×
Ad

ತೆಲುಗು ಭವನ ನಿರ್ಮಾಣಕ್ಕೆ ಸರಕಾರದಿಂದ ಸಹಕಾರ: ಸಚಿವ ರಾಮಲಿಂಗಾರೆಡ್ಡಿ

Update: 2017-07-09 20:17 IST

ಬೆಂಗಳೂರು, ಜು.9: ತೆಲುಗು ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಭುತ್ವ ರಂಗ ತೆಲುಗು ಉದ್ಯೊಗುಲ ಸಮನ್ವಯ ಸಮಿತಿಗೆ ಸರಕಾರದಿಂದ ತೆಲುಗು ಭವನ ನಿರ್ಮಾಣಕ್ಕೆ ನೆರವು ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದ್ದಾರೆ.

ರವಿವಾರ ನಗರದ ಪುರಭವನದಲ್ಲಿ ಪ್ರಭುತ್ವ ರಂಗ ತೆಲುಗು ಉದ್ಯೋಗುಲ ಸಮನ್ವಯ ಸಮಿತಿ ಆಯೋಜಿಸಿದ್ದ ತೆಲುಗು ಪ್ರಮುಖರ ಡೈರೆಕ್ಟರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕಡೆಯಲ್ಲಿಯೂ ತೆಲುಗು ಮಾತನಾಡುವವರಿದ್ದಾರೆ ಎಂದು ಹೇಳಿದರು.

ರಾಜಕೀಯ, ವ್ಯಾಪಾರ, ಕೈಗಾರಿಕೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ತೆಲುಗು ಭಾಷಿಕರ ದೂರವಾಣಿ ಸಂಗ್ರಹಿಸಿ ಇನ್ನೂ ದೊಡ್ಡ ಮಟ್ಟದಲ್ಲಿ ಡೈರೆಕ್ಟರಿಯನ್ನು ಸಿದ್ಧಪಡಿಸವಂತೆ ಸಲಹೆ ನೀಡಿದ ಅವರು, ನಗರದಲ್ಲಿ 2-3 ಮಾತ್ರ ತೆಲುಗು ಶಾಲೆಗಳಿವೆ. ಆದರೆ, ಇತರೆ ಭಾಷೆಗಳ ಶಾಲೆಗಳು ಹೆಚ್ಚುತ್ತಿವೆ ಎಂದರು. ಅಲ್ಲದೆ, ತೆಲುಗು ಭಾಷಿಕರು ಮನೆಯಲ್ಲಿ ತೆಲುಗು ಮಾತನಾಡಿದರೆ, ಹೊರಗಡೆ ಕನ್ನಡದಲ್ಲಿಯೇ ಹೆಚ್ಚು ವ್ಯವಹರಿಸುತ್ತಾರೆ ಎಂದು ಹೇಳಿದರು.

ಶಾಸಕ ಮುನಿರತ್ನ ಮಾತನಾಡಿ, ಕನ್ನಡ ಮತ್ತು ತೆಲುಗು ಭಾಷಿಕರು ಮೊದಲಿನಿಂದಲೂ ಸೌಹಾರ್ದಪ್ರಿಯರು. ಈವರೆಗೂ ಈ ಎರಡೂ ಭಾಷಿಕರ ನಡುವೆ ಯಾವುದೇ ಗಲಭೆಗಳು ನಡೆದಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಕನ್ನಡ ನೆಲ, ಜಲ, ಭಾಷೆಗೆ ಅನ್ಯಾಯವಾಗಬಾರದು. ಅದರ ರಕ್ಷಣೆಗೆ ನಿಲ್ಲಬೇಕು. ಮಾತೃಭಾಷೆ ತೆಗುಲು ಆಗಿದ್ದರೂ, ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ತೆಲುಗು ಅತ್ಯಂತ ಹಳೆಯ ಭಾಷೆಯಾಗಿದ್ದು, ವಿಜಯನಗರ ಸಾಮ್ರಾಜ್ಯದಲ್ಲಿನ ಟಂಕ ಸಾಲೆಯಲ್ಲಿ ನಾಣ್ಯಗಳನ್ನು ತೆಲುಗಿನಲ್ಲೇ ಮುದ್ರಿಸಲಾಗುತ್ತಿತ್ತು. ಹೀಗಾಗಿ ತೆಲುಗು ಭಾಷಿಕರನ್ನು ಗುರಿಯಾಗಿಸಿಕೊಂಡು ದೂಷಣೆ ಮಾಡುವ ಬದಲು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು ಎಂದು ಹೇಳಿದರು.


ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮಾತನಾಡಿ, ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ ಯಾವುದೇ ಬೇಧ-ಭಾವ ಇಲ್ಲ. ಈ ಎರಡೂ ಭಾಷೆಗಳ ನಡುವೆ ಸಾಮಾನ್ಯ ಲಿಪಿ ಸಿದ್ಧಗೊಳ್ಳಬೇಕು. ಈ ಸಂಬಂಧ ಎರಡೂ ರಾಜ್ಯಗಳು ಸಮಿತಿಗಳನ್ನು ರಚಿಸಿ ಈ ದಿಕ್ಕಿನಲ್ಲಿ ಆಲೋಚಿಸಬೇಕು ಎಂದು ಹೇಳಿದರು.
ಈ ರೀತಿ ಮಾಡಿದಾಗ ಸಾಹಿತ್ಯ ಮತ್ತು ಸಂಸ್ಕೃತಿ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವಿನ ಬಾಂಧವ್ಯ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಎಲ್. ನಾಗೇಶ್ವರ ರಾವ್, ಡಿಸಿಪಿ ಎಂ.ನಾರಾಯಣ, ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News