ ಒಂದು ಗಿಡ ಬಳಸಿಹೋಗಿ, ನಾನು- ಗೋಪಾಲಕೃಷ್ಣಯ್ಯ ನಿಂತಿದ್ದೆವು. ಅಲ್ಲಿನೀರು ಬಲು ಆಳವಾಗಿದೆಯಂತೆ. ಗೋವಿಂದಯ್ಯ ಒಳ್ಳೆಯ ಈಜುಗಾರರು.

‘‘ಹಾರಲೇ ಅಣ್ಣಯ್ಯ?’’ ಎಂದರು.

‘ಹೂ’ ಗುಟ್ಟಿದರು ಗೌರಮ್ಮ ;

‘ಮೊಸಳೆಗಳಿವೆ’ ಎಂದರು ಗೋಪಾಲಯ್ಯ. ಸುಮ್ಮನೆ ನಿಂತಿದ್ದೆ ನಾನು-ಮುಗಿಲಿನ ವರೆಗೆ ಹಬ್ಬಿ ನಿಂತ ಬೆಟ್ಟವನ್ನೂ ಅದರಲ್ಲೆಲ್ಲ ನೆಟ್ಟು ನಿಂತ ಗಿಡಗಳನ್ನೂ ನೋಡುತ್ತ. ‘‘ನೋಡಿ, ಎಂತಹ ರಮಣೀಯ ದೃಶ್ಯ!’’ ಎಂದರು ಗೋಪಾಲಯ್ಯ.

‘‘ನಮಗೆ ನಿಮ್ಮ ಕಣ್ಣಿಲ್ಲ’’ ಎಂದರು ಗೌರಮ್ಮ.

‘‘ಮತ್ತೆ ನಿಮ್ಮ ಸ್ಥಳವಾವುದು?’’ ನಾನೆಂದೆ,

‘‘ನನ್ನದು ಬಹಳ ಸುಂದರವಾಗಿದೆ. ನಾವಿಬ್ಬರೇ ಹೋಗೋಣ. ಈ ಜನದ ದೃಷ್ಟಿ ತಾಕೀತು ನನ್ನ ಆ ಸ್ಥಳಕ್ಕೆ’’ ಎಂದರವರು.

ಅದರಂತೆಯೇ ಮರುದಿನ ನಾವಿಬ್ಬರೂ ಹೊರಟೆವು. ಅದೂಕಾಡಾದರೂ ದಾರಿಯಿತ್ತು. ಸ್ವಲ್ಪ ದಿಬ್ಬ ಹತ್ತಿದ ಮೇಲೆ, ಕೆಳಗೆ ದೂರದವರೆಗೆ ಬಯಲು ಹಬ್ಬಿದೆ. ಅಲ್ಲೊಂದು ಹೊಳೆ, ಥಳ-ಥಳ ಹೊಳೆ ಯುತ್ತ ಸಾಗಿದೆ. ನಾನು ಹೋದ ಸಮಯದಲ್ಲಿ ಬಂಜೆಭೂಮಿ; ಬೆಳೆಗಾಲದಲ್ಲಾದರೆ ಬಯಲೆಲ್ಲ ‘ಹಸಿರು ಹಾಸಿ’ನಂತಿರುತ್ತದಂತೆ. ಅಲ್ಲಿಯೇ ಒಂದು ಕೃತ್ರಿಮ ಆಸನ ಸಿದ್ಧಪಡಿಸಿದ್ದಾರೆ ಗೌರಮ್ಮ ನವರು...ತಾವೊಬ್ಬರೇ ಬಂದು ಹಾಗೆಯೇ ನೋಡುತ್ತ ಕೂಡುವುದಕ್ಕೆಂದು. ಮಳೆಗಾಲದಲ್ಲಿ ಮಳೆಯ ಪರಿವೆಯಿಲ್ಲದೆ ಅಲ್ಲಿ ನೋಡುತ್ತಕುಳಿತಿರುತ್ತಿದ್ದರಂತೆ ಗೌರಮ್ಮ. ಅಲ್ಲಿಂದ ಇಳಿಯುತ್ತ ಇಳಿಯುತ್ತ ನದಿಯ ದಾರಿಗೆ ಬಂದೆವು. ಒಂದು ಲಾರಿ-ಇವರದೇ-ಕಾಫಿ ಬೀಜ ತರುವಂತಹದು-ಬರುತ್ತಿತ್ತು. ‘ಅವರಿದ್ದಾರೆಯೇ ನೋಡಿ’ ಎಂದರು.

‘ಮುಂದೆಯೇ ಇದ್ದಾರಲ್ಲ! ಕಾಣುವುದಿಲ್ಲವೇ ನಿಮಗೆ?’ ಎಂದೆ.

ಅವರು ಬಿದ್ದು ಬಿದ್ದು ನಗಹತ್ತಿದರು. ನಾನು ಪೆಚ್ಚುಬಿದ್ದು ಕೇಳಿದೆ:‘ಏನದು?’ ಎಂದು. ಅವರು ಹೇಳಿದರು:

‘‘ನೋಡಿ, ನಾನು ಮೊನ್ನೆ ಮಡಿಕೇರಿಗೆ ಹೋದಾಗ ದಾರಿಯ ಒಂದು ಬದಿಯಿಂದ ಹೋಗುತ್ತಿದ್ದೆ. ನನ್ನ ಹಿರಿಯಣ್ಣ ಅದೇ ದಾರಿ ಯಿಂದ ಎದುರಾಗಿ ಬರುತ್ತಿದ್ದ. ನನಗೆ ಕಾಣಲಿಲ್ಲ. ‘ಏನು ಗೌರಮ್ಮ, ಯಾವಾಗ ಬಂದೆ? ಹಾಗೇ ಹೊರಟಿದ್ದೀಯಲ್ಲ!’ ಎಂದು ಆರಂಭಿಸಿದ. ನನಗೆ ಬಹಳ ನಾಚಿಕೆಯಾಯಿತು. ಈಗ ಬೇಗನೆ ಕಣ್ಣಿನ ಚಿಕಿತ್ಸೆಮಾಡಿಸುವುದೆಂದು ನಿರ್ಧರಿಸಿದ್ದೇನೆ. ತಾರೀಕು ಗೊತ್ತಾಗಿದೆ. ನನ್ನಣ್ಣನೊಡನೆ ಬೆಂಗಳೂರಿಗೆ ಹೋಗಲಿರುವೆ. ‘ನಾಲ್ಕು ಕಣ್ಣು’ಆಗದಂತೆ ಕಳೆಗೊಳಿಸಲು ಕೇಳಿಕೊಂಡಿದ್ದೇನೆ ಡಾಕ್ಟರರನ್ನು- ನೋಡಬೇಕು’’ ಎಂದರು.

‘‘ಹಾಗಾದರೆ ನೀವೇ ಹಾಕಿಸಿದ ಆ ಆಸನದ ಮೇಲೆ ಕುಳಿತು ನೀವು ನೋಡುತ್ತಿರುವುದೇನು?’’ ಎಂದು ಕೇಳಿದೆ.

‘‘ದೃಷ್ಟಿ ದೂರ ಹರಿಯಲೆಂದೇ ಅದನ್ನು ಹಾಕಿಸಿರುವೆ. ನನ್ನ ಕಣ್ಣಿನಅವಸ್ಥೆ ಇನ್ನೂ ಬಹಳ ಜನಕ್ಕೆ ಗೊತ್ತಾಗಿಲ್ಲ. ಚಿಕ್ಕ ಚಿಕ್ಕ ಅಕ್ಷರ ಓದಿ ನನ್ನಪಾಡು ಹೀಗಾಗಿದೆ!’’ ಎಂದರು. ಅಲ್ಲಿಂದ ಹೊಳೆಯತೀರಕ್ಕೆ ಬಂದೆವು. ಒಂದು ಸೀಳು ದಾರಿಯಿಂದ ಮುಂದೆ ಸಾಗಿದೆವು. ನಾವು ಹಿಂದಿನ ದಿನ ತಿರುಗಾ ಡಲು ಹೋದ ಹೊಳೆಗೆ ಮತ್ತೊಂದು ಬದಿಯ ಬೆಟ್ಟದಿಂದ ಇನ್ನೊಂದು ಹೊಳೆ ಹರಿದು ಬಂದು ಕೂಡಿದೆ. ಆ ದೃಶ್ಯ ಬಹಳ ರಮಣೀಯವಾಗಿದೆ. ನಾವು ಸುತ್ತಲೂ ನೀರಿದ್ದ ಒಂದು ಕಲ್ಲುದಿಬ್ಬಕ್ಕೆ ಬಂದೆವು. ಅಲ್ಲಿ ಕುಳಿತು ಹಿಂದೆ ತಿರುಗಿ ನೋಡಿದರೆ- ಆ ಕೂಡು ಹೊಳೆಯು ಹರಿದು ಬರುವುದು; ಅದರ ಹಿಂದೆ ಎರಡೂ ಬದಿಯಿಂದ ಬೆಟ್ಟ ಹಬ್ಬಿ ಒಂದೆಡೆಗೆ ಕೂಡಿರುವುದು. ಬೆಟ್ಟದ ಮೇಲಿನ ಮರಗಳು ಮುಗಿಲನ್ನು ಚುಚ್ಚುವ ಸೊಕ್ಕಿನಲ್ಲಿ ಬೆಳೆದಿವೆ. ನಾವು ಕೂತಲ್ಲಿಂದ ಮುಂದೆ ಸ್ವಲ್ಪ ಮರಳು. ಅಲ್ಲಿಂದ ದಾಟಿ ನೀರಿನಲ್ಲಿ ಬುಟ್ಟಿಯಂತೆ ಬೆಳೆದು ನಿಂತ ಒಂದು ಹುಲ್ಲುಗಡ್ಡೆ-ಕತ್ತರಿಸಿ ಬೆಳೆಸಿದಂತೆ-ಬೆಳೆದು ನಿಂತಿದೆ. ಬಹಳ ದಿವಸಗಳಿಂದಲೂ ಅದು ಹಾಗೆಯೇ ಇದೆಯಂತೆ ಆ ಸ್ಥಳ ನಿಜವಾಗಿಯೂ ಸುಂದರವಾಗಿದೆ. ‘ನೋಡಿ, ಕುಲಕರ್ಣಿಯವರೇ, ನನ್ನ ಸ್ಥಳ! ಬೇಂದ್ರೆಯವರನ್ನು ಇಲ್ಲಿಗೆ ಕರೆದು ತಂದು ಕೂರಿಸಿದರೆ ಎಂತಹ ಕವಿತೆ ಹುಟ್ಟಬಹುದು?’ ಎಂದು ಕೇಳಿದರು. ಬೇಂದ್ರೆಯವರೆಂದರೆ ಅಷ್ಟು ಇಷ್ಟ ಅವರಿಗೆ. ಒಬ್ಬ ಲೇಖಕರಿಗೆ ಇವರು ಬೇಂದ್ರೆಯವರ ವಿಷಯವನ್ನು ಹೇಳುತ್ತಿದ್ದಾಗ ಅವರು

‘ಬೇಂದ್ರೆ ಎಂದರೆ ಯಾರು?’ ಎಂದರಂತೆ; ಅದಕ್ಕಿವರು ಹೀಗೆ ಹೇಳಿದರಂತೆ:

‘‘ನಮಗವರ ಮಾತನ್ನು ಕೇಳಿ ಆಶ್ಚರ್ಯವಾ ಯಿತೆಂದರೆ- ಆಶ್ಚರ್ಯವೇನು ಹೇಳಿ! ‘ಬೇಂದ್ರೆ ಎಂದರೆ ಯಾರು?’ಕನ್ನಡದಲ್ಲಿ ನೂರಾರು ಕವಿತೆಗಳನ್ನು ಬರೆದು ಹೆಸರು ಹೊಂದಿದ ಇವರಿಗೆ ಬೇಂದ್ರೆ ಎಂದರೆ ಯಾರು ಎಂದು ಗೊತ್ತಿಲ್ಲವಂತೆ!ಉಕ್ಕುತ್ತಿದ್ದ ನಗುವನ್ನು ತಡೆದುಕೊಂಡು ಹೇಳಿದೆ: ಅಂಬಿಕಾತನಯ ದತ್ತರು ಗೊತ್ತಿಲ್ಲವೇ ನಿಮಗೆ? ಕನ್ನಡನಾಡಿನ ಶೇಕ್ಸ್‌ಪಿಯರ್ ಅವರು. ಕೇವಲ ಕನ್ನಡ ನಾಡಿನಲ್ಲಿ ಏಕೆ? ರವೀಂದ್ರರಿಗೆ ದೇಶಬಂಧುಗಳು ದೊರೆತಂತೆ ಅಂಬಿಕಾತನಯರ ಕವಿತೆಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಬಲ್ಲವರು ಯಾರಾದರೂ ಇದ್ದಿದ್ದರೆ, ಇಂದು ಬೇಂದ್ರೆಯವರ ಹೆಸರು ವಿಶ್ವಸಾಹಿತ್ಯದಲ್ಲಿ ಮೆರೆಯುತ್ತಿತ್ತು. ಅವರ ಕವಿತೆಗಳನ್ನು ಓದಿಲ್ಲವೇ ನೀವು ?- ಇನ್ನೂ ಬಹಳ ಮಾತುಗಳು ಉಕ್ಕಿಬಂದವು’’. ಎಂದು ಬರೆದಿದ್ದಾರೆ.

ಗೌರಮ್ಮನವರಿಗೆ ಪ್ರಾಣಿದಯೆ ತುಂಬ ಇತ್ತು. ಮನೆಯಲ್ಲಿ ನಾಯಿ, ಬೆಕ್ಕು, ಹಸು, ದನ ಎಲ್ಲ ಇದ್ದವು. ನಾಯಿಗೆ ಇವರು ‘ಫ್ರೆಡ್ಡಿ’,‘ಗ್ರೇಟಾ’ ಎಂದು ಕರೆಯುತ್ತಿದ್ದರು. ‘ನಾಯಿಗೆ ಇಂಗ್ಲಿಷ್ ಹೆಸರೇಕೆ?’ಎಂದು ನಾನು ಕೇಳಿದ್ದಕ್ಕೆ ‘ಇಂಗ್ಲಿಷ್ ಹೆಸರು ನಾಯಿಗೂ ಒಪ್ಪುವುದಿ ಲ್ಲವೋ’ ಎಂದು ಅವರು ಕೇಳಿದರು.

ಗೌರಮ್ಮನವರ ಪತಿಭಕ್ತಿ ಅಪಾರವಾಗಿತ್ತು. ದುಡಿದು ಬಂದ ಗಂಡನ ಸ್ವಾಗತಕ್ಕಾಗಿ ಬಾಗಿಲಲ್ಲಿ ನಿಂತ ಗೌರಮ್ಮ, ಗಂಡ ಬರುತ್ತಲೇ ‘ಹಲೋ’ ಎಂದು ಕೈಹಿಡಿದುಕೊಂಡು ಬಂದು ಕುರ್ಚಿಯಲ್ಲಿ ಕೂರಿ ಸಿ, ಬೂಟು-ಕಾಲು ಚೀಲ ಬಿಚ್ಚುತ್ತಿದ್ದರು. ಒಳಗಿನಿಂದ ತಾವೇ ಕಾಫಿತಂದುಕೊಡುತ್ತಿದ್ದರು. ಎಂತಹ ಆಯಾಸವಾಗಿದ್ದರೂ ಗೋಪಾಲ ಯ್ಯನವರಿಗೆ ಆಗ ಹಗುರೆನಿಸುತ್ತಿರಬಹುದು. ‘ಇವರಿಗೆ ತುಂಬ ಕೆಲಸ, ನಾನವರಿಗೇನೂ ಸಹಾಯ ಮಾಡಲಾರೆನಲ್ಲಾ!’ ಎನ್ನುತ್ತಿದ್ದರು. ಒಂದು ದಿನ ಊಟವಾದ ಮೇಲೆ ನಾವು ಮೂವರೂ ಮಾತನಾಡುತ್ತ ಕುಳಿತಿದ್ದೆವು; ಆಯಾಸವಾಗಿತ್ತೆಂದು ಕಾಣುತ್ತದೆ- ಗೋಪಾಲಯ್ಯನವರು ಕುರ್ಚಿಯಲ್ಲಿಯೇ ನಿದ್ದೆ ಹೋದರು. ಅದನ್ನು ಕಂಡ ಗೌರಮ್ಮನವರು ನನ್ನನ್ನು ಸನ್ನೆಯಿಂದ ಸುಮ್ಮನಿರಿಸಿ, ಎರಡು ಮೆತ್ತೆತಂದು, ತಲೆಯ ಬುಡದಲ್ಲೊಂದನ್ನು ಮೆಲ್ಲಗಿರಿಸಿದರು. ಇನ್ನೊಂದನ್ನು ಕಾಲಬುಡದಲ್ಲಿ ಸರಿಸಿ, ನನ್ನನ್ನು ಒಳಗೆ ಕರೆದು ನಮ್ಮ ಮಾತು ಅವರಿಗೆ ಕೇಳಿಸಿ ಎಚ್ಚರವಾಗದಂತೆ ಕನ್ನಡಿಯ ಬಾಗಿಲನ್ನು ಎಳೆದರು.ಅದರಂತೆಯೆ ಶ್ರೀ. ಗೋಪಾಲಯ್ಯನವರು ಬರೆದ ಒಂದು ಕಾಗದದಲ್ಲಿ ಹೀಗಿದೆ: ‘‘ನೀವು ನನ್ನ ಗೌರಮ್ಮನಿಗೆ ಬರೆದ ಕಾಗದ ನೋಡಿದೆ.ಅದರಲ್ಲಿ ಮಾಸ್ತಿಯವರು ಮತ್ತೆ ಬೇಂದ್ರೆಯವರೂ ಸಹ, ರಾಮ-ಲಕ್ಷ್ಮಣರಂತೆ ನಮ್ಮ ದಂಡ ಕಾರಣ್ಯಕ್ಕೆ ಬರುವವರಾಗಿ ತಿಳಿದೆ. ನನ್ನ ಗೌರಮ್ಮ-ಶಬರಿಗಂತೂ ಹಿಗ್ಗೇ ಹಿಗ್ಗು. ನೀವು ಪ್ರಕಟಿಸುವಚಿಗುರಿಗಿಂತಲೂ ಚಿಗುರಿಬಿಟ್ಟಿದ್ದಾಳೆ’’.

ಗೌರಮ್ಮನವರಲ್ಲಿ ದೇಶಭಕ್ತಿಯೂ ಉಜ್ವಲವಾಗಿತ್ತು. ಹತ್ತು- ಹನ್ನೆರಡು ವರುಷಗಳಿಂದ ಸಂಪೂರ್ಣವಾಗಿ ಖಾದಿ ಧರಿಸುತ್ತಿದ್ದರು.ಖಾದಿಯನ್ನು ಉಡು-ತೊಡುವವರನ್ನು ಕಂಡರೆ ಅವರಿಗೆ ತುಂಬ ಸಂತೋಷ. ಮಹಾತ್ಮಾಗಾಂಧಿಯವರೊಮ್ಮೆ ಕೊಡಗಿಗೆ ಬಂದಾಗ, ಶ್ರೀ. ಮಂಜುನಾಥಯ್ಯನವರಲ್ಲಿ ಬಂದರಂತೆ. ಆಗ ಗೌರಮ್ಮನವರು ತಮ್ಮ ಮನೆಗೂ ಮಹಾತ್ಮರನ್ನು ಕರೆದರಂತೆ. ಸಮಯವಿಲ್ಲದ್ದರಿಂದ ಅವರು ಹೋಗಲು ಅಷ್ಟು ಆತುರಪಡಲಿಲ್ಲವಂತೆ. ಗೌರಮ್ಮನವರು ‘ಫಾಸ್ಟ್’ ಆರಂಭಿಸುವೆನೆಂದು ಹೇಳಿ ಕಳಿಸಿದರು; ಹೆದರಿ ಬಂದ ಮುದುಕ. ಗೌರಮ್ಮ ತಮ್ಮ ಮೈಮೇಲಿನ ಎಲ್ಲ ಆಭರಣ ಬಿಚ್ಚಿ ಕೊಟ್ಟುಬಿಟ್ಟರಂತೆ.

ಮಹಾತ್ಮರು ಗೋಪಾಲಯ್ಯನವರನ್ನು ಕರೆದು ‘‘ನಿಮ್ಮ ಆಕ್ಷೇಪಣೆಇಲ್ಲವಷ್ಟೇ?’’ ಎಂದರಂತೆ.

‘‘ಅವಳಿನ್ನು ಆಭರಣ ಬೇಡದಿದ್ದರಾಯಿತು!’’ ಎಂದು ನಕ್ಕು ನುಡಿದರಂತೆ ಗೋಪಾಲಯ್ಯ.

ಆಗ ‘‘ಹರಿಜನ’’ದಲ್ಲಿ ಮಹಾತ್ಮರು ಈ ವಿಷಯ ದಲ್ಲಿ ಒಂದು ಲೇಖನ ಬರೆದರಂತೆ. ನನಗಿದನ್ನು ಮಡಿಕೇರಿಯಲ್ಲಿ ಒಬ್ಬ ಸ್ನೇಹಿತರು ಹೇಳಿದರು. ನಾನು ಬಂದು ‘ಈ ವಿಷಯ ನೀವು ನನಗೆ ತಿಳಿಸಲಿಲ್ಲವಲ್ಲ!’ ಎಂದೆ. ಇಲ್ಲಿಯ ಬಹಳ ಜನರಿಗೆ ಈ ವಿಷಯ ಸೇರುವುದಿಲ್ಲವೆಂದು ನಾನೀ ವಿಷಯವನ್ನು ಎತ್ತುವುದಿಲ್ಲ ಎಂದು ಹೇಳಿದರು. ‘ಕೊಡಗು ಬ್ರಿಟಿಷ್ ಕನ್ನಡನಾಡಿನೊಡನೆ ಒಂದಾಗದೆ ಗತಿಯಿಲ್ಲ’ ಎಂದು ಅವರು ಅಲ್ಲಿಯ ಏಕೀಕರಣ ಪಕ್ಷದ ಮುಖಂಡರಾಗಿ ಕೆಲಸ ಮಾಡುತ್ತಿದ್ದರು.

ಇವರ ತಂದೆಗೆ ಇವರ ಬರಹಗಳ ಮೇಲೆ ತುಂಬ ಪ್ರೀತಿ ಇತ್ತು. ಮೊನ್ನೆ ಮೊನ್ನೆ ಅವರು ತೀರಿದಾಗ ಗೌರಮ್ಮನವರು ವ್ಯಸನಪಟ್ಟು ಹೀಗೆ ಬರೆದರು:

‘‘ನಿಮ್ಮ ಕಾಗದ, ಅದರೊಡನೆಯೇ ಇನ್ನೊಂದು ಟೆಲಿಗ್ರಾಮ್. ನಿಮ್ಮ ಕಾಗದ ಒಡೆಯುವ ಮೊದಲೇ ಅದನ್ನೊಡೆದು ಓದಿದೆ. ನನ್ನ ತಂದೆ-ತಾಯಿಯಿಲ್ಲದ ನನ್ನನ್ನು, ತಾಯಿ ತಂದೆಗಳ ಭಾರವನ್ನು ಹೊತ್ತು ಎರಡು ತಿಂಗಳಾಗಿತ್ತು. ಏನೋ ಒಂದು ದಿನ ಸ್ವಲ್ಪ ಜ್ವರವಿತ್ತಂತೆ. ಅಷ್ಟರ ಸಲುವಾಗಿ ಕಾಗದವೇಕೆ- ಎಂದು ನನಗೆ ಬರೆದಿರ ಲಿಲ್ಲ. ಮರು ದಿನ ಸ್ನಾನ ಮಾಡಿ ಆಯಾಸವೆಂದು ಮಲಗಿದರಂತೆ. ಹತ್ತೇ ನಿಮಿಷಗಳೊಳಗಾಗಿ ಈಚೆಗಿನ ಕಾಲವೆಲ್ಲ ನನ್ನ ಜೀವನದ ಅತ್ಯಂತ ದುಃಖದ ದಿನಗಳಾಗಿವೆ. ನೀವು ಪ್ರಸಿದ್ಧಿಸುವ ನನ್ನ ಪುಸ್ತಕ ನೋಡಲಿಲ್ಲ ಅವರು’’. ಅವರ ಸಂಗ್ರಹಕ್ಕೆ ಮೊದಲು ‘ಚಿಗುರು’ ಎಂದು ಹೆಸರಿಟ್ಟಿತ್ತು. ಮೊನ್ನೆ ಗೌರಮ್ಮನವರು ಅದನ್ನು ‘ಕಂಬನಿ’ ಎಂದು ಮಾರ್ಪಡಿಸಿ ತಾವೂ ಪುಸ್ತಕ ನೋಡದೆ, ಕನ್ನಡಿಗರೆಲ್ಲ ಕಂಬನಿಗರೆಯುವಂತೆ ಮಾಡಿ ನಮ್ಮನ್ನಗಲಿ ಹೋದರು.

ಇವರ ಕತೆಗಳಿಂದ ಚಿಗುರಿದ ಹೆಣ್ಣು ಮಕ್ಕಳ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಮಂಗಲಪ್ರದವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಇವರ ಮರಣದಿಂದ ಕನ್ನಡ ನಾಡೇ ಮರುಗುವಂತಾಯಿತು. ಗೌರಮ್ಮನವರ ಆರು ವರ್ಷದ ಎಳೆಯ ಮಗು ವಸಂತ (ಬೇಬಿ) ಚಿಗುರುವ ತನ್ನ ಆಯುಷ್ಯದಲ್ಲಿ, ಇಂತಹ ಎಳೆಯತನದಲ್ಲಿ-ತನ್ನ ತಾಯಿಯಂತೆ-ಪರದೇಶಿತನವನ್ನು ಭೋಗಿಸಬೇಕಾಗಿ ಬಂತು. ಇವರ ಪತಿಗೆ ಒಮ್ಮೆಲೆ ಘಟಿಸಿದ ಸಹಿಸಲಾರದ ಈ ಒಂಟಿತನದ ದುಃಖದಲ್ಲಿ...!

ಇಷ್ಟೆಲ್ಲ ಆಟವಾಡಿದ ಗೌರಮ್ಮನವರು ಇನ್ನಿಲ್ಲ. ‘ಓ’ ಕೊಡದ ನಾಡಿಗೆ ನಡೆದುಬಿಟ್ಟರವರು. ಈ ಎಲ್ಲ ಸವಿ ನೆನಪುಗಳ ಹಿಂದೆ ಒಂದು ಕರಾಳ ಸತ್ಯವು ತಾಂಡವವಾಡಿ ಅವರ ಬಳಗವನ್ನೂ-ಕನ್ನಡ ನಾಡನ್ನೂ ಅಪಾರ ಶೋಕಕ್ಕೀಡುಮಾಡಿದೆ. ನುಗ್ಗಿ ಬರುವ ಇಂತಹ ನೆನಪುಗಳೊಡನೆ ಇನ್ನು ಅವರಿಲ್ಲವಲ್ಲ ಎಂಬ ನೆನಪು ದುಃಖವನ್ನು ನೂರ್ಮಡಿಸುತ್ತದೆ. ಅವರಿಲ್ಲವೆಂಬ ದುಃಖ, ಈ ನೆನಪುಗಳಲ್ಲಿ ಒಂದು ನಿಮಿಷವಾದರೂ ಮರೆತರೆ ಅದೇ ರಸ ನಿಮಿಷ!

ಇಂಥ ಪವಿತ್ರ ಆತ್ಮಗಳೂ ಇಲ್ಲದಾಗುತ್ತಿರಬಹುದೇ?

ರೂಪದರ್ಶಿಗಳು

ಆಯ್ಕೆ:ಪುಸ್ತಕಮನೆ ಹರಿಹರಪ್ರಿಯ

Writer - ದ.ಬ. ಕುಲಕರ್ಣಿ

contributor

Editor - ದ.ಬ. ಕುಲಕರ್ಣಿ

contributor

Similar News