ಬಿಜೆಪಿ, ಸಂಘಪರಿವಾರ ತಟಸ್ಥವಾದರೆ ಎಲ್ಲವೂ ಸರಿಯಾಗಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜು.9: ಬಿಜೆಪಿಯ ಕೆಲ ನಾಯಕರು ಮಂಗಳೂರಿನಲ್ಲಿ ಮತೀಯ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ತಟಸ್ಥವಾದರೆ, ಜಿಲ್ಲೆಯಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸಂಘಪರಿವಾರದ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳು ಮುಂದಾಗಬೇಕು. ಅದನ್ನು ಬಿಟ್ಟು ಕೋಮುಗಲಭೆಯನ್ನು ಸೃಷ್ಟಿಸಲು ಮುಂದಾಗುವ ಯಾವುದೇ ಸಂಘಟನೆಗಳಿದ್ದರೂ, ಅವುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕರು ಮಂಗಳೂರಿನಲ್ಲಿ ಮತೀಯ ಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅವರು ಮೊದಲು ತಟಸ್ಥವಾದರೆ ಎಲ್ಲವೂ ಸರಿ ಹೋಗಲಿದೆ. ಸುಖಾ ಸುಮ್ಮನೆ ಆರೋಪ ಮಾಡುತ್ತಾ ಕೋಮು ಗಲಭೆಯನ್ನು ಪ್ರೇರೇಪಿಸುವುದನ್ನು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದವರು ಹೇಳಿದರು.
ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ: ಮಂಗಳೂರು ಗಲಭೆಗೆ ಕಾರಣವಾದವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಜರಂಗದಳ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು, ಎಸ್‌ಡಿಪಿಐ ಸೇರಿದಂತೆ ಹಲವು ಸಂಘಟನೆಗಳು ಶಾಂತಿ ಕಾಪಾಡಲು ಒತ್ತು ನೀಡಬೇಕು. ವಿನಾಃಕಾರಣ ಶಾಂತಿ ಕದಡಲು ಮುಂದಾದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರಗಿಸಲಾಗುವುದು ಎಂದರು.
ಶಾಂತಿ ಸಭೆ: ಮಂಗಳೂರಿನಲ್ಲಿ ಉಂಟಾಗಿರುವ ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸುವ ಸಂಬಂಧ ಈ ವಾರದಲ್ಲಿ ಸಂಘ-ಸಂಸ್ಥೆಗಳು, ಸರ್ವ ಪಕ್ಷಗಳ ಮುಖಂಡರೊಂದಿಗೆ ಶಾಂತಿ ಸಭೆಯನ್ನು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಕೋಮು ಗಲಭೆ ಹೆಚ್ಚಾಗಲು ಬಿಜೆಪಿಯವರೇ ಮೂಲ ಕಾರಣ. ನಿಷೇಧಾಜ್ಞೆಯ ನಡುವೆಯೂ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಇನ್ನಿತರ ಮುಖಂಡರು ಪ್ರತಿಭಟನೆ ನಡೆಸಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.
ಮಂಗಳೂರಿನ ಗಲಭೆಗೆ ತಾವೇ ಕಾರಣ ಎನ್ನುವ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನ ಕೈವಾಡವೂ ಇಲ್ಲ. ಜೀವಮಾನದುದ್ದಕ್ಕೂ ಒಂದೇ ಒಂದು ಬಾರಿಯೂ ಪ್ರಚೋದನಾತ್ಮಕ ಭಾಷಣ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಇಂತಹದ್ದು ಏನಿದ್ದರೂ ಬಿಜೆಪಿ ಮತ್ತು ಸಂಘ ಪರಿವಾರದ ಕೆಲಸ ಎಂದು ವಾಗ್ದಾಳಿ ನಡೆಸಿದರು.