ಪಾಸ್ವಾನ್ ಸ್ನೇಹಪರತೆ

Update: 2017-07-08 18:51 GMT

ರಾಜಕಾರಣಿಗಳು ಎಂದೂ ರಾಜಕಾರಣಿಗಳೇ. ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಹುಟ್ಟುಹಬ್ಬದಂದು ಅವರ ಕಚೇರಿಯಲ್ಲಿ ಸೇರಿದ್ದ ಕೆಲ ಪತ್ರಕರ್ತರ ಎದುರಂತೂ ಪಾಸ್ವಾನ್ ಇದನ್ನು ನಿರೂಪಿಸಿ ತೋರಿಸಿದರು. ಪತ್ರಕರ್ತರ ಜತೆ ಹರಟುತ್ತಿದ್ದಾಗ ಖಾಸಗಿ ಕಾರ್ಯದರ್ಶಿ ಮಾಹಿತಿ ನೀಡಿ, ಬಾಲಿವುಡ್ ನಟ ಅವರನ್ನು ಭೇಟಿ ಮಾಡಲು ಬಂದಿರುವುದಾಗಿ ತಿಳಿಸಿದರು. ಪಾಸ್ವಾನ್‌ಗೆ ಆ ನಟ ಯಾರು ಎಂದು ಗೊತ್ತಿರಲಿಲ್ಲ. ಸ್ವಲ್ಪಹೊತ್ತು ಕಾಯಲು ಸೂಚಿಸಿ, ಮಾಹಿತಿಯನ್ನು ಪತ್ರಕರ್ತರ ಬಳಿ ಹಂಚಿಕೊಂಡರು.

ಆದರೆ ಕಾಯುತ್ತಿರುವ ನಟ ಬಾಲಿವುಡ್‌ನ ಖ್ಯಾತ ಹಾಗೂ ಜನಪ್ರಿಯತೆ ಇರುವ ನಟ ಎಂದು ಕಾರ್ಯದರ್ಶಿ ಸಚಿವರ ಗಮನಕ್ಕೆ ತಂದರು. ತಕ್ಷಣ ಕಾರ್ಯದರ್ಶಿಯನ್ನು ನಟನ ಬಳಿಗೆ ಕಳುಹಿಸಿ, ನಟನನ್ನು ಕರೆಸಿಕೊಂಡವರು. ಬಾಲಿವುಡ್ ನಟ ಒಳಪ್ರವೇಶಿಸುತ್ತಲೇ ಪಾಸ್ವಾನ್‌ಗೆ ಹುಟ್ಟುಹಬ್ಬದ ಶುಭ ಹಾರೈಸಿದರು. ಕುರ್ಚಿಯಿಂದ ಎದ್ದುಬಂದ ಪಾಸ್ವಾನ್ ನಟನನ್ನು ತಬ್ಬಿಕೊಂಡರು. ಆತನ ಖ್ಯಾತಿಯನ್ನು ಹಾಡಿಹೊಗಳಿ, ನಿಮ್ಮ ಸಾಕಷ್ಟು ಚಿತ್ರಗಳನ್ನು ವೀಕ್ಷಿಸಿದ್ದಾಗಿ ಹೇಳಿದರು. ಬಹುಶಃ 100ನೆ ಬಾರಿಗೆ ನಟನನ್ನು ಭೇಟಿ ಮಾಡುತ್ತಿರುವಂತೆ ಸಲುಗೆಯಿಂದ ಮಾತನಾಡಿಸಿದಾಗ ತಬ್ಬಿಬ್ಬಾಗುವ ಸರದಿ ಪತ್ರಕರ್ತರದ್ದಾಯಿತು. ಅಬ್ಬಾ ಈ ರಾಜಕಾರಣಿಗಳೇ!

ಹೊಸ ಹುದ್ದೆಗೆ ಹಳೆ ಕಾನೂನು ಹದ್ದು


ಮುಕುಲ್ ರೋಹಟ್ಗಿ ಅಟಾರ್ನಿ ಜನರಲ್ ಹುದ್ದೆ ತ್ಯಜಿಸಿದ ಬಳಿಕ, ಸರಕಾರ ಕೆ.ಕೆ.ವೇಣುಗೋಪಾಲ್ ಅವರನ್ನು ಆ ಹುದ್ದೆಗೆ ನೇಮಕ ಮಾಡಿದೆ. ಇದು ಕಾನೂನು ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ನರೇಂದ್ರ ಮೋದಿ ಸರಕಾರದ ಈ ಆಯ್ಕೆಯನ್ನು ವಿಚಿತ್ರ ಎಂದು ಬಣ್ಣಿಸಿದ್ದಾರೆ. ದೇಶದ ಐವತ್ತು ಲಕ್ಷ ವಕೀಲರ ಪೈಕಿ 86 ವರ್ಷದ ಕೆಕೆವಿ ಅವರನ್ನು ಆಯ್ಕೆ ಮಾಡಿರುವುದು ಹಲವರಿಗೆ ವಿಚಿತ್ರವಾಗಿ ಕಂಡಿತು. ದೇಶದಲ್ಲಿ ಅಪ್ರತಿಮ ಪ್ರತಿಭಾವಂತ ವಕೀಲರು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ತನಗೆ ಸ್ವೀಕಾರಾರ್ಹರಾದ ಒಬ್ಬ ಯುವ ವಕೀಲರನ್ನು ಕೂಡಾ ಪತ್ತೆ ಮಾಡಲು ಸರಕಾರಕ್ಕೆ ಸಾಧ್ಯವಾಗದಿದ್ದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಆದರೆ ಸರಕಾರಕ್ಕೆ ಕೆಲ ಕಠಿಣ ಪ್ರಕರಣಗಳಲ್ಲಿ ನೆರವಾಗುವ ಶಕ್ತಿ ಇಂದಿಗೂ ಕೆಕೆವಿ ಬಳಿ ಉಳಿದುಕೊಂಡಿದೆ ಎನ್ನುವುದು ಬಹುಶಃ ಸರಕಾರದ ಲೆಕ್ಕಾಚಾರ.

ಅದೃಷ್ಟವಂತ ಗಾಂಧಿ ಮೊಮ್ಮಗ!


ರಾಷ್ಟ್ರದ ಅತ್ಯುನ್ನತ ಹುದ್ದೆಗೆ ರಾಮ್‌ನಾಥ್ ಕೋವಿಂದ್ ಅವರ ಜತೆ ಸೆಣೆಸಾಟಕ್ಕೆ ಮೀರಾ ಕುಮಾರ್ ವಿರೋಧ ಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿರುವ ನಡುವೆಯೇ, ಉಪರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯ ಹೆಸರು ಘೋಷಣೆಯ ಒತ್ತಡ ಎನ್‌ಡಿಎ ಮೇಲಿದೆ. ಸಂಸತ್ತಿನ ಉಭಯ ಸದನಗಳ ಸಂಸದರು ಸಹಜವಾಗಿಯೇ ಆಡಳಿತಾರೂಢ ಪಕ್ಷದ ಅಭ್ಯರ್ಥಿಯತ್ತ ಒಲವು ತೋರಿಸಿದ್ದಾರೆ. ಆದರೆ ಈ ಹುದ್ದೆಗೆ ತಾವೂ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ, ದೇಶ ಇಂದು ಎದುರಿಸುತ್ತಿರುವ ಪ್ರಮುಖ ಆರ್ಥಿಕ ಹಾಗೂ ರಾಜಕೀಯ ವಿಷಯಗಳನ್ನು ಎತ್ತಲು ಅವಕಾಶವಾಗುತ್ತದೆ ಎಂಬ ಯೋಚನೆ ವಿರೋಧ ಪಕ್ಷಗಳದ್ದು. ಕಾಂಗ್ರೆಸ್ ಪಕ್ಷ ಈ ಬಗ್ಗೆ ಇನ್ನೂ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲವಾದರೂ, ಸಣ್ಣ ಪಕ್ಷಗಳು ಎನ್‌ಡಿಎ ಆಯ್ಕೆಗೆ ವಿರೋಧ ವ್ಯಕ್ತಪಡಿಸಲು ಸಜ್ಜಾಗಿವೆ. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರನ್ನು ಕಣಕ್ಕಿಳಿಸಲು ಎನ್‌ಡಿಎ ನಿರ್ಧರಿಸಿದೆ ಎನ್ನಲಾಗಿದೆ. ಈ ನಾಗರಿಕ ಸೇವಾ ಅಧಿಕಾರಿ ಹಾಗೂ ಅವರ ಕುಟುಂಬದವರು ಮಹಾತ್ಮಾ ಗಾಂಧೀಜಿ ಹಾಗೂ ಸಿ.ರಾಜಗೋಪಾಲಾಚಾರಿ ಅವರ ನಿಕಟ ಸಂಪರ್ಕ ಹೊಂದಿದ್ದುದೇ ಎನ್‌ಡಿಎ ಆಯ್ಕೆಗೆ ಕಾರಣ ಎಂಬ ನಂಬಿಕೆ ವಿರೋಧ ಪಕ್ಷಗಳದ್ದು. ಆದರೆ ಮೋದಿ-ಶಾ ಜೋಡಿ ಈ ಚುನಾವಣೆಯ ಮೂಲಕ ಮತ್ತೊಂದು ಅಚ್ಚರಿ ನೀಡಲು ಮುಂದಾಗಿದೆ ಎಂಬ ಅನಿಸಿಕೆ ಮತ್ತೆ ಕೆಲವರದ್ದು.

ಪಟ್ನಾಯಕ್ ನಡುಕ?


ಒಡಿಶಾ ಸರಕಾರ, ದಿಲ್ಲಿ ಪತ್ರಿಕೆಗಳಲ್ಲಿ ಸರಕಾರದ ಸಾಧನೆಯನ್ನು ಬಿಂಬಿಸುವ ಪುಟಪೂರ್ತಿ ಜಾಹೀರಾತುಗಳನ್ನು ಕಳೆದ ಕೆಲ ವಾರಗಳಿಂದ ಪ್ರಕಟಿಸುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದು ಬಹುಶಃ ಒಡಿಶಾ ಸಿಎಂ ಹಾಗೂ ಬಿಜು ಜನತಾದಳ ಮುಖಂಡ ನವೀನ್ ಪಟ್ನಾಯಕ್ ಆತಂಕಿತರಾದಂತಿದೆ. ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಸಾಧಿಸಿರುವುದು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದರಿಂದ ಬಿಜೆಪಿ ಮೇಲುಗೈ ಸಾಧಿಸಿದಂತೆ ಕಂಡುಬರುತ್ತಿದೆ. ಕೆಲ ಬಿಜೆಡಿ ನಾಯಕರ ಬೇಟೆಗೂ ಬಿಜೆಪಿ ಹುನ್ನಾರ ನಡೆಸಿದೆ ಎನ್ನಲಾಗುತ್ತಿದೆ. ಬಿಜೆಡಿ ಮುಖಂಡ ಬೈಜಯಂತ್ ಪಂಡಾ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಪಟ್ನಾಯಕ್ ಆರೋಗ್ಯ ಕೂಡಾ ಚೆನ್ನಾಗಿಲ್ಲವಾದ್ದರಿಂದ ಬಿಜೆಡಿ ಭವಿಷ್ಯದ ಮೇಲೆಯೇ ದಟ್ಟ ಕಾರ್ಮೋಡ ಕವಿದಿದೆ ಎಂಬ ವದಂತಿಗಳೂ ಇವೆ. ಆದ್ದರಿಂದ ಪಟ್ನಾಯಕ್, ರಾಜ್ಯ ಇನ್ನೂ ತನ್ನ ಹಿಡಿತದಲ್ಲಿದೆ ಎಂದು ತೋರಿಸಿಕೊಳ್ಳಲು ಜಾಹೀರಾತಿನ ಪ್ರಯತ್ನ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಇದು ಎಷ್ಟು ದಿನ ಎನ್ನುವುದು ಪ್ರಶ್ನೆ.

ನಾಯ್ಡು ಅದೃಷ್ಟ?


ಬಿಜೆಪಿ ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ದಕ್ಷಿಣ ಅಥವಾ ಈಶಾನ್ಯ ಭಾರತದಿಂದ ಆಯ್ಕೆ ಮಾಡುತ್ತದೆ ಎಂಬ ವದಂತಿ ರಾಜಧಾನಿಯಲ್ಲಿ ದಟ್ಟವಾಗಿ ಹಬ್ಬಿದೆ. ಈ ಪ್ರದೇಶದಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡು, ಅಖಿಲ ಭಾರತ ಮಟ್ಟದ ಪಕ್ಷ ಎಂಬ ಬಿಂಬಿಸಿಕೊಳ್ಳುವ ಇರಾದೆ ಬಿಜೆಪಿಯದ್ದು. ಆಗಸ್ಟ್ 5ರಂದು ನಡೆಯುವ ಚುನಾವಣೆಗೆ ಮುಂದಿನ ವಾರ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ. ಕರ್ನಾಟಕ ಹೊರತುಪಡಿಸಿದರೆ, ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಅಮಿತ್ ಶಾ ನೇತೃತ್ವದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ವರ್ಚಸ್ಸು ಬೆಳೆಸಿಕೊಳ್ಳಲು ಪ್ರಯತ್ನ ನಡೆಸಿದೆ. ವೆಂಕಯ್ಯ ನಾಯ್ಡು ಅವರನ್ನು ಈ ಹುದ್ದೆಗೆ ತರಲು ಬಿಜೆಪಿ ಆಸಕ್ತಿ ಹೊಂದಿದೆ ಎನ್ನಲಾಗುತ್ತಿದೆ. ಆದರೆ ನಾಯ್ಡು ಈ ವದಂತಿಯನ್ನು ತಳ್ಳಿಹಾಕಿದ್ದಾರೆ. ನಾಯ್ಡು ಆಯ್ಕೆ ಹೆಚ್ಚು ರಕ್ಷಣಾತ್ಮಕ ಆಟ ಎಂಬ ಲೆಕ್ಕಾಚಾರ ಪಕ್ಷದ ಮುಖಂಡರದ್ದು. ಜತೆಗೆ ಅವರು ಮೋದಿಯವರ ಕಟ್ಟಾ ಅನುಯಾಯಿ ಕೂಡಾ. ಆದ್ದರಿಂದ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಹಲವರಲ್ಲಿದೆ. ಅದರೆ ಮೋದಿ ಹಾಗೂ ಶಾ ಅವರ ಲೆಕ್ಕಾಚಾರ ಏನು ಎನ್ನುವುದು ಯಾರಿಗೂ ತಿಳಿಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News