×
Ad

ಖಾಸಗಿ ಆಸ್ಪತ್ರೆಯ ಬಳಿ ಶವಕ್ಕಾಗಿ 38 ಗಂಟೆ ಕಾದ ಬಡ ಕುಟುಂಬ

Update: 2017-07-09 19:50 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 9: ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿದ್ದ ತಾಯಿಯ ಶವನ್ನು ಪಡೆಯಲು ಬಡ ಕುಟುಂಬವೊಂದು ನಗರದ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದಲ್ಲಿ 38ಗಂಟೆಗಳಷ್ಟು ಸುದೀರ್ಘ ಕಾಲ ಕಾದು ಬಸವಳಿದ ಘಟನೆ ನಗರದಲ್ಲಿ ವರದಿಯಾಗಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಸಬೀರಾ ಎಂಬುವರು ಕ್ಯಾನ್ಸರ್ ಕಾಯಿಲೆಯಿಂದ ಶನಿವಾರ ಮುಂಜಾನೆ ಮೃತಪಟ್ಟಿದ್ದು, ಅವರ ಮೃತ ದೇಹ ನೀಡಲು ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಆಡಳಿತ ಮಂಡಳಿ ವಿನಾಕಾರಣ ವಿಳಂಬ ನೀತಿ ಅನುಸರಿಸಿದೆ ಎಂಬ ಆರೋಪ ಕೇಳಿಬಂದಿದೆ.

ಏನಿದು ಪ್ರಕರಣ: ಐದು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸಬೀರಾ, ಇಲ್ಲಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಯದಲ್ಲಿ ವಾಜಪೇಯಿ ಆರೋಗ್ಯ ವಿಮಾ ಯೋಜನೆ ಅಡಿಯಲ್ಲಿ ಸರಕಾರದ ಕಡೆಯಿಂದ ಧನ ಸಹಾಯವೂ ಸಿಕ್ಕಿತ್ತು. ಐದು ವರ್ಷಗಳ ಹಿಂದೆ ಚಿಕಿತ್ಸೆ ಪಡೆದು ಗುಣಮುಖರಾದ ಸಬೀರಾ ಕಂಪ್ಲಿಗೆ ಹಿಂದುರಿಗಿದ್ದರು. ಆದರೆ, ಜೂ. 29ರಂದು ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು.

ವೈದ್ಯರು ಕ್ಯಾನ್ಸರ್ ಮತ್ತೆ ಮರುಕಳಿಸಿದೆ ಎಂದು ಹೇಳಿದ್ದು, ಕಿಮೋಥೆರಪಿ ಮಾಡಬೇಕೆಂದು ತಿಳಿಸಿದ್ದಾರೆ. ವೈದ್ಯರು ಹೇಳಿದ ರೀತಿಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಿದ್ದರೂ, ಶನಿವಾರ ಮುಂಜಾನೆ ಸಬೀರಾ ಮೃತಪಟ್ಟಿದ್ದಾರೆ. ಆದರೆ, ದೇಹವನ್ನು ತೆಗೆದುಕೊಂಡು ಹೋಗಲು ಶವಪರೀಕ್ಷೆ ಮಾಡಿಸಿ ಎಂದು ವೈದ್ಯರು ಹೇಳಿದರು ಎಂದು ಸಬೀರಾ ಅವರ ಪುತ್ರ ಸಮೀರ್ ತಿಳಿಸಿದ್ದಾರೆ.

ಗೊಂದಲ: ಜೂ.29ರಿಂದ ಇಲ್ಲಿವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಪೂರಕವಾದ ದಾಖಲೆಗಳೂ ಕುಟುಂಬದ ಬಳಿ ಇದೆ. ಹೀಗಿದ್ದರೂ, ಪೊಲೀಸರಿಗೆ ಸಬೀರಾ ಆಸ್ಪತ್ರೆಗೆ ಬರುವ ಹೊತ್ತಿಗಾಗಲೇ ಸಾವನ್ನಪ್ಪಿದ್ದರು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಕಡೆಯಿಂದ ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು ಎಂದು ಹೇಳಲಾಗುತ್ತಿದೆ.

ಸಂಜೆ ಶವ ನೀಡಿದರು: ಸಾರ್ವಜನಿಕರು ಹಾಗೂ ಜನಾರೋಗ್ಯ ಚಳುವಳಿ ಸದಸ್ಯರು ಆಸ್ಪತ್ರೆಯ ಆಡಳಿತ ಮಂಡಳಿಗೆ ಸಂಪರ್ಕಿಸಿ ಗೊಂದಲದ ಬಗ್ಗೆ ಪ್ರಶ್ನಿಸಿದ ಬಳಿಕ ಸಬೀರಾ ಅವರ ಮೃತದೇಹವನ್ನು ರವಿವಾರ ಸಂಜೆ 5:30ಕ್ಕೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರಕಾರ ವಿಮೆ ಯೋಜನೆ ಹಣ ಪಡೆದ ಖಾಸಗಿ ಆಸ್ಪತ್ರೆ, ಮೃತ ಸಬೀರಾಳ ಕುಟುಂಬದ ಸದಸ್ಯರಿಗೆ ಆಕೆ ಪಾರ್ಥೀವ ಶರೀರವನ್ನು ಹಸ್ತಾಂತರ ಮಾಡದೆ 38 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿದೆ. ಇದರಿಂದ ಆಕೆಯ ಕುಟುಂಬದ ಸದಸ್ಯರು ಅಕ್ಷರಶಃ ಪರದಾಡಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಯ ವಿರುದ್ಧ ಸರಕಾರಿ ಕ್ರಮ ಕೈಗೊಳ್ಳಬೇಕು ಎಂದು ಡಾ.ಅಖಿಲಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News