ಮಕ್ಕಳಿಗೆ ಯೋಗ್ಯ ಸಮಯ ನೀಡುವುದೆಂದರೆ...

Update: 2017-07-08 18:15 GMT

ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದೆ. ಅದರ ಡೈರಿಯಲ್ಲಿ ಶಿಕ್ಷಕರು ತಂದೆ ಅಥವಾ ತಾಯಿ ದಯವಿಟ್ಟು ಶಾಲೆಗೆ ಬಂದು ಮುಖ್ಯೋಪಾಧ್ಯಾಯಿನಿ ಅಥವಾ ತರಗತಿಯ ಶಿಕ್ಷಕಿಯನ್ನು ಕಾಣಬೇಕೆಂದು ಬರೆದು ಕಳುಹಿಸಿದ್ದಾರೆ. ತಂದೆಗೆ ಶಾಲೆಗೆ ಹೋಗಲು ಸಾಧ್ಯವಿಲ್ಲದ ಕಾರಣ ತಾಯಿಯೊಬ್ಬಳೇ ಮುಖ್ಯೋಪಾಧ್ಯಾಯಿನಿಯನ್ನು ಕಾಣಲು ಹೋದಳು. ತುಂಬಾ ದೊಡ್ಡ ಶಾಲೆ. ಬಹಳ ಚುರುಕಿನ ಚಟುವಟಿಕೆಗಳಿಂದ ತುಂಬಿರುವ ಪರಿಸರ. ಮುಖ್ಯೋಪಾಧ್ಯಾಯಿನಿ ತರಗತಿಯ ಶಿಕ್ಷಕಿಯನ್ನು ಕರೆಯಿಸಿದರು. ಅವರು ತಾಯಿಗೆ ಕೇಳಿದರು. ‘‘ನೀವು ಪ್ರತಿದಿನವೂ ಡೈರಿ ನೋಡುತ್ತೀ ರೇನು?’’

‘‘ನೋಡುತ್ತೇನೆ ಮತ್ತು ಸಹಿ ಹಾಕಿಯೇ ಕಳುಹಿಸುತ್ತೇನೆ.’’

‘‘ಮಗುವಿನ ಹೋಂವರ್ಕ್‌ಗಳನ್ನು ಮಾಡಿಸುವರು ಯಾರು?’’

‘‘ಅವನೇ ತನ್ನ ಪಾಡಿಗೆ ತಾನು ಬರೆಯುತ್ತಾನೆ. ಏನಾದರೂ ಗೊತ್ತಾಗದೇ ಇದ್ದರೆ ಕೇಳುತ್ತಾನೆ. ಆಗ ಹೇಳಿಕೊಡುತ್ತೇನೆ.’’

‘‘ಇಷ್ಟಾದರೆ ಸಾಲದು ನೀವು ಅವನಿಗೆ ಕ್ವಾಲಿಟಿ ಟೈಮ್ ಕೊಡಬೇಕು’’ ಅಂತ ತಾಕೀತು ಮಾಡಿ ಶಿಕ್ಷಕಿ ಹೊರಟು ಹೋದರು.

ಈ ತಾಯಿ ಕ್ವಾಲಿಟಿ ಟೈಮ್ ಅಂದರೆ ಏನು? ಅದನ್ನು ಹೇಗೆ ಕೊಡುವುದು ಎಂದು ತಿಳಿಯಲಿಲ್ಲ. ಮಗುವಿನ ತಂದೆಗೆ ಕ್ವಾಲಿಟಿ ಟೈಮ್ ಬಗ್ಗೆ ಹೇಳಿದರು. ತಂದೆ ಶಾಲೆಗೆ ಫೋನ್ ಮಾಡಿ ನಮ್ಮ ಮಗುವಿಗೆ ಕ್ವಾಲಿಟಿ ಟೈಮ್ ಕೊಡಬೇ ಕೆಂದು ಹೇಳಿದರಂತೆ, ನಾವು ಮಗುವಿನ ವಿಷಯದಲ್ಲಿ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ ಎಂದು ನೇರವಾಗಿ ತಮ್ಮ ಪ್ರಶ್ನೆಯನ್ನು ಎತ್ತಿದರು.

‘‘ನೀವು ಮಗುವಿನ ಡೈರಿ ಚೆಕ್ ಮಾಡಿದರೆ ಸಾಲದು, ಮಗುವು ಏನು ಬರೆಯುತ್ತಿದೆ. ಏನು ಮಾಡುತ್ತಿದೆ. ಯಾವ ವಸ್ತುಗಳನ್ನು ಶಾಲೆಗೆ ಎತ್ತಿಕೊಂಡು ಹೋಗಿದೆ. ಶಾಲೆಯಿಂದ ಯಾವ ವಸ್ತುಗಳನ್ನು ತಂದಿದೆ ಎಲ್ಲವನ್ನೂ ಗಮನಿಸಬೇಕು. ಗಮನಕ್ಕೆ ಬಂದ ವ್ಯತ್ಯಾಸಗಳನ್ನು ಸರಿಪಡಿಸಬೇಕು. ಒಟ್ಟಾರೆ, ನೀವು ಮಗುವಿಗೆ ಸರಿಯಾದ ಸಮಯ ಮೀಸಲಿಡಬೇಕು’’. ಹೀಗೆ ಹೇಳಿದ ಶಾಲೆಯವರು ಸುಮ್ಮನಾದರು.

ಏನದು ಕ್ವಾಲಿಟಿ ಟೈಮ್?

ಮಗುವಿನ ಇರುವಿಕೆಯನ್ನು ತೀರಾ ಸಹಜವಾಗಿ ಪರಿಗಣಿಸುವಾಗ ಅಥವಾ ಎಲ್ಲರ ಜೊತೆ ಅದೂ ಇದೆ. ಹಸಿವಾದಾಗ ತಿನ್ನುತ್ತೆ ಅಥವಾ ತಿನ್ನಿಸಬೇಕು. ನಿದ್ರೆ ಬಂದಾಗ ಮಲಗಿಸಬೇಕು ಎಂಬುದಷ್ಟೇ ನೋಡುವವರಿಗೆ ಮಗುವಿಗೆ ಕ್ವಾಲಿಟಿ ಟೈಮ್ ಕೊಡಬೇಕೆಂದರೆ ಬೇಗನೆ ಅರ್ಥವಾಗುವುದಿಲ್ಲ.

ಒಂದರ್ಥದಲ್ಲಿ ಹೇಳುವುದಾದರೆ, ಮಗುವು ಎದ್ದಾಗಿನಿಂದ ಮಲಗುವವ ರೆಗೂ ನಮ್ಮ ಸಂಪರ್ಕಕ್ಕೆ ಬಂದಾಗೆಲ್ಲಾ ನಾವು ಪರಿಪೂರ್ಣ ಗಮನ ಮತ್ತು ಯೋಗ್ಯ ಸಮಯ ಕೊಡಬೇಕು. ಯಾವ ಮಗುವಿಗೆ ನಾವು ಸಂಪೂರ್ಣ ಗಮನ ಮತ್ತು ಆ ಗಮನದೊಂದಿಗೆ ಬಹಳ ಎಚ್ಚರಿಕೆಯಿಂದ ಹಾಗೂ ಬದ್ಧತೆ ಯಿಂದ ಅದರ ಕುರಿತಾದ ಮತ್ತು ಅದರ ಜೊತೆಗೆ ಸೂಕ್ತ ಪ್ರತಿಫಲದೊಂದಿಗೆ ಕೆಲಸ ಮಾಡುತ್ತೇವೆಯೋ ಅದನ್ನೇ ಕ್ವಾಲಿಟಿ ಟೈಮ್ ಕೊಡುವುದು ಅಥವಾ ಯೋಗ್ಯ ಸಮಯವನ್ನು ಕೊಡುವುದು ಎಂದರ್ಥ.

ಮಗುವಿನೊಂದಿಗಿನ ನಮ್ಮ ಕೆಲಸ ಸೂಕ್ತ ಪ್ರತಿಫಲನವನ್ನು ಅಲ್ಲಿಯೇ ನೀಡಬೇಕು. ಆ ನಿರೀಕ್ಷಿತ ಪ್ರತಿಫಲವನ್ನು ನೀವು ಕಂಡಿರಾದರೆ ಮಗುವಿಗೆ ಕ್ವಾಲಿಟಿ ಟೈಮ್ ಕೊಟ್ಟಿದ್ದೀರೆಂದೇ ಅರ್ಥ.

ಉದಾಹರಣೆಗೆ ಮಗುವು ಶಾಲೆಯಿಂದ ತಂದಿರುವ ಡೈರಿಯಲ್ಲಿ ಯಾವುದು ಹೋಂ ವರ್ಕ್ ಬರೆಯಬೇಕೆಂದು ಅಥವಾ ಶಾಲೆಗೆ ಏನನ್ನು ತೆಗೆದು ಕೊಂಡು ಹೋಗಬೇಕೆಂದು ನಮೂದಿಸಲಾಗಿರುತ್ತದೆ. ಆ ಹೋಂ ವರ್ಕನ್ನು ಮಾಡಿಸುವಾಗ ಜೊತೆಯಲ್ಲಿ ಕುಳಿತು, ಅದರ ಹಸ್ತಾಕ್ಷರ, ಬರೆಯುವುದು ಅದಕ್ಕೆ ತಿಳಿಯುತ್ತದೆಯೋ ಇಲ್ಲವೋ ಅಥವಾ ಬರೆಯುವ ಯಾಂತ್ರಿಕ ಕ್ರಿಯೆಯಲ್ಲಿ ತೊಡಗಿದೆಯೋ, ಬರೆಯುತ್ತಿರುವುದನ್ನು ಅದು ಕಲಿಯಿತೋ ಎಂದೆಲ್ಲಾ ಗಮನಿಸಿ ಹೋಂ ವರ್ಕ್ ಮುಗಿಸಿದರೆ ಅಲ್ಲಿಗೆ ಆ ಕೆಲಸ ಮಾಡುವುದರಲ್ಲಿ ನೀವು ಯೋಗ್ಯ ಸಮಯ ವಿನಿಯೋಗಿಸಿದಿರಿ ಎಂದೇ ಅರ್ಥ. ಏಕೆಂದರೆ ತೀರಾ ಸಣ್ಣ ಮಕ್ಕಳಿಗೆ ಎಷ್ಟೋ ಬಾರಿ ತಾವು ಏನು ಬರೆಯುತ್ತಿದ್ದೇವೆ ಎಂದೂ ತಿಳಿದಿರುವುದಿಲ್ಲ. ಆದರೆ ಯಾಂತ್ರಿಕವಾಗಿ ಅದನ್ನು ಬರೆಯುತ್ತಿರುತ್ತಾರೆ. ಅಷ್ಟೇ ಅಲ್ಲದೇ ಆ ಬಗೆಯ ಸಣ್ಣ ಮಕ್ಕಳು ತಮಗೆ ಆಕರ್ಷಕವಾಗಿ ಕಂಡಿತೆಂದು ಕೆಲವು ವಸ್ತುಗಳನ್ನು ಶಾಲೆಯ ಸಹಪಾಠಿಗಳಿಗೆ ತಿಳಿಯದೇ ತೆಗೆದುಕೊಂಡು ಬಂದುಬಿಟ್ಟಿರುತ್ತಾರೆ. ಹಾಗಾಗಿ ಮನೆಯಲ್ಲಿ ತಮ್ಮದ್ದಲ್ಲದ ವಸ್ತುಗಳನ್ನು ಮಗುವಿನ ಶಾಲಾಚೀಲದಲ್ಲಿ ಕಂಡರೆ ಅದು ಹೇಗೆ ಬಂತೆಂದು, ಹಾಗೆ ತರಬಾರದೆಂದು ಅದಕ್ಕೆ ತಿಳಿಹೇಳಬೇಕು. ಒಂದು ವೇಳೆ ತನ್ನದೇ ವಸ್ತುಗಳನ್ನು ಪುನರಾವರ್ತಿತವಾಗಿ ಕಳೆದುಕೊಂಡು ಬರುತ್ತಿದ್ದರೆ ಅಥವಾ ಹೊಸ ವಸ್ತುಗಳನ್ನು ತರುತ್ತಿದ್ದರೆ ಅದರ ಬಗ್ಗೆ ಖಂಡಿತ ಎಚ್ಚರವಹಿಸಬೇಕು.

ಕಲಿಕೆಯಲ್ಲಿ ಭಾಗವಹಿಸುವುದು

ಮಕ್ಕಳಿನ್ನು ಬೆಳೆದಿದ್ದರೆ ಅವರಿಗೆ ಮರುದಿನ ಯುಟಿ (ಯೂನಿಟ್ ಟೆಸ್ಟ್) ಘಟಕ ಪರೀಕ್ಷೆಗಳೇನಾದರೂ ಇದ್ದ ಪಕ್ಷದಲ್ಲಿ ಯಾವ ವಿಷಯದ ಕುರಿತಾಗಿ, ಎಷ್ಟು ಭಾಗಗಳನ್ನು ಪರೀಕ್ಷೆಯ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ ಎಂದು ಪರೀಕ್ಷಿಸಬೇಕು. ಮಕ್ಕಳು ಬರೆದುಕೊಂಡು ಬಂದಿರುವ ನೋಟ್ಸ್ ಮತ್ತು ಪಠ್ಯ ಪುಸ್ತಕಗಳನ್ನು ಅನುಸರಿಸಿ ಪ್ರಶ್ನೆಗಳನ್ನು ಕೇಳುವುದು, ಅವರಿಗೆ ಬರದೇ ಇರುವ ಕಾಗುಣಿತಗಳನ್ನು ಅಭ್ಯಾಸ ಮಾಡಿಸುವುದು, ಉತ್ತರಗಳನ್ನೊಮ್ಮೆ ಬರೆಸುವುದು, ಒಂದು ವೇಳೆ ಅವರ ಕಲಿಕೆಯ ಆ ವಿಷಯದ ಬಗ್ಗೆ ಇನ್ನೇನಾ ದರೂ ವಿಶೇಷಗಳಿದ್ದರೆ ತಿಳಿಸುವುದು, ಗೂಗಲ್‌ನಲ್ಲಿ ಸರ್ಚ್ ಮಾಡಿ ಅದಕ್ಕೆ ಸಂಬಂಧಪಟ್ಟಂತಹ ವಿಷಯವನ್ನು ವಿಸ್ತರಿಸುವುದು, ಅಥವಾ ಯೂಟ್ಯೂಬ್ ನಲ್ಲಿ ವೀಡಿಯೊ ತೋರಿಸುವುದು ಇತ್ಯಾದಿಗಳನ್ನು ಮಾಡುವಷ್ಟು ಸಮಯ ವನ್ನು ಅವರ ಕಲಿಕೆಯ ಭಾಗವಾಗಿ ನಾವು ವಿನಿಯೋಗಿಸಿದರೆ ಕ್ವಾಲಿಟಿ ಟೈಮ್ ಕೊಟ್ಟಿದ್ದೇವೆ ಎಂದೇ ಅರ್ಥ.

ಅಷ್ಟೇ ಅಲ್ಲದೇ ಮಗುವು ಮರುದಿನ ಬಂದಾಗ ಇಂದು ಟೆಸ್ಟ್ ಹೇಗಿತ್ತು. ಯಾವುದು ಕೇಳಿದರು? ನೀನು ಹೇಗೆ ಬರೆದೆ ಎಂದು ಸಂಕ್ಷಿಪ್ತವಾಗಿ ಕೇಳುವು ದರಿಂದ ಪೋಷಕರು ತನ್ನ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಿದ್ದಾರೆ ಎಂಬ ಪ್ರಜ್ಞೆ ಅವರಲ್ಲಿ ಜಾಗೃತವಾಗಿರುತ್ತದೆ. ಈ ಜಾಗೃತಿಯೇ ಅವರಿಗೆ ಎಷ್ಟೋ ಬಾರಿ ತಮ್ಮ ವಿಷಯದಲ್ಲಿ ಜವಾಬ್ದಾರಿಯಿಂದ ಇರಲು ನೆರವಾಗುತ್ತದೆ.

ನಾವು ಸಮಯವನ್ನು ಯೋಗ್ಯವಾಗಿ ಮಕ್ಕಳೊಂದಿಗೆ ಕಳೆಯಲು ಎಷ್ಟು ಸಾಧ್ಯವಾಗುತ್ತದೆ ಎಂದು ನೋಡುವುದಕ್ಕಿಂತ ಮಗುವು ನಮ್ಮ ಸಂಪರ್ಕಕ್ಕೆ ಬಂದಾಗೆಲ್ಲಾ ಅದರೊಡನೆ ವ್ಯವಹರಿಸುವ ಎಲ್ಲಾ ಸಮಯದಲ್ಲೂ ಪೂರ್ಣ ಗಮನವನ್ನು ಕೊಟ್ಟು, ಮಗುವಿನೊಂದಿಗೆ ನಮ್ಮ ಸಂಪರ್ಕವು ಫಲದಾಯಕವಾಗಿರುವಂತೆ ನೋಡಿಕೊಳ್ಳಬೇಕು.

ನನ್ನ ಚಿಕ್ಕ ಮಗಳು ತಾನು ಓದುತ್ತಿದ್ದ ಪದ್ಯವನ್ನು ಕೇಳಿದಾಗ ಅದೇನು ಅರ್ಥವಾಯಿತೇ ಎಂದು ಕೇಳಿದೆ. ಅವಳು ತನಗೆ ತಿಳಿದಷ್ಟನ್ನು ಹೇಳಿದಳು. ಅದನ್ನು ನಾನೇ ಓದಿ ಹೇಳಿ, ಆ ಇಂಗ್ಲಿಷ್ ಪದ್ಯ ಚೆನ್ನಾಗಿದೆ ಎಂದು ಪ್ರಶಂಸಿಸಿ,ಅದನ್ನು ಕನ್ನಡದಲ್ಲಿ ಭಾವಾನುವಾದ ಮಾಡಿದಾಗ ಅವಳ ಆ ಪದ್ಯದ ಕಲಿಕೆ ಮತ್ತು ಗ್ರಹಿಕೆಗಳೆರಡೂ ಗುಣಮಟ್ಟದಲ್ಲಿ ಫಲಪ್ರದವಾಗಿತ್ತು. ಈ ರೀತಿಯ ಎಷ್ಟೋ ನಾವು ಬಹಳ ಸರಳ ಮತ್ತು ಸುಲಭವಾಗಿ ಪ್ರಸ್ತುತಪಡಿಸಬಹು ದಾದಂತಹ ವಿಷಯಗಳು ಅವರ ಕಲಿಕೆಯಲ್ಲಿ ಬಹಳ ಮಹತ್ವದ ಪ್ರಭಾವವನ್ನು ಪರಿಣಾಮಕಾರಿಯಾಗಿ ಬೀರುತ್ತದೆ.

ಮಕ್ಕಳು ಪ್ರಾಜೆಕ್ಟ್ ಎಂದು ಮಾಡುವಾಗ ಕತ್ತರಿಸಿರುವ ಚಿತ್ರಗಳನ್ನು ಕ್ರಮ ವಾಗಿ ಅಂಟಿಸುವುದರಲ್ಲಿ, ಅದರ ಕೆಳಗೆ ಶೀರ್ಷಿಕೆಗಳನ್ನು ಬರೆಯುವು ದರಲ್ಲಿ ಅವರಿಗೆ ಸಹಕರಿಸಬಹುದು. ಅದರ ಮುಖಪುಟವನ್ನೋ ಅಥವಾ ಪುಟ ಗಳ ಅಂಚುಗಳನ್ನೋ ಚೆಂದಗೊಳಿಸುವ ಆಸಕ್ತಿಯನ್ನು ನಾವು ತೋರಿದರೆ ಅವರಿಗೆ ಬಹಳ ಉತ್ಸಾಹ ಮೂಡುತ್ತದೆ.

ಮನೆಗಳಲ್ಲಿ ಮಕ್ಕಳಿದ್ದ ಪಕ್ಷದಲ್ಲಿ ಸಂಜೆ ಆರೂವರೆಯಿಂದ ಎಂಟೂವರೆ ಯವರೆಗೂ ಖಂಡಿತವಾಗಿ ಟಿವಿ ಬಂದ್ ಮಾಡಿ ಮನೆಯವರೆಲ್ಲರೂ ತಮ್ಮ ತಮ್ಮ ಕೆಲಸ ಮಾಡಿಕೊಳ್ಳುತ್ತಾ ಮಕ್ಕಳಿಗೆ ಅವರ ಹೋಂ ವರ್ಕ್ ಅಥವಾ ಓದುವಿಕೆಯಲ್ಲಿ ನೆರವಾಗಬೇಕು. ಮಕ್ಕಳನ್ನು ಯಾವುದೋ ಒಂದು ಕೋಣೆಗೆ ಸೇರಿಸಿ ಓದಿಕೊಳ್ಳಲು ಅಥವಾ ಬರೆಯಲು ಬಿಟ್ಟು ಟಿವಿ ನೋಡುತ್ತಿರು ವಿರೆಂದರೆ ಮಗುವಿಗೆ ಗುಣಮಟ್ಟದ ಸಮಯ ಮತ್ತು ವಾತಾವರಣವನ್ನು ಸೃಷ್ಟಿಸಿಲ್ಲವೆಂದೇ ಅರ್ಥ. ಮಗುವು ಪೋಷಕರಿಗೆ ಮಾತ್ರ ಮಗುವಲ್ಲ. ಇಡೀ ಕುಟುಂಬಕ್ಕೆ ಎನ್ನುವ ಎಚ್ಚರಿಕೆಯೊಂದಿಗೆ ಇಡೀ ಮನೆಯೇ ಅವರಿಗೆ ಪೂರಕವಾದ ವಾತಾವರಣವನ್ನು ಒದಗಿಸಬೇಕು. ಇದೇನೂ ಅತಿಯಲ್ಲ. ತೀರಾ ಅಗತ್ಯ.

ಮಕ್ಕಳನ್ನು ಪಾರ್ಕಿಗೆ ಆಟವಾಡಲು ಕಳೆದುಕೊಂಡು ಹೋಗುವುದು. ಅವರು ಆಡುವಾಗ ಅವರ ಆಟದಲ್ಲಿ ಸಹಕರಿಸುವುದು. ಅವರ ಆಟದ ಆಯ್ಕೆ ಗಳನ್ನು ವಿಸ್ತರಿಸುವುದು ಇತ್ಯಾದಿಗಳನ್ನು ಮಾಡುವುದೂ ಕೂಡ ಯೋಗ್ಯ ವಾದ ಸಮಯವನ್ನು ಅವರಿಗೆ ನೀಡಿದಂತೆ.

ತುತ್ತು ನೀಡುತ್ತಾ ಆಪ್ತರಾಗಿ

ಅವರು ಆಹಾರವನ್ನು ಸೇವಿಸುವಾಗ ಕೈ ಮತ್ತು ಬಾಯಿಯನ್ನು ಸರಿಯಾಗಿ ತೊಳೆದುಕೊಂಡು ಬಂದು ತಿನ್ನುವುದರಿಂದ ಹಿಡಿದು, ಊಟ ಮುಗಿಸಿ ಕೈ ಮತ್ತು ಬಾಯಿಯನ್ನು ತೊಳೆದುಕೊಳ್ಳುವವರೆಗೂ ಗಮನಿಸಿಕೊಳ್ಳುವುದಷ್ಟೇ ಅಲ್ಲ, ಆ ಊಟದಲ್ಲಿ ಏನಿದೆ, ಅದು ಏತಕ್ಕೆ ಒಳ್ಳೆಯದು, ಅದು ನಮ್ಮ ಶರೀರ ಪೋಷಣೆಗೆ ಯಾವ ರೀತಿಯಲ್ಲಿ ನೆರವಾಗುತ್ತದೆ ಎಂದು ಆಗಾಗ ಹೇಳುತ್ತಿದ್ದರೂ, ಅವರ ತಿನ್ನುವಿಕೆ ಯಾಂತ್ರಿಕವಾಗಿರದೇ, ತಮ್ಮ ಶರೀರ ಪೋಷಣೆಗೆ ಇದು ಅಗತ್ಯವಿರುವುದು ಎಂದು ತಿಳಿದು, ಇದು ನನಗೆ ಇಷ್ಟವಿಲ್ಲ, ಸೇರುವುದಿಲ್ಲ ಇತ್ಯಾದಿ ನಕಾರಾತ್ಮಕವಾಗಿ ಹೇಳದೇ ತಿನ್ನುವ ಅಭ್ಯಾಸವನ್ನೂ ಕೂಡಾ ಮಾಡಿಸಬಹುದಾಗಿರುತ್ತದೆ. ಇನ್ನು ಅವರೇ ತಿನ್ನುವವರಾಗಿದ್ದರೂ ಆಗಾಗ ಕೈ ತುತ್ತು ನೀಡುವುದು ಅಥವಾ ಬಾಯಿಗೆ ತಿನ್ನಿಸುವುದು ಇತ್ಯಾದಿ ಮಾಡುವುದರಿಂದ ಆಪ್ತತೆಯು ಹೆಚ್ಚುವುದಲ್ಲದೇ ಎರಡು ತುತ್ತು ಊಟ ಹೆಚ್ಚು ಸೇವಿಸುತ್ತಾರೆ. ಅಷ್ಟು ಮಾತ್ರವಲ್ಲದೇ ಆ ಪ್ರೀತಿಯ ಸ್ಪಶರ್ದ ಸಮೇತ ಸೇವಿಸುವ ಆಹಾರ ಅವರಲ್ಲಿ ಚೈತನ್ಯವನ್ನೂ, ನಂಟನ್ನು ಬಲಗೊಳಿಸುವಂತಹ ಭಾವವನ್ನೂ ಅದು ನೀಡುತ್ತದೆ.

ಒಂದಂತೂ ಸತ್ಯ, ಹಿರಿಯರು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಟಿವಿ; ಈ ಎಲ್ಲಾ ಚಟುವಟಿಕೆಗಳ ಸಮಯದಲ್ಲಿ ಕೊಂಚ ಕೊಂಚ ಕಡಿತಗೊಳಿಸಿ ತಮ್ಮ ಮನೆಯ ಮಕ್ಕಳೊಂದಿಗೆ ಸಂಪರ್ಕಕ್ಕೆ ಬಂದಾಗೆಲ್ಲಾ ಸಂಪೂರ್ಣ ಗಮನ ನೀಡಿ, ಅವರ ಸಂವಹನ ಮತ್ತು ಸಂಪರ್ಕ ಎಷ್ಟಮಟ್ಟಿಗೆ ರಚನಾತ್ಮಕವಾಗಿದೆ ಮತ್ತು ಫಲದಾಯಕವಾಗಿದೆ ಎಂದು ನೋಡಿಕೊಂಡರೆ, ಕ್ವಾಲಿಟಿ ಟೈಮ್ ಕೊಟ್ಟಂತಾಗುತ್ತದೆ. ಮಗುವಿನೊಂದಿಗೆ ಕುಳಿತಾಗ ಫೇಸ್‌ಬುಕ್ ಅಥವಾ ವಾಟ್ಸ್ ಆ್ಯಪ್‌ಗಳನ್ನು ನೋಡಿಕೊಂಡು ಬರಿದೇ ಯಾಂತ್ರಿಕ ವಾಗಿ ಎಂದೂ ತಮ್ಮ ಇರುವಿಕೆಯನ್ನು ಪ್ರಕಟಿಸಬಾರದು. ಹಾಗೊಂದು ವೇಳೆ ಅದನ್ನು ನೋಡುತ್ತಿದ್ದರೆ, ಒಂದೆರಡು ನಿಮಿಷ ಅದನ್ನು ನೋಡಿ ಬರುವೆನೆಂದು ಹೇಳಿ, ಮಾತು ಉಳಿಸಿಕೊಳ್ಳಬೇಕು ಅಥವಾ ಕೂಡಲೇ ಅವರ ಕಡೆ ಗಮನ ಕೊಡಬೇಕು.

ಮಗುವಿನ ಜೊತೆಗೆ ಆಡುವುದು, ಬೆಳೆದ ಮಕ್ಕಳಾದರೆ ಅವರ ಮಾತು ಗಳನ್ನು ಕೇಳುವುದು. ಅವರ ಶಾಲೆಯ ಮತ್ತು ಆಟದ ಅನುಭವ ಹಾಗೂ ಸ್ನೇಹಿತರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಇವೆಲ್ಲಾ ಚಟುವಟಿಕೆಗಳೂ ಯೋಗ್ಯ ಸಮಯ ನೀಡುವುದೇ ಆಗಿರುತ್ತದೆ. ಏನೋ, ಹೋಂ ವರ್ಕ್ ಬರೆದ್ಯಾ? ಸ್ಕೂಲ್ಗೆ ಹೋಗಿದ್ದಾ ಎಂಬ ಪ್ರಶ್ನೆ ಕೇಳಿ ಹೂಂ ಎಂಬ ಉತ್ತರವನ್ನು ಕೇಳಿ ಸುಮ್ಮನಾಗುವುದೆಂದರೆ ವಿಚಾರಿಸಿಕೊಂಡಂತಲ್ಲ. ಬಹಳಷ್ಟು ಜನ ಪುರುಷರು ಅದನ್ನು ತಾಯಂದಿರ ಹೆಗಲಿಗೆ ಹೊರಿಸಿ ಸುಮ್ಮನಾಗಿರುತ್ತಾರೆ. ಎಷ್ಟೋ ತಾಯಂದಿರು ನಮಗೆ ಗೊತ್ತಾಗಲ್ಲ ಎಂದು ಅಲಕ್ಷ್ಯ ಮಾಡಿಬಿಡುತ್ತಾರೆ.

ದಿನವೂ ಸಾಧ್ಯವಾಗದಿದ್ದರೂ ಸಾಧ್ಯವಾದಾಗೆಲ್ಲಾ ಮಗುವು ತಮಗೆ ಆತುಕೊಂಡಂತೆ ಕುಳ್ಳಿರಿಸಿಕೊಂಡು, ಅಪ್ಪಿಕೊಂಡು, ಮಾತಾಡಿಸಬೇಕು. ವಿಷಯಗಳನ್ನು ಕೇಳಬೇಕು. ಅವರ ಪ್ರಶ್ನೆಗಳಿಗೆ ಕಿವಿಯಾಗಬೇಕು. ಅವರ ಹೊಸತನದ ಹೊಳಹುಗಳಿಗೆ ಸ್ಪಂದಿಸಬೇಕು.

ಮಕ್ಕಳಿಗೆ ಯೋಗ್ಯ ಸಮಯ ಕೊಡುವುದೆಂದರೆ ನಮ್ಮ ಪ್ರಾಮಾಣಿಕ ಮತ್ತು ಬದ್ಧತೆಯ ಗಮನವನ್ನು ಅವರ ಕಡೆಗೆ ನೀಡುವುದೆಂದೇ ಅರ್ಥ. ಯೋಗ್ಯ ವಾದ ಸಮಯವನ್ನು ಸೂಕ್ತವಾದ ಬೆಳವಣಿಗೆಯ ಹಂತದಲ್ಲಿ ನೀಡದೇ ಹೋದರೆ, ಮುಂದೆ ಎಷ್ಟೇ ಸಮಯ ನೀಡಲು ಸಿದ್ಧರಾದರೂ ಸರಿಪಡಿಸಲಾ ಗದಂತಹ ನ್ಯೂನತೆಗಳು ಉಂಟಾಗುತ್ತವೆ. ಈ ಎಚ್ಚರಿಕೆ ಮಗುವಿನ ತಂದೆ ತಾಯಿಗೆ ಮಾತ್ರವಲ್ಲ, ಇಡೀ ಕುಟುಂಬದವರಿಗಿರಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News