ಉಳ್ಳವರು ಬಸವಣ್ಣನ ತತ್ವಗಳಿಗೆ ವಿರುದ್ಧ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ಜು.9: ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದವರು ಹೊರತು ಉಳ್ಳವರು ಯಾರೂ ಅನುಸರಿಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಎಸ್‌ಆರ್‌ಜಿಸಿ ಕಾಲೇಜು ಸಭಾಂಗಣದಲ್ಲಿ ಬಸವೇಶ್ವರ ಸಮಿತಿ ವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನ ತತ್ವಗಳನ್ನು ಓದುತ್ತಿರುವ ನಾವು ಅವುಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಸವಣ್ಣ ಸಮಾನತೆಗಾಗಿ, ಸಮಾಜದ ಶಾಂತಿಗಾಗಿ ನೀಡಿದ ತತ್ವಗಳಿಗೆ ವಿರುದ್ಧವಾಗಿ ಇಂದು ನಾವು ನಡೆಯುತ್ತಿದ್ದೇವೆ. ಸಮ ಸಮಾಜ ಕಟ್ಟುವ ಉದ್ದೇಶದಿಂದ ಬಸವಣ್ಣ ಮೇಲು-ಕೀಳು ಎಂಬ ತಾರತಮ್ಯಗಳನ್ನು ನಾಶ ಮಾಡುವ ಪ್ರಯತ್ನ ಮಾಡಿದರು. ಆದರೆ, ಇಂದು ನಾವು ಅವರ ತತ್ವಗಳನ್ನು ಓದುತ್ತಾ, ಜಾತಿ ಲೆಕ್ಕಾಚಾರ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಭೇದ-ಭಾವ ಮಾಡುವ ಮೂಲಕ ಜಾತೀಯತೆ ಪ್ರೋತ್ಸಾಹ ನೀಡುತ್ತಿದ್ದೇವೆ. ಇಂತಹ ಮನೋಭಾವವನ್ನು ಕೈಬಿಡಬೇಕು. ತತ್ವಗಳು ಓದುವುದು ಮುಖ್ಯವಲ್ಲ. ಅದರಂತೆ ನಡೆದುಕೊಳ್ಳುವುದನ್ನು ಕಲಿಯಬೇಕು. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತರಾಗಬೇಕ್ಠು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗುರುಪರದೇಶಿ ಕೇಂದ್ರ ಮಹಾಸ್ವಾಮಿ, ಕಿದ್ವಾಯಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುರುಲಿಂಗಪ್ಪ, ಮೈಕೋ ಸಮಿತಿ ಅಧ್ಯಕ್ಷ ಪುಟ್ಟರಾಜು ಉಪಸ್ಥಿತರಿದ್ದರು. ಇದೇ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ಗೆ ಸನ್ಮಾನ ಮಾಡಲಾಯಿತು.