×
Ad

ಗೋವಿಗಿಂತ ಮನುಷ್ಯನ ಜೀವ ಹೆಚ್ಚು ಪವಿತ್ರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್

Update: 2017-07-09 20:00 IST

ಬೆಂಗಳೂರು, ಜು.9: ಗೋರಕ್ಷಣೆ ಹೆಸರಿನಲ್ಲಿ ಮನುಷ್ಯರನ್ನು ಥಳಿಸಿ ಕೊಲ್ಲುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಇಂಡಿಯಾ ಫೌಂಡೇಷನ್ ನಿರ್ದೇಶಕ ವಿ.ರಾಮ್‌ಮಾಧವ್, ಗೋವನ್ನು ರಕ್ಷಿಸಲು ಮನುಷ್ಯರನ್ನು ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲವೆಂದಿದ್ದಾರೆ.

ರವಿವಾರ ಆರ್.ಟಿ.ನಗರದಲ್ಲಿ ತರಳಬಾಳು ಕೇಂದ್ರ ಸಭಾಂಗಣದಲ್ಲಿ ‘ಅವೇರ್ನೆಸ್ ಇನ್ ಆ್ಯಕ್ಷನ್ ಸಂಸ್ಥೆ’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಜೀವವನ್ನು ರಕ್ಷಿಸಲು ಮತ್ತೊಂದು ಜೀವವನ್ನು ಹತ್ಯೆಗೈಯ್ಯುವುದು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

ಗೋರಕ್ಷಣೆ ಪವಿತ್ರ ಕಾರ್ಯ. ಆದರೆ ಮನುಷ್ಯನ ಜೀವ ಇನ್ನೂ ಪವಿತ್ರವಾದುದ್ದು. ಪವಿತ್ರ ಕಾರ್ಯದ ಹೆಸರಿನಲ್ಲಿ ಜೀವನದ ಪಾವಿತ್ರತೆಯನ್ನು ಹಾಳು ಮಾಡಬಾರದು. ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಪವಿತ್ರ ಕಾರ್ಯವಲ್ಲ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಸಂಘಟನೆಗಳು ಹಾಗೂ ಸಾರ್ವಜನಿಕರು ಪರಸ್ಪರ ಸಮಾಲೋಚನೆ ನಡೆಸಿ, ವ್ಯಕ್ತವಾಗುವ ಭಾವನೆಗಳನ್ನು ಆಡಳಿತ ಸೂತ್ರಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದರಿಂದ ಉತ್ತಮ ಆಡಳಿತ ನೀಡಬಹುದು ಎಂದರು.
ನಮ್ಮ ದೇಶದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ಹಿರಿಯರು ನೀಡಿದ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಜನಪರವಾದ ಆಡಳಿತ ನೀಡಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರಮೋದಿ ಜ್ವಲಂತ ಉದಾಹರಣೆ ಎಂದು ಅವರು ಹೇಳಿದರು.

ದೀನ್ ದಯಾಳ್ ಉಪಾಧ್ಯಾಯರ ಏಕತಾ ಮನವತಾವಾದವು ದೇಶದಲ್ಲಿನ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತದೆ. ಯೋಜನೆಗಳು, ಘೋಷಣೆಗಳು, ಆಶ್ವಾಸನೆಗಳು, ಅನುಷ್ಠಾನವಾದಾಗ ಮಾತ್ರ ಮಹತ್ವ ಪಡೆದುಕೊಳ್ಳುತ್ತವೆ. ಯಾವುದೇ ವಿಷಯವಿರಲಿ ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ಆಡಳಿತ ನಡೆಸುವವರ ಜವಾಬ್ದಾರಿ ಎಂದು ಸದಾನಂದಗೌಡ ಹೇಳಿದರು.

ಇವತ್ತು ನಮ್ಮ ಯುವ ಪೀಳಿಗೆ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದೆ. ಅಭಿವೃದ್ಧಿಗೆ ವಿದೇಶಿ ಸಂಸ್ಕೃತಿ ಅನಿವಾರ್ಯ ಎಂಬ ಭಾವನೆ ಮೂಡಿದೆ. ವಿದೇಶಗಳಲ್ಲಿ ನ ಆವಿಷ್ಕಾರ, ವಿಜ್ಞಾನವನ್ನು ನಾವು ತೆಗೆದುಕೊಳ್ಳಬೇಕು. ಅದು ಎಲ್ಲರಿಗೂ ಸೇರುವಂತದ್ದು. ಆದರೆ, ಯಾವುದೇ ಒಂದು ದೇಶದ ಸಂಸ್ಕೃತಿಯನ್ನು ಅನುಸರಿಸಬಾರದು. ಅದು ಅವರಿಗೆ ಮಾತ್ರ ಸೇರಿದ್ದು ಎಂದು ಸದಾನಂದಗೌಡ ಹೇಳಿದರು.

ಪ್ರಧಾನಿ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿ, ಸಂಸತ್ತು ಪ್ರವೇಶಿಸಿದಾಗ, ಇದು ಬಡವರ ಪರವಾದ ಸರಕಾರ ಎಂದು ಹೇಳಿದ್ದರು. ಅದರಂತೆ, ಜನಧನ್, ಮುದ್ರಾ, ಜನರಿಕ್ ಔಷಧಿ, ಉಜ್ವಲ ಸೇರಿದಂತೆ ಹಲವಾರು ಬಡವರ ಪರವಾದ ಕಾರ್ಯಕ್ರಮಗಳನ್ನು ಉದಾಹರಣೆಯನ್ನಾಗಿ ನೀಡಬಹುದು ಎಂದು ಅವರು ತಿಳಿಸಿದರು.

ದೀನ್ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಪರಿಕಲ್ಪನೆಯೊಂದಿಗೆ ನರೇಂದ್ರಮೋದಿ ನೇತೃತ್ವದ ಸರಕಾರ ಮುನ್ನಡೆಯುತ್ತಿದೆ ಎಂದು ಸದಾನಂದಗೌಡ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಿ.ಪುರಂದೇಶ್ವರಿ, ಶಾಸಕ ವೈ.ಎ.ನಾರಾಯಣಸ್ವಾಮಿ, ಸಂವಾದದ ಸಂಚಾಲಕ ಭಾಗವಾತುಲ ಶ್ರೀನಿವಾಸ್, ಸಹ ಸಂಚಾಲಕ ಡಿ.ಎಸ್.ಕೃಷ್ಣ, ಅವೇರ್ನೆಸ್ ಇನ್ ಆಕ್ಷನ್ ಸಂಸ್ಥೆಯ ಸಂಸ್ಥಾಪಕ ರಾಘುನಾಥರಾವ್ ಚಕ್ಕಿಲಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News